ಕೋಡಿಕಲ್ : ಕೊರಗರ ಸಾಮೂಹಿಕ ವಿವಾಹ ಸಮಿತಿ ಅಶ್ರಯದಲ್ಲಿ ಮಹಾನಗರ ಪಾಲಿಕೆ ಸಹಕಾರದೊಂದಿಗೆ ಕೋಡಿಕಲ್ ಕುದ್ಮಲ್ ರಂಗರಾವ್ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಕೊರಗ ಸಮುದಾಯದ 15 ಯುವ ಜೋಡಿಗಳು ಸತಿಪತಿಗಳಾದರು.
ಮಾಜಿ ಸಚಿವ ಬಿ. ರಮಾನಾಥ ರೈ, ಮೇಯರ್ ಭಾಸ್ಕರ ಕೆ., ಮುಖ್ಯಸಚೇತಕ ಶಶಿಧರ ಹೆಗ್ಡೆ, ಮಂಗಳೂರು ತಹಶೀಲ್ದಾರ್, ಇತರ ಅಧಿಕಾರಿಗಳು ಸಾಕ್ಷಿಗಳಾದರು.
ಕೊರಗ ಸಾಮೂಹಿಕ ವಿವಾಹ ಸಮಿತಿಯು 4 ವರ್ಷಗಳಿಂದ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ದ.ಕ. ಜಿಲ್ಲೆಯಿಂದ 7, ಉಡುಪಿಯಿಂದ 7 ಮತ್ತು ಕಾಸರಗೋಡಿನ 1 ಸಹಿತ ಒಟ್ಟು 15 ಮಂದಿ ವಿವಾಹದಲ್ಲಿ ನೋಂದಣಿ ಮಾಡಿದ್ದರು. ವಧು- ವರರಿಗೆ ತಲಾ ಇಪ್ಪತ್ತು ಸಾವಿರ ರೂ. ವೆಚ್ಚದಲ್ಲಿ ತಾಳಿ, ಕರಿಮಣಿ, ಸೀರೆ, ಪಂಚೆ, ಪೇಟ ಸಹಿತ ವಿವಾಹಕ್ಕೆ ಬೇಕಾದ ಸೌಲಭ್ಯ ನೀಡಲಾಗಿತ್ತು. ಪಾಲಿಕೆ ವತಿಯಿಂದ ಪೆಂಡಾಲ್, ನೀರು, ಮೈಕ, ವಿದ್ಯುತ್ ಸಹಿತ ಮೂಲಸೌಕರ್ಯ ಒದಗಿಸಲಾಗಿತ್ತು.
ವಧುವರರಿಗೆ ಶುಭ ಹಾರೈಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಥ ರೈ, ಕೊರಗ ಸಮುದಾಯ ತುಳಿತಕ್ಕೊಳಗಾದ ಸಮುದಾಯವಾಗಿದೆ. ಸಚಿವನಾಗಿದ್ದಾಗ ಈ ಸಮುದಾಯ ಕೇಳದಿದ್ದರೂ ಮೂಲಸೌಲಭ್ಯ ಒದಗಿಸಲು ಮುತುವರ್ಜಿ ವಹಿಸಿದ್ದೆ. ಸಮಾಜದಲ್ಲಿ ಸಮಾನತೆಯಿಂದ ಜೀವಿಸಲು ಎಲ್ಲರಿಗೂ ಹಕ್ಕಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ಸಮಾಜದ ಮುಂಚೂಣಿಗೆ ಬರಲು ಸಹಕರಿಸಿ. ತಾರತಮ್ಯ ಹೋಗಲಾಡಿಸಲು ಪ್ರಬಲ ಹೋರಾಟದಿಂದ ಸಾಧ್ಯ ಎಂದು ಹೇಳಿದರು.
ಮುಖ್ಯಸಚೇತಕ ಶಶಿಧರ ಹೆಗ್ಡೆ ಮಾತನಾಡಿದರು. ಮೇಯರ್ ಭಾಸ್ಕರ್ ಕೆ., ಬಂಟರ ಯಾನೇ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಡಿಸಿಸಿ ಕಾರ್ಯದರ್ಶಿ ಮಮತಾಶೆಟ್ಟಿ, ಲ್ಯಾನ್ಸಿ ಪಿಂಟೋ ಶುಭ ಹಾರೈಸಿದರು. ವಿವಾಹ ಸಮಿತಿ ಸದಸ್ಯರು, ಕೊರಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ದುಂದುವೆಚ್ಚಕ್ಕೆ ವಿರೋಧ
ಸಮಿತಿಯ ಎಂ. ಸುಂದರ್ ಕಡಂದಲೆ ಮಾತನಾಡಿ, ನಾಲ್ಕು ವರ್ಷದಿಂದ ಉಚಿತ ಸಾಮೂಹಿಕ ವಿವಾಹ ಆಯೋಜಿಸುತ್ತಾ ಬಂದಿದ್ದೇವೆ. ಪಿಎಚ್.ಡಿ. ವ್ಯಾಸಂಗ ಮಾಡುತ್ತಿರುವ ಅಣ್ಣಿ ಕೋಡಿಕಲ್ ಸಾಮೂಹಿಕ ವಿವಾಹವಾಗಿ ದುಂದುವೆಚ್ಚಕ್ಕೆ ವಿರೋಧ ವ್ಯಕ್ತಪಡಿದ್ದಾರೆ. ಪದವಿ ಪಡೆದವರೂ ಇದ್ದಾರೆ. ಕೊರಗ ಸಮುದಾಯದಲ್ಲಿ ಯಾವುದೇ ಮುಹೂರ್ತ ನೋಡುವ, ತಾಳಿ ಕಟ್ಟುವ ಸಂಪ್ರದಾಯವಿಲ್ಲ. ಆದರೆ ಕರಿಮಣಿ ಕಟ್ಟುವುದು ಎಂಬ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ನಮ್ಮ ಮದುವೆ ಐದು ದಿನಗಳ ಸಂಭ್ರಮದ್ದಾಗಿದೆ. ಆದರೆ ಅತೀ ಕಡಿಮೆ ವೆಚ್ಚದಲ್ಲಿ ಮಾಡುವ ಉದ್ದೇಶದಿಂದ 2 ದಿನಗಳ ಕಾರ್ಯ ಕ್ರಮ ಮಾಡಿದ್ದೇವೆ ಎಂದರು.