Advertisement

ಕೋಡಿಕಲ್‌: ವರ್ಷ ಕಳೆದರೂ ಚರಂಡಿ ಅವ್ಯವಸ್ಥೆ ಮುಗಿದಿಲ್ಲ

01:32 PM Jun 25, 2020 | mahesh |

ಮಹಾನಗರ: ನಗರದ ಕೋಡಿಕಲ್‌ನ ಕೊನೆಯ ಬಸ್‌ ನಿಲ್ದಾಣದ ಬಳಿ ಬಸ್‌ ತಿರುಗುವಲ್ಲಿ ಮಂಜಪ್ಪ ಉಳ್ಳಾಲ್‌ ರಸ್ತೆ ಕ್ರಾಸ್‌ ಮಾಡುವಲ್ಲಿ ಒಳ ಚರಂಡಿ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಚರಂಡಿಯ ಅವ್ಯವಸ್ಥೆಯನ್ನು ಇನ್ನೂ ಸರಿಪಡಿಸಿಲ್ಲ. ಆದುದರಿಂದ ಇದು ಅಪಘಾತದ ತಾಣವಾಗುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Advertisement

ಅಮೃತ್‌ ಯೋಜನೆಯಡಿ ಗುತ್ತಿಗೆ ದಾರರು ಇಲ್ಲಿ ಒಳ ಚರಂಡಿ ಕೆಲಸ ವಹಿಸಿಕೊಂಡು, ಮಳೆ ನೀರು ಹರಿಯುವ ಚರಂಡಿಯ ಚಪ್ಪಡಿ ಕಲ್ಲುಗಳನ್ನು ತೆಗೆದು ಬದಿಗೆ ಸರಿಸಲಾಗಿತ್ತು. ಬಳಿಕ ಚರಂಡಿ ಅಗೆದು ಒಳಚರಂಡಿ ಕಾಮಗಾರಿ ಮುಗಿಸಿ ಮಣ್ಣು ತುಂಬಿಸಿ ಹೋಗಿದ್ದಾರೆ. ಇದರಿಂದ ಮಳೆ ಬಂದಾಗ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಅಲ್ಲದೆ ಕಳೆದ ವರ್ಷವೇ ಮಳೆಯಿಂದಾಗಿ ಮಣ್ಣು ಕೊಚ್ಚಿಕೊಂಡು ಹೋಗಿ ವಾಹನ ಸವಾರರಿಗೆ ತೊಂದರೆಯಾಗಿದ್ದು, ಈ ವರ್ಷವೂ ಅದೇ ಪರಿಸ್ಥಿತಿ ಇದೆ ಎಂದು ಸ್ಥಳೀಯ ನಿವಾಸಿಗಳು ಉದಯವಾಣಿಗೆ ತಿಳಿಸಿದ್ದಾರೆ.  ಈಗಾಗಲೇ ಹಲವಾರು ದ್ವಿಚಕ್ರ ವಾಹನ ಸವಾರರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ ರಭಸದಿಂದ ಹರಿಯುವ ಮಳೆ ನೀರು ಪಕ್ಕದ ಕಟ್ಟಡಗಳಿಗೂ ನುಗ್ಗುತ್ತಿದೆ. ಇದು ಕೋಡಿಕಲ್‌ನ ಕೊನೆಯ ಬಸ್‌ ನಿಲ್ದಾಣ ಆಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ನಾಲ್ಕೈದು ಬಸ್‌ಗಳು ಇಲ್ಲಿಯೇ ತಿರುಗುತ್ತಿದ್ದು, ಇದರಿಂದಾಗಿ ಬೃಹತ್‌ ಹೊಂಡ ನಿರ್ಮಾಣವಾಗಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಈ ಹೊಂಡಕ್ಕೆ ಕೇವಲ ಜಲ್ಲಿ ಕಲ್ಲು ತುಂಬಿಸಿ ಮುಚ್ಚಿದ್ದು, ಈ ವರ್ಷದ ಮಳೆಗಾಲದಲ್ಲಿ ಪುನಃ ಹೊಂಡ ನಿರ್ಮಾಣವಾಗಿದೆ. ಹೊಂಡ ವನ್ನು ಮುಚ್ಚಲು ಕ್ರಮ ವಹಿಸದಿದ್ದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಕ‌ೂಡಲೇ ಸಮಸ್ಯೆ ಸರಿಪಡಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

“ಕಳೆದ ವರ್ಷ ಕಾಮಗಾರಿ ನಡೆಸುವ ಸಂದರ್ಭ ಇಲ್ಲಿ ಒಳ ಚರಂಡಿಗಾಗಿ ಅಗೆದ ಜಾಗದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಸ್ಥಳೀಯ ನಾಗರಿಕರು ಸಂಬಂಧಪಟ್ಟ ಎಂಜಿನಿಯರ್‌ ಗಮನಕ್ಕೆ ತಂದಿದ್ದರು. ಆದರೆ ಅವರು ಜನರ ಬೇಡಿಕೆಗೆ ಸ್ಪಂದಿಸದೆ, ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮುಗಿಸಿ ಹೋಗಿದ್ದು, ಬಳಿಕ ಇತ್ತ ಬಂದಿಲ್ಲ ಎಂದು ಓರ್ವ ನಾಗಕರಿಕರು ಉದಯವಾಣಿಗೆ ತಿಳಿಸಿದರು.

 ಶೀಘ್ರ ದುರಸ್ತಿ
ಇಲ್ಲಿ ಹೊಂಡ ನಿರ್ಮಾಣವಾಗಿ ನಾಗರಿಕರಿಗೆ ಬಹಳಷ್ಟು ಸಮಸ್ಯೆಯಾಗಿದೆ. ದುರಸ್ತಿ ಮಾಡುವಂತೆ ಪಾಲಿಕೆಯ ಗಮನಕ್ಕೆ ತಂದಿದ್ದು, ಗುತ್ತಿಗೆದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದಾರೆ. ಶೀಘ್ರದಲ್ಲಿಯೇ ದುರಸ್ತಿ ಕೆಲಸ ಪೂರ್ತಿಗೊಳ್ಳುವ ನಿರೀಕ್ಷೆ ಇದೆ.
 -ಮನೋಜ್‌ ಕುಮಾರ್‌, ಸ್ಥಳೀಯ ಕಾರ್ಪೊರೇಟರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next