Advertisement

ಕೊಹ್ಲಿ-ಸ್ಮಿತ್‌ ಮತ್ತೆ ಮುಖಾಮುಖೀ !

01:38 PM Apr 16, 2017 | Harsha Rao |

- ಟೆಸ್ಟ್‌  ಸರಣಿ ವೇಳೆ ಕಾದಾಡಿದ ನಾಯಕರು !
- ಒಂದೇ ದೋಣಿಯ ಮೇಲೆ ಆರ್‌ಸಿಬಿ, ಪುಣೆ
- ಎರಡೂ ತಂಡಗಳಿಗೆ ಬೇಕಿದೆ ಗೆಲುವಿನ ಟಾನಿಕ್‌

Advertisement

ಬೆಂಗಳೂರು: ಕಳೆದ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಟೆಸ್ಟ್‌ ಸರಣಿ ವೇಳೆ ಮಾತಿನ ಕಾವಿನ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ವಿರಾಟ್‌ ಕೊಹ್ಲಿ-ಸ್ಟೀವನ್‌ ಸ್ಮಿತ್‌ ಮತ್ತೆ ಮುಖಾಮುಖೀ ಆಗಲಿದ್ದಾರೆ. ಆದರೆ ಇದು “ಡಿಫ‌ರೆಂಟ್‌ ಬಾಲ್‌ ಗೇಮ್‌’, 10ನೇ ಐಪಿಎಲ್‌ನ ಆರ್‌ಸಿಬಿ-ಪುಣೆ ನಡುವೆ ರವಿವಾರ ರಾತ್ರಿ ನಡೆಯುವ ಪಂದ್ಯ. ತಾಣ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ.

ಸದ್ಯ ಬೆಂಗಳೂರು ಮತ್ತು ಪುಣೆ ತಂಡಗಳು ಒಂದೇ ದೋಣಿಯಲ್ಲಿ ಪಯಣ ಮಾಡುತ್ತಿವೆ. ಎರಡೂ ತಂಡಗಳು 4 ಪಂದ್ಯಗಳನ್ನಾಡಿದ್ದು, ಒಂದರಲ್ಲಷ್ಟೇ ಗೆಲುವು ದಾಖಲಿಸಿವೆ. ಮೂರರಲ್ಲಿ ಲಾಗ ಹಾಕಿವೆ. ಹೋಮ್‌ ಗ್ರೌಂಡ್‌ನ‌ಲ್ಲೂ ಈ ತಂಡಗಳ ನಸೀಬು ಖರಾಬ್‌ ಆಗಿವೆ ಎಂಬುದು ಈಗಾಗಲೇ ಸಾಬೀತಾಗಿದೆ.

ಘಟಾನುಘಟಿ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಆರ್‌ಸಿಬಿ ಶುಕ್ರವಾರವಷ್ಟೇ ತವರಿನಂಗಳದಲ್ಲಿ ಮುಂಬೈ ಇಂಡಿಯನ್ಸ್‌ಗೆ 4 ವಿಕೆಟ್‌ಗಳಿಂದ ಶರಣಾಗಿದೆ. ಕ್ಯಾಪ್ಟನ್‌ ಕೊಹ್ಲಿ ಮರಳಿದರೂ ಗೆಲುವು ಮರೀಚಿಕೆಯೇ ಆಗಿ ಉಳಿಯಿತು. 

ಆರ್‌ಸಿಬಿ ಸೋಲಿಗೆ ಮುಖ್ಯ ಕಾರಣ, ರನ್‌ ಬರಗಾಲ. ಮುಂಬೈ ವಿರುದ್ಧ ಕೊಹ್ಲಿ ಬಿಟ್ಟು ತಂಡದ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳಿಗೆ ಭುಜದ ನೋವು ಎದುರಾದಂತಿತ್ತು. ಇಲ್ಲಿ ಪೇರಿಸಿದ್ದು 5ಕ್ಕೆ 142 ರನ್‌ ಮಾತ್ರ. ಇದು ಈ ಕೂಟದಲ್ಲೇ ಆರ್‌ಸಿಬಿ ಗಳಿಸಿದ ಕನಿಷ್ಠ ಮೊತ್ತ. ಇದಕ್ಕೂ ಮುನ್ನ ಪಂಜಾಬ್‌ ವಿರುದ್ಧ ಕೇವಲ 148 ರನ್‌ ಗಳಿಸಿ 8 ವಿಕೆಟ್‌ಗಳ ಸೋಲನ್ನು ಮೈಮೇಲೆ ಎಳೆದುಕೊಂಡಿತ್ತು. ಗೇಲ್‌, ಎಬಿಡಿ, ವಾಟ್ಸನ್‌, ಜಾಧವ್‌, ಮನ್‌ದೀಪ್‌, ಬಿನ್ನಿ ಮೊದಲಾದ ಬಿರುಸಿನ ಬ್ಯಾಟ್ಸ್‌ಮನ್‌ಗಳಿದ್ದೂ, ಮೊದಲು ಬ್ಯಾಟಿಂಗ್‌ ಮಾಡುವಾಗಲೂ ದೊಡ್ಡ ಸ್ಕೋರ್‌ ದಾಖಲಿಸಲು ವಿಫ‌ಲವಾಗುತ್ತಿರುವುದು ಬೆಂಗಳೂರು ತಂಡದ ದುರಂತವೇ ಸರಿ. 

Advertisement

ಆರ್‌ಸಿಬಿ ಬೌಲಿಂಗ್‌ ಕೂಡ ಘಾತಕವಾಗಿಲ್ಲ ಎಂಬುದಕ್ಕೆ ಮುಂಬೈ ವಿರುದ್ಧದ ಪಂದ್ಯವೇ ಸಾಕ್ಷಿ. ಸಾಮ್ಯುಯೆಲ್‌ ಬದ್ರಿ ಹ್ಯಾಟ್ರಿಕ್‌ ಸಾಹಸ ತೋರ್ಪಡಿಸಿ ಮುಂಬೈಯನ್ನು “4 ಕ್ಕೆ 7 ರನ್‌’ ಎಂಬ ಸ್ಥಿತಿಗೆ ತಂದು ನಿಲ್ಲಿಸಿದರೂ ಆರ್‌ಸಿಬಿಗೆ ಗೆಲುವು ಕೈಹಿಡಿಯಲೇ ಇಲ್ಲ. ಬಹುಶಃ ಆರ್‌ಸಿಬಿಗೆ ಈ ವರ್ಷವೂ ಅದೃಷ್ಟ ಕೈಕೊಡುವ ಲಕ್ಷಣ ಸ್ಪಷ್ಟವಾಗಿದೆ. ಇದು ತಪ್ಪಬೇಕಾದರೆ ರವಿವಾರದಿಂದಲೇ ಗೆಲುವಿನ ಹಾದಿ ಹಿಡಿಯಬೇಕಿದೆ.

ಗೆಲುವು ಮರೆತ ಪುಣೆ 
ಮುಂಬೈಯನ್ನು ಸೋಲಿಸುವುದರೊಂದಿಗೆ ಈ ಬಾರಿಯ ಐಪಿಎಲ್‌ ಆರಂಭಿಸಿದ ಪುಣೆಗೆ ಅನಂತರ ಗೆಲುವು ಮರೆತೇ ಹೋಗಿದೆ. ಪಂಜಾಬ್‌ ವಿರುದ್ಧ ಇಂದೋರ್‌ನಲ್ಲಿ 6 ವಿಕೆಟ್‌ ಸೋಲು, ಡೆಲ್ಲಿ ವಿರುದ್ಧ ತವರಿನಲ್ಲೇ 97 ರನ್‌ ಸೋಲು, ಗುಜರಾತ್‌ ವಿರುದ್ಧ ರಾಜ್‌ಕೋಟ್‌ನಲ್ಲಿ 7 ವಿಕೆಟ್‌ ಸೋಲು… ಇದು ಪುಣೆಯ ಪತನದ ಹಾದಿ.

ಆರ್‌ಸಿಬಿಯಂತೆ ಪುಣೆಯ ಬ್ಯಾಟಿಂಗ್‌ ಕೂಡ ನೈಜ ಸಾಮರ್ಥ್ಯ ವನ್ನು ಹೊರಗೆಡವಲು ವಿಫ‌ಲವಾಗಿದೆ. ರಹಾನೆ, ಸ್ಮಿತ್‌, ಸ್ಟೋಕ್ಸ್‌, ಧೋನಿ, ತಿವಾರಿ ನೈಜ ಸಾಮರ್ಥ್ಯದಿಂದ ಎಷ್ಟೋ ದೂರ ಉಳಿದಿದ್ದಾರೆ. ಬೌಲಿಂಗ್‌ ಕೂಡ ಘಾತಕವಾಗಿಲ್ಲ. ಇಲ್ಲಿ ಮ್ಯಾಚ್‌ ವಿನ್ನರ್‌ ಬೌಲರ್‌ಗಳೇ ಇಲ್ಲ ಎಂಬುದು ಹೆಚ್ಚು ಸೂಕ್ತ. ಒಂದು ವಿಕೆಟ್‌ ಕಿತ್ತು ಮೈದಾನವಿಡೀ ಓಡುವ ಲೆಗ್ಗಿ ಇಮ್ರಾನ್‌ ತಾಹಿರ್‌ ಈಗ ಮೊನಚು ಕಳೆದುಕೊಂಡಿದ್ದಾರೆ. ಶುಕ್ರವಾರವಷ್ಟೇ ಗುಜರಾತ್‌ ವಿರುದ್ಧ 53 ರನ್‌ ನೀಡಿ ದುಬಾರಿಯಾಗಿದ್ದನ್ನು ಮರೆಯುವಂತಿಲ್ಲ. ತಾಹಿರ್‌ ಎಸೆತಗಳಿಗೆ 8 ಫೋರ್‌, 2 ಸಿಕ್ಸರ್‌ ಸೋರಿ ಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next