Advertisement
1926ರಲ್ಲಿ ಪ್ರಾರಂಭವಾದ ಕೊಡ್ಲಾಡಿಯ ಕಿರಿಯ ಪ್ರಾಥಮಿಕ (ಈಗ ಹಿ.ಪ್ರಾ. ಶಾಲೆ) ಶಾಲೆಯು ಇನ್ನು 5 ವರ್ಷ ಪೂರೈಸಿದರೆ ಶತಮಾನೋತ್ಸವ ಆಚರಿಸಲಿದೆ. ಕಳೆದ ವರ್ಷದ ಜೂನ್‌ನಲ್ಲಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಮುಂಭಡ್ತಿ ಪಡೆಯಿತು.
Related Articles
Advertisement
ಒಂದು ಹಂತದಲ್ಲಿ ಮಕ್ಕಳ ಸಂಖ್ಯೆ ಕುಸಿತಗೊಂಡು, ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಗೆ ಮತ್ತೆ ಪುನಶ್ಚೇತನ ನೀಡುವಲ್ಲಿ ಸ್ಥಳೀಯರಾದ, ವಕ್ವಾಡಿ ಗುರುಕುಲ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟರ ಪಾತ್ರ ಮಹತ್ತರವಾಗಿದೆ. ಶಾಲೆಗೆ ಒಂದಷ್ಟು ಅಗತ್ಯ ಸೌಕರ್ಯಗಳ ಜತೆಗೆ ಶಿಕ್ಷಕರ ಕೊರತೆಯನ್ನು ನೀಗಿಸಿದ್ದಾರೆ. ಇವರಿಗೆ ಎಸ್‌ಡಿಎಂಸಿ, ಊರವರು ಸಹಕಾರ ನೀಡಿದ್ದಾರೆ.
ಇಬ್ಬರು ಶಿಕ್ಷಕರು ಅಗತ್ಯ:
ಈ ಶಾಲೆಯಲ್ಲಿ ಕಳೆದ ವರ್ಷದವರೆಗೆ ಇಬ್ಬರು ಶಿಕ್ಷಕರಿದ್ದು, ಅದರಲ್ಲಿ ಒಬ್ಬರು ನಿವೃತ್ತರಾಗಿದ್ದಾರೆ. ಈಗ ಇಲ್ಲಿ ಖಾಯಂ ಶಿಕ್ಷಕರಾಗಿರುವುದು ಒಬ್ಬರು ಮಾತ್ರ. ಸುಭಾಶ್ಚಂದ್ರ ಶೆಟ್ಟರು ಗೌರವ ಶಿಕ್ಷಕರನ್ನು ನೀಡಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನು ಇಬ್ಬರು ಶಿಕ್ಷಕರ ಬೇಡಿಕೆಯಿದೆ.
ವರ್ಷದಿಂದ ವರ್ಷಕ್ಕೆ ಏರಿಕೆ:
ಸರಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎನ್ನುವ ಮಾತಿಗೆ ತದ್ವಿರುದ್ಧವಾಗಿ ಈ ಶಾಲೆಯಲ್ಲಿ ಕಳೆದ 3 ವರ್ಷಗಳಿಂದ ಮಕ್ಕಳ ಸಂಖ್ಯೆ ಏರುತ್ತಲೇ ಇದೆ. 2018-19ನೇ ಶೈಕ್ಷಣಿಕ ಸಾಲಿನಲ್ಲಿ 18ರಲ್ಲಿದ್ದ ಮಕ್ಕಳ ಸಂಖ್ಯೆಯು, 2019-20ರಲ್ಲಿ 29ಕ್ಕೇರಿತು. 2020-21ನೇ ಸಾಲಿನಲ್ಲಿ 70ಕ್ಕೇರಿದರೆ, 2021-22ನೇ ಸಾಲಿನಲ್ಲಿ ಮೂರಂಕಿ ಅಂದರೆ 100ಕ್ಕೇರಿದೆ. ಅಂದರೆ ಕಳೆದ 3 ವರ್ಷಗಳಲ್ಲಿಯೇ ಈ ಶಾಲೆಯ ಮಕ್ಕಳ ಸಂಖ್ಯೆಯೂ 82ರಷ್ಟು ಹೆಚ್ಚಾಗಿದೆ.
ಮಂಜೂರಾಗುವ ನಿರೀಕ್ಷೆ:
ಶಾಲೆಯು ಕಳೆದ ವರ್ಷ ಹಿ.ಪ್ರಾ. ಶಾಲೆಯಾಗಿ ಮೇಲ್ದರ್ಜೆಗೇರಿದೆ. ಅದರಂತೆ ಹೆಚ್ಚುವರಿ ಕೊಠಡಿ ಬೇಡಿಕೆ ಬಗ್ಗೆ ಮನವಿ ಸಲ್ಲಿಸಿದ್ದೆವು. ಶೀಘ್ರ ಅನುದಾನ ಮಂಜೂರಾಗುವ ನಿರೀಕ್ಷೆಯಿದೆ. ಇನ್ನು ಶಿಕ್ಷಕರ ಬೇಡಿಕೆ, ಶೌಚಾಲಯ, ಪೀಠೊಪಕರಣಗಳ ಅಗತ್ಯದ ಬಗ್ಗೆಯೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಶಾಲೆಗೆ ಊರ ದಾನಿಗಳು ನೆರವು ನೀಡಿದ್ದಾರೆ. – ಜನಾರ್ದನ ಪಟಗಾರ್, ಮುಖ್ಯ ಶಿಕ್ಷಕರು ಕೊಡ್ಲಾಡಿ ಸರಕಾರಿ ಹಿ.ಪ್ರಾ. ಶಾಲೆ
-ಪ್ರಶಾಂತ್ ಪಾದೆ