ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಹೋರಾಟವನ್ನು ನಡೆಸಿದ್ದೇನೆ. ವಿನಃ ರೈತರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಅದು ಶೀಘ್ರದಲ್ಲಿ ಬಯಲಾಗುತ್ತದೆ ಎಂದು ರೈತ ಸಂಘ ರಾಜ್ಯಾಧ್ಯಕ್ಷ ಕೋಡಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆ ರೈತ ಭವನದಲ್ಲಿ ರೈತರ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ನೈತಿಕತೆ ಮುಖ ಇಟ್ಟುಕೊಂಡು ಜನರ ಬಳಿ ಬರುತ್ತಿದ್ದೇನೆ. ನೈತಿಕತೆಗೆ ಯಾವತ್ತು ಕೊರತೆಯಿಲ್ಲ ಯಾರೋ ಮಾಡಿರುವ ಆರೋಪಗಳಿಗೆ ಸಂಘಟನೆಯನ್ನು ಕಟ್ಟುವುದಕ್ಕೆ ಆಗುವುದಿಲ್ಲ. ಸಂಘದವರು ಎಂದರೇ ಅದಕ್ಕೊಂದು ಚೌಕಟ್ಟುಬೇಕು ಅಲ್ಲಾ, ಪದಾಧಿಕಾರಿಗಳಿರಬೇಕು, ಅದರಿಂದ ಒಂದು ನೋಟಿಸ್ ಜಾರಿ ಮಾಡಬೇಕು. ಕಾರಣ ಕೊಡಬೇಕೆಂದು ಹೇಳಬೇಕು ಯಾವುದೋ ಪಕ್ಷದ ಒಂದು ಅಜೆಂಡಾದ ಕೆಳಗಡೆ ಇದ್ದಕ್ಕಿದ್ದಂಗೆ ಘೋಷಣೆ ಮಾಡುವುದು ಸರಿಯೇ? ಎಂದು ಉಚ್ಚಾಟನೆ ಮಾಡಿರುವ ರೈತ ಮುಖಂಡರನ್ನು ಪ್ರಶ್ನಿಸಿದರು.
25ರಂದು ಯಾವೊದೊಂದು ಖಾಸಗಿ ವಾಹಿನಿಯಲ್ಲಿ ಭ್ರಷ್ಟಾಚಾರದ ಆರೋಪ ಮಾಡುತ್ತದೆ. ಕೊಟ್ಟವನು ಇಲ್ಲ ತಗೊಂಡವನು ಇಲ್ಲ ಕಳ್ಳರು- ಸುಳ್ಳರು ಎಂದು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ. ಆದರೆ, ಅದರ ಮರುದಿನ ಜೆಡಿಎಸ್‌ನವರು ನಮ್ಮ ಮನೆಯ ಮೇಲೆ ದಾಳಿ ಮಾಡ್ತಾರೆ. ಗಾಡಿ ಜಖಂಗೊಳಿಸುತ್ತಾರೆ ಯಾಕೆ ಎಂದು ಪ್ರಶ್ನಿಸಿದ ಅವರು 27ನೇ ತಾರೀಖು ಶಿವಮೊಗ್ಗದಲ್ಲಿ ಇದ್ದಕ್ಕಿದಂಗೆ ನಾನು ಅಧ್ಯಕ್ಷವೆಂದು ಘೋಷಣೆ ಮಾಡಿಕೊಳ್ಳುತ್ತಾರೆ ಯಾಕೆ? 28ಕ್ಕೆ ಪ್ರಸ್‌ಕ್ಲಬ್ ನೀಡಲು ಬಂದಾಗ ಮತ್ತೆ ಜೆಡಿಎಸ್ ಕಾರ್ಯಕರ್ತರು ನಮ್ಮ ಮೇಲೆ ದಾಳಿ ಮಾಡಲು ಪ್ರಯತ್ನ ಮಾಡುತ್ತಾರೆ ಯಾಕೆ? 29ರಂದು ರಾಕೇಶ್ ಟಿಕಾಯತ್ ಅವರನ್ನು ಕರೆಸಿ ಕರ್ನಾಟಕದಲ್ಲಿ ರೈತ ಚಳುವಳಿ ಮೇಲೆ ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಾರೆ. ಅವರ ಮೇಲೆ ನಡೆದ ಘಟನೆ ಬಗ್ಗೆ ನನಗೆ ನೋವು ತಂದಿದೆ ಎಂದು ಜೆಡಿಎಸ್ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ನಷ್ಟ ಪರಿಹಾರ ನಿರ್ಲಕ್ಷ್ಯ: ರಾಜ್ಯದಲ್ಲಿ ಸುರಿದ ಮಳೆಯಿಂದ ನಷ್ಟವಾಗಿದೆ ಬೆಳೆ ವೈಫಲ್ಯವಾಗಿದೆ ಸಮರ್ಥವಾಗಿ ನಿಭಾಯಿಸುವುದರಲ್ಲಿ ಸರ್ಕಾರ ವಿಫಲವಾಗಿದೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದನ್ನು ವಿರೋಧಿಸಿ ಹಾಗೂ ವಿದ್ಯುತ್ ಛಕ್ತಿಯನ್ನು ಖಾಸಗಿಕರಣ ಮಾಡಿರುವುದನ್ನು ವಿರೋಧಿಸಿ ಇದೇ ತಿಂಗಳು 12 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಜಾಥ ನಡೆಸಿ ವಿಧಾನಸೌಧಗೆ ಮುತ್ತಿಗೆ ಹಾಕುವ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಇದರಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರ ಭಾಗವಹಿಸಬೇಕೆಂದು ಮನವಿ ಮಾಡಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರೈತ ಸಂಘದ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ ಇತರರಿದ್ದರು.