ಚಿಕ್ಕಮಗಳೂರು: ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ. 21ರಂದು ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆಯುವ ರೈತ ಸಂಘದ ಬೃಹತ್ ಸಮಾವೇಶದಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು.
ರಾಜ್ಯದ ರೈತರು ಬೇರೆ ಯವರನ್ನು ನಂಬಿ ಪದೇ ಪದೆ ಮೋಸ ಹೋಗುವುದು ಸಾಕು. ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಲು ಅಣಿಯಾಗಬೇಕಿದೆ. ಇರುವ ರಾಜ ಕೀಯ ಪಕ್ಷಗಳಿಗೆ, ವ್ಯಕ್ತಿಗಳಿಗೆ ಸಿದ್ಧಾಂತ ಗಳಿಲ್ಲ. ವೈಯಕ್ತಿಕ ಶಿಸ್ತು ಮೊದಲೇ ಇಲ್ಲ. ಇಂತಹವರಿಂದ ನಮ್ಮ ಉದ್ಧಾರದ ನಿರೀಕ್ಷೆ ಮೂರ್ಖತನ ಎಂದರು.
ಪರ್ಯಾಯ ರಾಜಕೀಯ ಪಕ್ಷದ ಹೆಸರು ಮತ್ತು ಚಿಹ್ನೆ ತೀರ್ಮಾನ ವಾಗಿಲ್ಲ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗು ವುದು. ಎಲ್ಲ ಸಮುದಾಯ ಒಳಗೊಂಡ ರೈತ ಸಂಘದ ವಿಚಾರದ ಬಗ್ಗೆ ನಂಬಿಕೆ-ವಿಶ್ವಾಸ ಹೊಂದಿ ರುವರನ್ನು ಅಭ್ಯರ್ಥಿಗಳನ್ನಾಗಿ ಮಾಡ ಲಾಗುವುದು. ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಮೂರು ರೈತ ವಿರೋಧಿ ಕಾಯ್ದೆ ಹಿಂಪಡೆದುಕೊಂಡಿದೆ. ಆದರೆ ರಾಜ್ಯ ಸರಕಾರ ಈ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡಿಲ್ಲ. ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಎ. 21ರಂದು ನಡೆಸಲಾಗುವುದು. ಕಾಯ್ದೆಗಳನ್ನು ಹಿಂಪಡೆಯದಿದ್ದರೇ ಮುಂದಿನ ಹೋರಾಟ ರೂಪಿಸಲಾಗುವುದು ಎಂದರು.