Advertisement

ಕೆಸರು ಗದ್ದೆಯಾದ ಕೋಡಿಮಾರು- ಕರ್ಮಡ್ಕ ರಸ್ತೆ

07:41 PM Aug 25, 2021 | Team Udayavani |

ಬೆಳ್ಮಣ್‌: ಇಲ್ಲಿನ ಗ್ರಾ.ಪಂ.ನ ಕೋಡಿಮಾರ್‌ ಕರ್ಮಡ್ಕ ರಸ್ತೆ ಕೆಸರು ಗದ್ದೆಯಂತಾಗಿದ್ದು ಯಾರ ಮನವಿಗೂ ಕವಡೆ ಕಿಮ್ಮತ್ತಿನ ಬೆಲೆಯೂ ಸಿಗದ ಬಗ್ಗೆ ಗ್ರಾಮಸ್ಥರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಲವು ದಶಕಗಳಿಂದ ಮಣ್ಣಿನ ರಸ್ತೆಯಲ್ಲಿ ಸಂಚಾರ ನಡೆಸುವ ದೌರ್ಭಾಗ್ಯ ಇಲ್ಲಿನ ಗ್ರಾಮಸ್ಥರದ್ದಾಗಿದ್ದು  ಡಾಮರು ಕಾಮಗಾರಿಯ ಕನಸು ಕನಸಾಗಿಯೇ ಉಳಿದಿದೆ.

Advertisement

ಬೆಳ್ಮಣ್‌ ಗ್ರಾಮ ಪಂಚಾಯತ್‌ನ ಕೋಡಿಮಾರಿನಿಂದ ಕರ್ಮಡ್ಕವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು ಈ ಭಾಗದಲ್ಲಿ ಸುಮಾರು ನೂರಕ್ಕೂ ಅಧಿಕ ಮನೆಗಳಿದ್ದು ಇಲ್ಲಿನ ಮಂದಿಗೆೆ ಸಂಚಾರ ನಡೆಸಲು ಮಾತ್ರ ಒಂದು ಡಾಮರು ರಸ್ತೆಯೂ ಇಲ್ಲಿಯವರೆಗೆ ನಿರ್ಮಾಣಗೊಂಡಿಲ್ಲ.

ಕೆಸರು ತುಂಬಿದ ಹೊಂಡದಲ್ಲೇ ನಿತ್ಯ ಸಂಚಾರ:

ಕೋಡಿಮಾರಿನಿಂದ ಸುಮಾರು 100 ಮೀ.ನಷ್ಟು ಡಾಮರು ಕಾಮಗಾರಿಯಾಗಿ ಹಲವು ವರ್ಷಗಳೂ ಕಳೆದಿದ್ದು ಇದೀಗ ಆ ರಸ್ತೆಯೂ ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿ ಹೋಗಿವೆ. ಇನ್ನುಳಿದ  ಮಣ್ಣಿನ ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್‌ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದ್ದು ಕೆಸರು ನೀರಿನಲ್ಲಿ ಸಂಚಾರ ಮಾಡಬೇಕಾದ ದುಸ್ಥಿತಿ ಇಲ್ಲಿನ ನಿವಾಸಿಗಳದ್ದು.

ಸ್ವಂತ ಖರ್ಚಿನಲ್ಲಿ  ರಸ್ತೆ ನಿರ್ಮಾಣ :

Advertisement

ಸ್ಥಳೀಯ ನಿವಾಸಿಯೊಬ್ಬರು ರಸ್ತೆಯ ಈ ಅವ್ಯವಸ್ಥೆಯನ್ನು ಕಂಡು ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಹಾಗೂ 2 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್‌ ಅಳವಡಿಸಿ ಒಟ್ಟು 500 ಮೀ. ಉದ್ದದ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದರು. ಇಷ್ಟಾದರೂ ಯಾವನೇ ಜನಪ್ರತಿನಿಧಿಗಳಾಗಲೀ ಜನರಾಗಲೀ  ಇವರಿಗೆ ಬೆಂಬಲ, ಪ್ರೋತ್ಸಾಹವನ್ನು ನೀಡಿಲ್ಲ.

ಮುಕ್ತಿ ದೊರೆತಿಲ್ಲ :

ಹಲವು ದಶಕಗಳಿಂದ ಈ ರಸ್ತೆಯ ಬಗ್ಗೆ ಮನವಿ ಸಲ್ಲಿಸಲಾಗಿದೆ. ಇನ್ನೂ  ಮಣ್ಣಿನ ರಸ್ತೆಗೆ  ಮುಕ್ತಿ ದೊರೆತಿಲ್ಲ.  ಕೆಸರು ನೀರಿನಲ್ಲಿ ನಿತ್ಯ ಸಂಚಾರ ಮಾಡಬೇಕಾದ ಪರಿಸ್ಥಿತಿ ಬಂದಿದೆ. -ಸಂಜೀವ, ಸ್ಥಳೀಯರು

ಅಧಿಕಾರಿಗಳಿಗೆ ಮನವಿ:

ಜನಪ್ರತಿನಿಧಿಗಳಿಗೆ  ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿ ಸೋತು ಹೋಗಿ  ಸ್ವಂತ ಖರ್ಚಿನಲ್ಲಿ ಸ್ವಲ್ಪ ರಸ್ತೆಯನ್ನು ನಿರ್ಮಿಸಿದ್ದೇನೆ. ಇನ್ನೂ ರಸ್ತೆಯ ಡಾಮರು ಕಾಮಗಾರಿ ಬಾಕಿ ಇದ್ದು ಈ ಬಗ್ಗೆ ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಂಡು ಉಳಿದ ರಸ್ತೆಗೆ ಡಾಮರು ಕಾಮಗಾರಿ ಮಾಡಿಕೊಡಿ. –-ಜೆರಾಲ್ಡ್‌ ಪಿಂಟೋ, ಗ್ರಾಮಸ್ಥ 

ದುರಸ್ತಿಗೆ ಕ್ರಮ :

ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದೀಗ ತಾತ್ಕಾಲಿಕ ಮಟ್ಟಿಗೆ ರಸ್ತೆಯ ದುರಸ್ತಿ ನಡೆಸಲಾಗುವುದು.-ಪೌಸ್ತೀನ್‌ ಡಿ’ಸೋಜಾ,  ಬೆಳ್ಮಣ್‌ ಗ್ರಾ.ಪಂ. ಸದಸ್ಯ

– ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next