ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಕ್ರವಾರ 10ನೇ ಐಪಿಎಲ್‌ನಲ್ಲಿ ಆಡಲಿಳಿದು ಆರ್‌ಸಿಬಿಯನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಆಗಮನದಿಂದ ಸಹಜವಾಗಿಯೇ ಬೆಂಗಳೂರು ತಂಡದ ಅಭಿಮಾನಿಗಳು ಹೆಚ್ಚು ಖುಷಿಯಲ್ಲಿದ್ದಾರೆ. ಈ ಯುಗಾದಿ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದ್ದು, ಆರ್‌ಸಿಬಿ ತವರಿನ ಲಾಭವನ್ನೆತ್ತಿ ಸಿಹಿ ಹಂಚೀತೆಂಬ ನಿರೀಕ್ಷೆ ಎಲ್ಲರದು. ಶೇನ್ ವಾಟ್ಸನ್ ನಾಯಕತ್ವದಲ್ಲಿ ಈವರೆಗೆ 3 ಪಂದ್ಯಗಳನ್ನಾಡಿರುವ ಆರ್‌ಸಿಬಿ ಜಯ ಸಾಧಿಸಿದ್ದು ಒಂದರಲ್ಲಿ ಮಾತ್ರ. ಅದು ಡೆಲ್ಲಿ ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಮೇಲಾಟವಾಗಿತ್ತು. ಗೆಲುವಿನ ಅಂತರ 15 ರನ್. ಇದು ಆರ್‌ಸಿಬಿಯ ಏಕೈಕ ತವರು ಪಂದ್ಯವಾಗಿತ್ತು. ಇದರ ಹಿಂದಿನ-ಮುಂದಿನ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಲಾಗ ಹಾಕಿತ್ತು. ಆರಂಭದಲ್ಲಿ ಹೈದರಾಬಾದ್ ವಿರುದ್ಧ 35 ರನ್ನುಗಳಿಂದ ಸೋತರೆ, ಕೊನೆಯ ಪಂದ್ಯದಲ್ಲಿ ಪಂಜಾಬ್‌ಗೆ 8 ವಿಕೆಟ್‌ಗಳಿಂದ ಶರಣಾಗಿತ್ತು.
ಕೊಹ್ಲಿ ಫಾರ್ಮ್ ಹೇಗಿದ್ದೀತು?
ವಿರಾಟ್ ಕೊಹ್ಲಿ ಆಗಮನದಿಂದ ಸಹಜವಾಗಿಯೇ ಆರ್‌ಸಿಬಿಗೆ ಆನೆಬಲ ಬಂದಿದೆ. ಆದರೆ ಅವರ ಫಾರ್ಮ್ ಹೇಗಿದೆ ಎಂಬ ಆತಂಕ ಇದ್ದೇ ಇದೆ. ಕಳೆದ ವರ್ಷ 16 ಐಪಿಎಲ್ ಪಂದ್ಯಗಳಿಂದ 973 ರನ್ ಸೂರೆಗೈದು, ತಂಡವನ್ನು ಫೈನಲ್ ತನಕ ಮುನ್ನಡೆಸಿದ ಹೆಗ್ಗಳಿಕೆ ಕೊಹ್ಲಿ ಅವರದಾಗಿತ್ತು. ಆದರೆ ಮೊನ್ನೆ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬ್ಯಾಟ್ ಸಣ್ಣ ಮಟ್ಟದ ಮುಷ್ಕರ ಹೂಡಿತ್ತು. ಜತೆಗೆ ಭುಜಕ್ಕೆ ಏಟು ಕೂಡ ಬಿತ್ತು. ಇದರಿಂದ ಧರ್ಮಶಾಲಾ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಯಿತು. ಏನೇ ಇದ್ದರೂ, ಆರ್‌ಸಿಬಿ ಯಶಸ್ಸು ಕೊಹ್ಲಿ ಬ್ಯಾಟಿಂಗನ್ನು ಅವಲಂಬಿಸಿರುವುದು ಸುಳ್ಳಲ್ಲ. ಕಳೆದ ಪಂದ್ಯದಲ್ಲಿ ತಂಡದ ಮತ್ತೂಬ್ಬ ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಏಕಾಂಗಿಯಾಗಿ ಹೋರಾಡಿ 89 ರನ್ ಸಿಡಿಸಿದ್ದಾರೆ. ಇದು ಎದುರಾಳಿಗಳ ಪಾಲಿಗೆ ಅಪಾಯದ ಸಂಕೇತ. ಕೇದಾರ್ ಜಾಧವ್ ಆರ್‌ಸಿಬಿಯ ಮತ್ತೂಬ್ಬ ಪ್ರಮುಖ ಬ್ಯಾಟ್ಸ್‌ಮನ್. ಡೆಲ್ಲಿ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದರು.
ವಿರಾಟ್ ಕೊಹ್ಲಿ ಕಳೆದ ವರ್ಷದಂತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆದರೆ ಮತ್ತೂಬ್ಬ ಆರಂಭಕಾರ ಕ್ರಿಸ್ ಗೇಲ್ ಸಿಡಿಯದಿರುವುದು ಬೆಂಗಳೂರು ಪಾಲಿಗೆ ಚಿಂತೆಯ ಸಂಗತಿ. ಪಂಜಾಬ್ ವಿರುದ್ಧ ಗೇಲ್ ಆವರನ್ನು ಕೈಬಿಡಲಾಗಿತ್ತು. ವಾಟ್ಸನ್-ವಿಷ್ಣು ವಿನೋದ್ ಆರಂಭಿಕರಾಗಿ ಘೋರ ವೈಫಲ್ಯ ಅನುಭವಿಸಿದ್ದರು. ಮುಂಬೈ ವಿರುದ್ಧ ತಂಡದ ಒಟ್ಟು ಸ್ವರೂಪದಲ್ಲಿ ಸಕಾರಾತ್ಮಕ ಬದಲಾವಣೆಯಾಗಲಿದ್ದು, ಇದು ಹೆಚ್ಚು ಪರಿಪೂರ್ಣವಾಗಿರುತ್ತದೆಂಬ ನಂಬಿಕೆ ಇದೆ. ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಸೀಮರ್ ಸ್ಟಾನ್‌ಲೇಕ್, ಸ್ಪಿನ್ನರ್‌ಗಳಾದ ಚಾಹಲ್, ನೇಗಿ ಹೆಚ್ಚು ಪರಿಣಾಮಕಾರಿ ಎನಿಸಿದ್ದಾರೆ. ಆದರೆ ಪ್ರಧಾನ ವೇಗಿ ಮಿಲ್ಸ್ ಅಪಾಯಕಾರಿಯಾಗಿ ಗೋಚರಿಸುವುದು ಮುಖ್ಯ.
ಅಪಾಯಕಾರಿ ಮುಂಬೈ
ಕಳೆದ ಪಂದ್ಯದಲ್ಲಿ ಹೈದರಾಬಾದ್‌ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್, ಒಟ್ಟು 3 ಪಂದ್ಯಗಳಿಂದ 2 ಜಯ ಸಾಧಿಸಿದೆ. ಈ ಎರಡೂ ಗೆಲುವು ಒಲಿದದ್ದು ತವರಿನ ವಾಂಖೇಡೆ ಸ್ಟೇಡಿಯಂನಲ್ಲಿ. ಸೋಲು ಪುಣೆಯಲ್ಲಿ ಎದುರಾಗಿತ್ತು. ನಿತೀಶ್ ರಾಣ, ಮಾಲಿಂಗ, ಬುಮ್ರಾ, ಪಾಂಡ್ಯಾಸ್, ಭಜ್ಜಿ, ಪೊಲಾರ್ಡ್, ಬಟ್ಲರ್, ಪಾರ್ಥಿವ್, ರೋಹಿತ್ ಅವರನ್ನೊಳಗೊಂಡ ಮುಂಬೈ ಸಶಕ್ತ ಹಾಗೂ ಅಪಾಯಕಾರಿ ಎಂಬುದನ್ನು ಆರ್‌ಸಿಬಿ ಎಚ್ಚರಿಕೆಯಿಂದ ಗಮನಿಸಬೇಕು.