ಹೊಸದಿಲ್ಲಿ: ಅಕ್ಟೋಬರ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾರತದ ಮೂವರ ಹೆಸರು ನಾಮ ನಿರ್ದೇಶನಗೊಂಡಿದೆ. ಇವರೆಂದರೆ ವಿರಾಟ್ ಕೊಹ್ಲಿ, ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮ.
ಇವರೊಂದಿಗೆ ಸ್ಪರ್ಧೆಯಲ್ಲಿರುವವರು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್, ಜಿಂಬಾಬ್ವೆಯ ಸಿಕಂದರ್ ರಝ ಮತ್ತು ಪಾಕಿಸ್ಥಾನದ ನಿದಾ ದಾರ್.
ವಿರಾಟ್ ಕೊಹ್ಲಿ ಹೆಸರು ಸೂಚಿಸಲು ಮುಖ್ಯ ಕಾರಣ ಅವರ ಪ್ರಚಂಡ ಫಾರ್ಮ್. ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅವರು ರನ್ ಮಳೆಯನ್ನೇ ಸುರಿಸುತ್ತಿದ್ದಾರೆ. ಬದ್ಧ ಎದುರಾಳಿ ಪಾಕಿಸ್ಥಾನ ವಿರುದ್ಧದ ಗೆಲುವಿನಲ್ಲಿ ಕೊಹ್ಲಿ ವಹಿಸಿದ ಪಾತ್ರ ಅಮೋಘವಾಗಿತ್ತು. ಹಾಗೆಯೇ ಡೇವಿಡ್ ಮಿಲ್ಲರ್ ಭಾರತದೆದುರಿನ ಗೆಲುವಿನ ಹೀರೋ ಆಗಿ ಮೂಡಿಬಂದಿದ್ದರು. ಸಿಕಂದರ್ ರಝ ಈಗಾಗಲೇ ಆಗಸ್ಟ್‌ನಲ್ಲಿ ಈ ಪ್ರಶಸ್ತಿಗೆ ಪಾತ್ರರಾಗಿದ್ದರೂ ಟಿ20 ವಿಶ್ವಕಪ್‌ನ ಆರಂಭಿಕ ಹಂತದಲ್ಲಿ ಪಂದ್ಯಶ್ರೇಷ್ಠ ಗೌರವದೊಂದಿಗೆ ಗುರುತಿಸಿಕೊಂಡಿದ್ದರು.
ಏಷ್ಯಾ ಕಪ್ ತಾರೆಗಳು :
ವನಿತಾ ವಿಭಾಗದಲ್ಲಿ ನಾಮ ನಿರ್ದೇಶನಗೊಂಡ ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ ಇಬ್ಬರೂ ಕಳೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಜೆಮಿಮಾ ಈ ಕೂಟದಲ್ಲೇ ಅತ್ಯಧಿಕ ರನ್ ಹೊಡೆದರೆ, ದೀಪ್ತಿ ಶರ್ಮ ಅತ್ಯಧಿಕ ವಿಕೆಟ್‌ಗಳ ಜಂಟಿ ಸಾಧನೆಗೈದಿದ್ದರು. ನಿದಾ ದಾರ್ ಪಾಕಿಸ್ಥಾನದ ಏಷ್ಯಾ ಕಪ್ ಸೆಮಿಫೈನಲ್ ಪ್ರವೇಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.