ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ ಇಂದು ಅಂತ್ಯವಾಗಿದೆ. ಎರಡನೇ ಪಂದ್ಯವನ್ನು 372 ರನ್ ಅಂತರದಿಂದ ಗೆದ್ದ ಭಾರತ ತಂಡ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ. ಇದು ಭಾರತ ತಂಡದ ತವರಿನಲ್ಲಿ ಸತತ 14ನೇ ಟೆಸ್ಟ್ ಸರಣಿ ಗೆಲುವಾಗಿದೆ.
ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮುಂಬೈ ಟೆಸ್ಟ್ ಜಯ ವಿರಾಟ್ ಕೊಹ್ಲಿಯವರ 50ನೇ ಟೆಸ್ಟ್ ವಿಜಯ. ಈ ವೇಳೆ ಮೂರು ಮಾದರಿ ಕ್ರಿಕೆಟ್ ನಲ್ಲಿ 50 ಜಯ ಸಾಧಿಸಿದ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಬರೆದರು.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 153, ಮತ್ತು 59 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇದೀಗ ಟೆಸ್ಟ್ ಕ್ರಿಕೆಟ್ ನಲ್ಲೂ 50ನೇ ವಿಜಯ ಸಾಧಿಸಿದ್ದಾರೆ.
ಇದನ್ನೂ ಓದಿ:ಸರಣಿ ಜಯ: ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಸ್ಥಾನಕ್ಕೇರಿದ ಟೀಂ ಇಂಡಿಯಾ
ವಿರಾಟ್ ಕೊಹ್ಲಿ ಸಾಧನೆಗೆ ಬಿಸಿಸಿಐ ಪ್ರಶಂಸೆ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ಆಟದ ಪ್ರತಿ ಸ್ವರೂಪದಲ್ಲಿ 50 ಅಂತಾರಾಷ್ಟ್ರೀಯ ಗೆಲುವುಗಳನ್ನು ಮೊದಲ ಆಟಗಾರ ವಿರಾಟ್ ಕೊಹ್ಲಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದೆ.
ಇದರೊಂದಿಗೆ ವಿರಾಟ್ ಕೊಹ್ಲಿ ನಾಯಕನಾಗಿ ತವರಿನಲ್ಲಿ ಸತತ 11 ಟೆಸ್ಟ್ ಸರಣಿ ಜಯಿಸಿದ ದಾಖಲೆ ಬರೆದರು.