ಕೊಹ್ಲಿ ಮತ್ತು ಕುಂಬ್ಳೆ ವಿರಸದ ಹಿಂದೆ ಹಿರಿಯ ಕ್ರಿಕೆಟಿಗರೊಬ್ಬರ ಕೈವಾಡವಿದೆ ಎನ್ನುವ ಗುಮಾನಿಯೂ ಇದೆ. ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ತಿಕ್ಕಾಟಕ್ಕೆ ತುಪ್ಪ ಸುರಿದಿದ್ದಾರೆ ಎನ್ನಲಾಗುತ್ತಿದೆ.
ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡುವುದರೊಂದಿಗೆ ಕಳೆದ ಕೆಲ ಸಮಯದಿಂದ ಕ್ಯಾಪ್ಟನ್ ಮತ್ತು ಕೋಚ್ ನಡುವೆ ನಡೆಯುತ್ತಿದ್ದ ಶೀತಲ ಸಂಘರ್ಷ ಒಂದು ಹಂತದ ಮಟ್ಟಿಗೆ ಶಮನ ಗೊಂಡಂತಾಗಿದೆ. ಕೊಹ್ಲಿ ವರ್ಸಸ್ ಕುಂಬ್ಳೆ ಜಟಾಪಟಿಯಿಂದಾಗಿ ದೇಶದ ಕ್ರಿಕೆಟ್ ಅಭಿಮಾನಿಗಳೂ ಕೂಡ ಈ ಇಬ್ಬರು ಮೇರು ಕ್ರಿಕೆಟ್ ಪ್ರತಿಭೆಗಳ ನಡುವೆ ಇಬ್ಭಾಗವಾಗಿದ್ದಾರೆ.
ಸುಮಾರು ಆರು ತಿಂಗಳಿಂದಲೇ ಕುಂಬ್ಳೆ ಕೊಹ್ಲಿ ನಡುವೆ ಮಾತುಕತೆ ಇರಲಿಲ್ಲ ಎನ್ನುತ್ತಿವೆ ಕೆಲವು ಮೂಲಗಳು. ಇದು ನಿಜವೇ ಆಗಿದ್ದರೆ ಸಮಸ್ಯೆಯನ್ನು ಇಷ್ಟರ ತನಕ ಬೆಳೆಯಲು ಬಿಟ್ಟದ್ದೇ ತಪ್ಪು. ತಂಡದ ನಾಯಕ ಮತ್ತು ಕೋಚ್ ಪರಸ್ಪರ ಮಾತುಕತೆ, ಚರ್ಚೆ ನಡೆಸದೆ ತಂಡವನ್ನು ಮುನ್ನಡೆಸಿದ್ದಾದರೂ ಹೇಗೆ? ಈ ಸಂದರ್ಭದಲ್ಲಿ ತಂಡ ಉತ್ತಮ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎಂಬೆಲ್ಲ ಅನುಮಾನಗಳು ಮೂಡುತ್ತವೆ. ಆಟಗಾರನಾಗಿಯಷ್ಟೇ ಅಲ್ಲ, ಕೋಚ್ ಆಗಿಯೂ ಕುಂಬ್ಳೆ ಸಾಧನೆ ಚೆನ್ನಾಗಿದೆ. 17 ಟೆಸ್ಟ್‌ಗಳ ಪೈಕಿ 12ರಲ್ಲಿ ಕೊಹ್ಲಿ ಪಡೆ ಗೆದ್ದಿದೆ. ಈ ಅವಧಿಯಲ್ಲಿ ಯಾವ ಟೆಸ್ಟ್ ಸರಣಿಯನ್ನೂ ಸೋತಿಲ್ಲ ಎನ್ನುವುದು ಇನ್ನೊಂದು ಹಿರಿಮೆ.
ಒನ್‌ಡೇಯಲ್ಲೂ ಐಸಿಸಿ ಕೂಟದಲ್ಲಿ ಫೈನಲ್ ತನಕ ತಂಡವನ್ನು ತಲುಪಿಸಿದ್ದಾರೆ. ತಂಡಕ್ಕಾಗಿ ಆಡುತ್ತಿದ್ದಾಗ ಶಿಸ್ತಿಗೆ ಬಹಳ ಪ್ರಾಮುಖ್ಯ ನೀಡುತ್ತಿದ್ದರು ಮತ್ತು ಎಂತಹ ವಿಷಮ ಸ್ಥಿತಿಯಲ್ಲೂ ತಂಡಕ್ಕಾಗಿ ನಿಸ್ವಾರ್ಥ ಸೇವೆ ನೀಡಿದ್ದಾರೆ. ಅವರು ತಲೆಗೆ ಬ್ಯಾಂಡೇಜು ಸುತ್ತಿಕೊಂಡು ಬೌಲಿಂಗ್ ಮಾಡಿದ ಚಿತ್ರ ಕ್ರಿಕೆಟ್ ಅಭಿಮಾನಿಗಳ ಮನಪಟಲದಲ್ಲಿ ಸ್ಥಿರವಾಗಿ ನಿಂತಿದೆ. ಕ್ರಿಕೆಟ್ ಮತ್ತು ತಂಡಕ್ಕೆ ಕುಂಬ್ಳೆ ಹೊಂದಿದ್ದ ಬದ್ಧತೆಯನ್ನು ಇದು ತೋರಿಸುತ್ತದೆ. ಪರಿಪೂರ್ಣ ಆಟಗಾರ ಎಂದು ಖ್ಯಾತರಾಗಿದ್ದ ಕುಂಬ್ಳೆ ಕೋಚ್ ಆಗಿಯೂ ಇದೇ ಪರಿಪೂರ್ಣತೆಯನ್ನು ತಂಡದಿಂದ ಬಯಸಿದ್ದು ಅವರ ಹಾದಿಗೆ ಮುಳ್ಳಾಯಿತೆ?
ಕುಂಬ್ಳೆ ಅತಿಯಾದ ಶಿಸ್ತು ಹೇರುತ್ತಿದ್ದರು ಎನ್ನುವುದು ಅವರ ವಿರುದ್ಧ ಪ್ರಮುಖವಾಗಿ ಕೇಳಿ ಬಂದಿರುವ ಆರೋಪ. ನಮ್ಮನ್ನು ಕ್ಲಬ್ ಕ್ರಿಕೆಟ್ ಆಟಗಾರರಂತೆ ಕಾಣುತ್ತಿದ್ದರು ಎನ್ನುವುದು ಕೊಹ್ಲಿ ಪಡೆಯ ದೂರು. ತಂಡದಲ್ಲಿ ಶಿಸ್ತು ಇರಬೇಕೆನ್ನುವುದು ಪ್ರತಿಯೊಬ್ಬ ಕೋಚ್ ಬಯಸುವುದು ಸಹಜ. ಇದಕ್ಕಾಗಿ ಕೆಲವೊಂದು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸುತ್ತಾರೆ. ಸುಮಾರು ಒಂದೂವರೆ ದಶಕದಷ್ಟು ದೀರ್ಘ ಅವಧಿ ಕ್ರಿಕೆಟ್ ಆಡಿರುವ ಕುಂಬ್ಳೆಗೆ ತಂಡವನ್ನು ಹೇಗೆ ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕೆಂದು ಯಾರೂ ಕಲಿಸಿಕೊಡುವ ಅಗತ್ಯವಿಲ್ಲ. ಆದರೆ ಸದಾ ಮೋಜುಮಸ್ತಿ ಬಯಸುವ ಹೊಸ ಪೀಳಿಗೆಯ ಕ್ರಿಕೆಟಿಗರಿಗೆ ಈ ರೀತಿಯ ಲಗಾಮು ಇಷ್ಟವಾಗಲಿಲ್ಲ ಎಂದು ಕಾಣುತ್ತದೆ. ಹೀಗಾಗಿಯೇ ತಂಡದ ಸುಮಾರು 10 ಮಂದಿ ಆಟಗಾರರು ಕುಂಬ್ಳೆ ವಿರುದ್ಧ ದೂರು ನೀಡಿದ್ದಾರೆ. ಇಡೀ ತಂಡವೇ ತನ್ನ ವಿರುದ್ಧ ತಿರುಗಿ ಬಿದ್ದಿದೆ ಎಂದು ಅರಿವಾದ ಬಳಿಕವೂ ಕೋಚ್ ಆಗಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ಅರಿವಾಗಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಇದು ಒಂದು ಕಾರಣವಾದರೆ ಕೊಹ್ಲಿ ಮತ್ತು ಕುಂಬ್ಳೆ ವಿರಸದ ಹಿಂದೆ ಹಿರಿಯ ಕ್ರಿಕೆಟಿಗರೊಬ್ಬರ ಕೈವಾಡವಿದೆ ಎನ್ನುವ ಗುಮಾನಿಯೂ ಇದೆ.
ಸದಾ ರಾಷ್ಟ್ರೀಯ ಕ್ರಿಕೆಟ್ ತಂಡದ ಜತೆಗೆ ಒಂದಿಲ್ಲೊಂದು ಒಂದು ರೀತಿಯ ಸಂಬಂಧ ಇಟ್ಟುಕೊಂಡಿರುವ ಈ ಹಿರಿಯ ಆಟಗಾರ ಪೂರ್ಣಾವಧಿ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ತಿಕ್ಕಾಟಕ್ಕೆ ತುಪ್ಪ ಸುರಿದಿದ್ದಾರೆ ಎನ್ನಲಾಗುತ್ತಿದೆ. ಇಂತಹ ಕ್ಷುಲ್ಲಕ ರಾಜಕೀಯ ಪ್ರತಿಯೊಂದು ಕಾಲಘಟ್ಟದಲ್ಲೂ ಭಾರತದ ಕ್ರಿಕೆಟನ್ನು ಕಾಡುತ್ತಲೇ ಇದೆ.
ಬಿಸಿಸಿಐಯಲ್ಲಿ ಸಮರ್ಥವಾದ ಕ್ರಿಕೆಟ್ ಆಡಳಿತ ವ್ಯವಸ್ಥೆ ಇದ್ದಿದ್ದರೆ ಕೋಚ್ ಮತ್ತು ಕ್ಯಾಪ್ಟನ್ ನಡುವಿನ ವಿರಸವನ್ನು ಬಗೆಹರಿಸುವುದು ಮಹಾನ್ ಕೆಲಸವಾಗಿರಲಿಲ್ಲ. ಬಿಸಿಸಿಐ ತಾನೇ ಮಾಡಿರುವ ಕರ್ಮಕಾಂಡಗಳಿಂದಾಗಿ ಅಸ್ತಿತ್ವ ಕಳೆದುಕೊಂಡಿದೆ. ಈಗ ಇರುವುದು ಸೌರವ್, ಸಚಿನ್ ಮತ್ತು ಲಕ್ಷ್ಮಣ್ ಅವರನ್ನೊಳಗೊಂಡಿರುವ ಸಲಹಾ ಸಮಿತಿ ಮತ್ತು ಮಾಜಿ ಮಹಾಲೇಖಪಾಲ ವಿನೋದ್ ರಾಯ್ ನೇತೃತ್ವದ ಆಡಳಿತ ಸಮಿತಿ. ಈ ಎರಡೂ ಸಮಿತಿಗಳಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲ. ಏನಿದ್ದರೂ ಸುಪ್ರೀಂ ಕೋರ್ಟ್‌ಗೆ ಹೋಗಿ ವಿಚಾರಣೆ ನಡೆದು ಇತ್ಯರ್ಥವಾಗಬೇಕು. ಈ ಪರಿಸ್ಥಿತಿಯಲ್ಲಿ ಕುಂಬ್ಳೆ ಎಂದಲ್ಲ. ಬೇರೆ ಯಾರೇ ಆಗಿದ್ದರೂ ಇದೇ ನಿರ್ಧಾರವನ್ನಷ್ಟೆ ಕೈಗೊಳ್ಳಲು ಸಾಧ್ಯವಿತ್ತು.