Advertisement

ಅಸಾಮಾನ್ಯ ಆಟಗಾರ ಕ್ರಿಕೆಟ್‌ ದೇವರಾಗುವ ಹಾದಿಯಲ್ಲಿ ಕೊಹ್ಲಿ

06:00 AM Oct 26, 2018 | Team Udayavani |

ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ಕೊಹ್ಲಿಗೆ 30 ವರ್ಷ ಭರ್ತಿಯಾಗಲಿದೆ. ಕ್ರಿಕೆಟ್‌ನಲ್ಲಿನ ಈಗಿನ ಸ್ಪರ್ಧೆ, ಗುಣಮಟ್ಟ ವೇಗವನ್ನು ನೋಡಿದರೆ ಕೊಹ್ಲಿಗೆ ಕನಿಷ್ಠ ಇನ್ನೂ ಏಳೆಂಟು ವರ್ಷ ಸಮಯವಿದೆ. ಇಷ್ಟರಲ್ಲಿ ಅವರು ಮಾಡಲಿರುವ ದಾಖಲೆಗಳನ್ನು, ಸೃಷ್ಟಿಸಲಿರುವ ಹೆಜ್ಜೆಗುರುತುಗಳನ್ನು ಕಲ್ಪಿಸಿಕೊಂಡರೆ ಅದ್ಭುತವೆನಿಸುತ್ತದೆ. ಇದುವರೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿರುವುದು 387 ಇನಿಂಗ್ಸ್‌, ಅದರಲ್ಲಿ 61 ಶತಕಗಳು ಬಂದಿವೆ.

Advertisement

ಸಚಿನ್‌ ತೆಂಡುಲ್ಕರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 60ನೇ ಶತಕ ಬಾರಿಸುವಾಗ ಆಗಲೇ 426 ಇನಿಂಗ್ಸ್‌ ಆಡಿದ್ದರು! ಹೀಗೆಯೇ ಕೊಹ್ಲಿ ಮುನ್ನುಗ್ಗುತ್ತಲೇ ಸಾಗಿದರೆ ಕನಿಷ್ಠ 150 ಶತಕಗಳನ್ನು ಬಾರಿಸುವುದಂತೂ ಖಾತ್ರಿ. ಅಲ್ಲಿಗೆ ಸಚಿನ್‌ ನಂತರ ಕ್ರಿಕೆಟ್‌ ಜಗತ್ತಿನಲ್ಲಿ ಇನ್ನೊಬ್ಬ ದೇವರು ಸೃಷ್ಟಿಯಾಗುವುದಕ್ಕೆ ಭಾರತದಲ್ಲೇ ವೇದಿಕೆ ಸಿದ್ಧವಾದಂತಾಗುತ್ತದೆ. 

ಸಮಕಾಲೀನ ಕ್ರಿಕೆಟ್‌ನಲ್ಲಿ ಕೊಹ್ಲಿಯಷ್ಟೇ ಪ್ರತಿಭಾವಂತ ಆಟಗಾರರಿದ್ದಾರೆ. ಆಸ್ಟ್ರೇಲಿಯದಲ್ಲಿ ಸ್ಟೀವ್‌ ಸ್ಮಿತ್‌, ಇಂಗ್ಲೆಂಡ್‌ನ‌ಲ್ಲಿ ಜೋ ರೂಟ್‌, ನ್ಯೂಜಿಲೆಂಡ್‌ನ‌ಲ್ಲಿ ಕೇನ್‌ ವಿಲಿಯಮ್ಸನ್‌…ಇವರೆಲ್ಲ ಅಸಾಮಾನ್ಯ ಪ್ರತಿಭಾವಂತರೇ. ಆದರೂ ಇವರಿಗೆ ಕೊಹ್ಲಿಯ ಮಟ್ಟದಲ್ಲಿ ಮೂರೂ ಮಾದರಿಯಲ್ಲಿ ಮಿಂಚಲು ಆಗುತ್ತಿಲ್ಲ. ಸ್ಮಿತ್‌ (ಸದ್ಯ ನಿಷೇಧದಲ್ಲಿದ್ದಾರೆ) ಒಟ್ಟಾರೆ 31, ವಿಲಿಯಮ್ಸನ್‌ 29, ಜೋ ರೂಟ್‌ 27 ಶತಕ ಮಾತ್ರ ಬಾರಿಸಿದ್ದಾರೆ. ಈ ಮೂವರಿಗೆ ಹೋಲಿಸಿದರೆ ಶತಕದ ಲೆಕ್ಕಾಚಾರದಲ್ಲಿ ಕೊಹ್ಲಿ ದುಪ್ಪಟ್ಟು ವೇಗದಲ್ಲಿದ್ದಾರೆ. ಅವರ ಬ್ಯಾಟಿಂಗ್‌ನ ವಿಶೇಷವೆಂದರೆ ಚೆಂಡನ್ನು ಎದುರಿಸಿ, ರನ್‌ ಗಳಿಸುವ ರೀತಿ ಬಹಳ ಸಲೀಸು. 

ಕ್ರಿಕೆಟನ್ನು ಇಷ್ಟು ಆರಾಮವಾಗಿ ಆಡಬಹುದಾ ಎಂಬ ಉದ್ಗಾರ ಕೇಳಿ ಬರುವಂತೆ ಅವರು ಬೌಂಡರಿ, ಸಿಕ್ಸರ್‌ ಬಾರಿಸುತ್ತಾರೆ. ಗೇಲ್‌, ಯುವರಾಜ್‌ ಸಿಂಗ್‌, ಡಿವಿಲಿಯರ್ಸ್‌ರಂತೆ ಇವರು ಬಹಳ ದೂರಕ್ಕೆ ಚೆಂಡನ್ನು ಬಡಿದಟ್ಟುವುದಿಲ್ಲ. ಅದಕ್ಕಾಗಿ ವಿಪರೀತ ಶಕ್ತಿಯನ್ನೂ ವಿನಿಯೋಗಿಸುವುದಿಲ್ಲ. ಆದರೆ ಸತತವಾಗಿ ಅಗತ್ಯಕ್ಕೆ ತಕ್ಕಂತೆ ರನ್‌ಗಳಿಸುತ್ತಾರೆ. ಟೆಸ್ಟ್‌ಗೆ ಬಂದಾಗ ಅದಕ್ಕೆ ತಕ್ಕಂತೆ ನಿಧಾನವನ್ನು, ಟಿ20ಯಲ್ಲಿ ಅದಕ್ಕೆ ತಕ್ಕಂತೆ ಸ್ಫೋಟಕತೆಯನ್ನು, ಏಕದಿನದಲ್ಲಿ ವೇಗದಲ್ಲಿ ಸಮತೋಲನವನ್ನು ಸಾಧಿಸುತ್ತಾರೆ. ಮೂರೂ ಮಾದರಿಯ ಆಟದಲ್ಲಿ ಹೀಗೊಂದು ಸಮತೋಲನ ಸಾಧಿಸುವುದಕ್ಕೆ ಅಸಾಮಾನ್ಯ ಪ್ರತಿಭೆ ಬೇಕಾಗುತ್ತದೆ. 

ಅವರ ಸಾಧನೆಯಲ್ಲಿ ಇದುವರೆಗೆ ಕಾಣುವ ಏಕೈಕ ಕೊರತೆ ಟಿ 20ಯಲ್ಲಿ ಇನ್ನೂ ಒಂದು ಶತಕ ಬಾರಿಸಿಲ್ಲ. ಆದರೂ ಈ ಮಾದರಿಯಲ್ಲಿ ಬಹಳ ಹಿಂದೆಯೇ ವಿಶ್ವ ನಂ.1 ಎನಿಸಿಕೊಂಡಿದ್ದರು (ಸದ್ಯ ಕೆಳಕ್ರಮಾಂಕದಲ್ಲಿದ್ದಾರೆ). ವಿಶ್ವದ ಯಾವುದೇ ಶ್ರೇಷ್ಠ ಕ್ರಿಕೆಟಿಗನನ್ನು ಸಚಿನ್‌ ತೆಂಡುಲ್ಕರ್‌ಗೆ ಹೋಲಿಸುವುದು ಸಾಮಾನ್ಯ. ಸಚಿನ್‌ ಭಾರತ ತಂಡ ಅತ್ಯಂತ ಸಂಕಷ್ಟದಲ್ಲಿದ್ದಾಗ ಏಕಾಂಗಿಯಾಗಿ ತಂಡಕ್ಕಾಗಿ ಶ್ರಮಿಸಿದ ಬ್ಯಾಟ್ಸ್‌ಮನ್‌. ಅವರ ಮೇಲೆ ಬಹಳ ಒತ್ತಡವಿದ್ದಿದ್ದರಿಂದ ಕನಿಷ್ಠ 20 ಶತಕವನ್ನು 95ರಿಂದ 100ರೊಳಗೆ ಔಟಾಗಿ ತಪ್ಪಿಸಿಕೊಂಡಿದ್ದಾರೆ. ಕೊಹ್ಲಿಗೆ ಇಂತಹ ಒತ್ತಡವಿಲ್ಲ. ವಿದೇಶದ ವೇಗದ ಅಂಕಣಗಳಿಗೆ ಹೊಂದಿಕೊಂಡಿರುವ ಬ್ಯಾಟ್ಸ್‌ಮನ್‌/ಬೌಲರ್‌ಗಳಿದ್ದಾರೆ. ಇದು ನಾಯಕತ್ವದ ಭಾರವನ್ನು ಕುಗ್ಗಿಸಿದೆ. 

Advertisement

ಇದು ಅವರು ನಾಯಕನಾಗಿದ್ದುಕೊಂಡೂ ಬ್ಯಾಟಿಂಗ್‌ನಲ್ಲಿ ಮೈಲುಗಲ್ಲು ಸ್ಥಾಪಿಸುವುದಕ್ಕೆ ನೆರವಾಗುವ ಅಂಶಗಳು. ಎಲ್ಲವೂ ಕೊಹ್ಲಿಗೆ ಪೂರಕವಾಗಿಯೇ ಇರುವ ಸಂಗತಿಗಳನ್ನು ಪರಿಗಣಿಸಿದರೆ ಅವರು ಸ್ಥಾಪಿಸುವ ಮೈಲುಗಲ್ಲುಗಳು ಬಹಳ ಆಳಕ್ಕೆ ಇಳಿಯುವುದು ಖಚಿತ.
 
ನಾಯಕನಾಗಿಯೂ ಕೊಹ್ಲಿ ವಿಫ‌ಲ ವ್ಯಕ್ತಿಯೇನಲ್ಲ. ಇಂಗ್ಲೆಂಡ್‌ನ‌ಲ್ಲಿ ನಡೆದ ಏಕದಿನ ಚಾಂಪಿಯನ್ಸ್‌ ಟ್ರೋಫಿಯಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದು, ದ.ಆಫ್ರಿಕಾದಲ್ಲಿ ಏಕದಿನ, ಟಿ20 ಸರಣಿಯನ್ನು ಭರ್ಜರಿಯಾಗಿ ಗೆದ್ದಿದ್ದು, ಟೆಸ್ಟ್‌ನಲ್ಲಿ ತಂಡ ವಿಶ್ವ ನಂ.1 ಸ್ಥಾನದಿಂದ ಕೆಳಗಿಳಿಯದಂತೆ ನೋಡಿಕೊಂಡಿದ್ದು ಎಲ್ಲವೂ ಅವರ ನಾಯಕತ್ವದ ಗುಣಗಳಿಗೆ ಸಾಕ್ಷಿ. ನಾಯಕನಾಗಿ ದ.ಆಫ್ರಿಕಾ, ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ವಿಫ‌ಲರಾಗಿದ್ದೊಂದೇ ಅವರ ಯಶಸ್ಸಿನ ಹಾದಿಯಲ್ಲಿ ಕಾಣಿಸಿರುವ ಕಪ್ಪುಚುಕ್ಕೆಗಳು. ಇದನ್ನು ಮರೆತರೆ ಅವರು ಈಗಾಗಲೇ ದಂತಕಥೆಗಳ ಸಾಲಿಗೆ ಸೇರಿಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next