ತಿರುವನಂತಪುರಂ: ವಿರಾಟ್ ಕೊಹ್ಲಿ (166*) ಮತ್ತು ವೇಗಿ ಮೊಹಮ್ಮದ್ ಸಿರಾಜ್ (4/32) ಅವರ ಅಮೋಘ ಆಟದಿಂದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 317 ರನ್‌ಗಳ ಸಾರ್ವಕಾಲಿಕ ದಾಖಲೆಯ ಅಂತರದ ಗೆಲುವು ಸಾಧಿಸಿತು. ಗೆಲುವಿನೊಂದಿಗೆ ರೋಹಿತ್ ಶರ್ಮ ಬಳಗ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಶುಭಮನ್ ಗಿಲ್ ಅವರ 116 ರನ್ ಕೊಡುಗೆ ತಂಡ ಭಾರಿ ಮೊತ್ತ ಕಲೆ ಹಾಕಲು ಕಾರಣವಾಯಿತು.
2008, ಜುಲೈ 1 ರಂದು ಅಬರ್ಡೀನ್ ನಲ್ಲಿ 403 ರನ್ ಗಳಿಸಿದ್ದ ನ್ಯೂಜಿಲ್ಯಾಂಡ್ ಐರ್ ಲ್ಯಾಂಡ್ ವಿರುದ್ಧ 290 ರನ್ ಗಳ ಅಂತರದ ಗೆಲುವು ಸಾಧಿಸಿದ ದಾಖಲೆ ಪತನವಾಗಿದೆ. ಏಕದಿನ ಕ್ರಿಕೆಟ್ ನಲ್ಲಿ ಭಾರತ ಸಾಧಿಸಿರುವ 317 ರನ್ ಗಳ ಅಂತರದ ಗೆಲುವು ಅತೀದೊಡ್ಡ ಗೆಲುವಾಗಿದೆ.
2015, ಮಾರ್ಚ್4 ರಂದು 418 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ಥಾನದ ವಿರುದ್ದ 275 ರನ್ ಗಳ ಗೆಲುವು ಸಾಧಿಸಿತ್ತು.
ಭಾರತ ತಂಡದ ಈ ಹಿಂದಿನ ಅತೀ ದೊಡ್ಡ ಅಂತರದ ಗೆಲುವು 2007 ರ ವಿಶ್ವಕಪ್ ನಲ್ಲಿ ಪೋರ್ಟ್ ಆಫ್ ಸ್ಪೇನ್ ನಲ್ಲಿ ಬರ್ಮುಡಾ ವಿರುದ್ಧ 257 ರನ್ (414) ಆಗಿತ್ತು. ಆ ಬಳಿಕ 2008, ಜೂನ್ 25 ರಂದು ಹಾಂಗ್ ಕಾಂಗ್ ವಿರುದ್ದ ಕರಾಚಿ ಯಲ್ಲಿ 375 ರನ್ ಗಳಿಸಿದ್ದ ಭಾರತ ತಂಡ 256 ರನ್ ಗಳ ಅಂತರದ ಗೆಲುವು ಸಾಧಿಸಿತ್ತು.
ಸಂಕ್ಷಿಪ್ತ ಸ್ಕೋರ್‌ಗಳು: ಭಾರತ 50 ಓವರ್‌ಗಳಲ್ಲಿ 390/5 (ವಿರಾಟ್ ಕೊಹ್ಲಿ ಔಟಾಗದೆ 166, ಶುಭಮನ್ ಗಿಲ್ 116; ಕಸುನ್ ರಜಿತಾ 2/81, ಲಹಿರು ಕುಮಾರ 2/87) ಶ್ರೀಲಂಕಾ : 73 ಆಲೌಟ್ (22 ಓವರ್)