ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ಕಳೆದ ವರ್ಷಾಂತ್ಯವೇ ತೊರೆದಿದ್ದಾರೆ. ಹಾಗಂತ ಜಾಹೀರಾತು ಮೌಲ್ಯದಲ್ಲಿ ಅವರ ಅಗ್ರಸ್ಥಾನಕ್ಕೇನು ಧಕ್ಕೆಯಾಗಿಲ್ಲ!
ಈಗಲೂ ಅವರ ಮೌಲ್ಯ 186 ಮಿಲಿಯನ್ ಡಾಲರ್‌ಗಳು (1406 ಕೋಟಿ ರೂ.ಗಳು). ಸತತ ಐದು ವರ್ಷಗಳಿಂದ ಅವರೇ ಭಾರತದ ಬಹುಬೇಡಿಕೆಯ ಜಾಹೀರಾತು ರಾಯಭಾರಿ.
ಆದರೆ 2020ಕ್ಕೆ ಹೋಲಿಸಿದರೆ ಅವರ ಜಾಹೀರಾತು ಮೌಲ್ಯದಲ್ಲಿ ತೀವ್ರ ಕುಸಿತವಾಗಿದೆ.
ಆಗ 238 ಮಿ. ಡಾಲರ್‌ಗಳಿದ್ದಿದ್ದು, 2021ರಲ್ಲಿ 186 ಮಿ. ಡಾಲರ್‌ಗಳಾಗಿದೆ. ಇದಕ್ಕೆ ನಾಯಕತ್ವ ಬಿಟ್ಟಿದ್ದು ಒಂದು ಕಾರಣವಾದರೆ, ಅವರ ಬ್ಯಾಟಿಂಗ್‌ನಲ್ಲೂ ಕುಸಿತವಾಗಿದ್ದು ಇನ್ನೊಂದು ಕಾರಣ. ಕಳೆದೆರಡು ವರ್ಷಗಳಿಂದ ಅವರು ಶತಕವೇ ಗಳಿಸಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇಲ್ಲಿ ಇನ್ನೊಂದು ವಿಶೇಷವಿದೆ.
ಭಾರತ ಕ್ರಿಕೆಟ್‌ನ ದಂತಕಥೆ, ಮಾಜಿ ನಾಯಕ ಎಂ.ಎಸ್.ಧೋನಿ ಜಾಹೀರಾತು 61 ಮಿ.ಡಾಲರ್‌ಗೆ ಏರಿಕೆಯಾಗಿದೆ. ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ತ್ಯಜಿಸಿಯಾಗಿದೆ.
ಇದನ್ನೂ ಓದಿ:ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆ ಗೆಲುವು
ಇತ್ತೀಚೆಗೆ ಚೆನ್ನೈ ಕಿಂಗ್ಸ್ ಐಪಿಎಲ್ ತಂಡದ ನಾಯಕತ್ವವನ್ನೂ ತ್ಯಜಿಸಿದ್ದಾರೆ. ಬಹುಶಃ ಅವರು ಮುಂದಿನ ವರ್ಷ ಐಪಿಎಲ್‌ನಿಂದಲೂ ನಿವೃತ್ತರಾಗಬಹುದು. ಹಾಗಿದ್ದರೂ ಅವರ ಮೌಲ್ಯ ಏರಿಕೆಗೆ ಕಾರಣವೇನು ಎಂಬುದು ಪ್ರಶ್ನೆ. ಏನೇ ಇದ್ದರೂ, ಧೋನಿ ಮೇಲಿನ ಜನರ ಪ್ರೀತಿ ಕಡಿಮೆಯಾಗಿಲ್ಲ ಎನ್ನುವುದು ಅಷ್ಟೇ ಸತ್ಯ.