Advertisement

ಕೋಡಿ: ಸಮುದ್ರ ಪಾಲಾದ ಮರಳು ದಿಬ್ಬ

06:00 AM Aug 11, 2018 | Team Udayavani |

ವಿಶೇಷ ವರದಿ- ಕೋಡಿ: ಗಂಗೊಳ್ಳಿ ಹಾಗೂ ಕೋಡಿ ಕಡಲ್ಕೊರೆತ ತಡೆಗಾಗಿ ಬ್ರೇಕ್‌ ವಾಟರ್‌ ನಿರ್ಮಾಣ ಕಾಮಗಾರಿಗಾಗಿ ಡ್ರೆಜ್ಜಿಂಗ್‌ ಮಾಡಿ ತೆಗೆಯಲಾದ ಹೂಳನ್ನು  ತೆಗೆಯದೇ, ಅದೀಗ ಸಮುದ್ರ ಪಾಲಾಗಿದ್ದು, ಮರಳು ಎರಡೂ ಬದಿಯ ಬ್ರೇಕ್‌ ವಾಟರ್‌ ತುದಿಯಲ್ಲಿ ಬಂದು ಶೇಖರಣೆಯಾಗಿರುವುದರಿಂದ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ಬೋಟುಗಳು ತೆರಳಲು ಅಡ್ಡಿಯಾಗುವ ಆತಂಕ ಎದುರಾಗಿದೆ. 

Advertisement

ಕೋಡಿಯಲ್ಲಿ ರಾಶಿ ಹಾಕಲಾದ ಮರಳು ದಿಬ್ಬ ತೆರವಿಗೆ ಮೀನುಗಾರರು ಸಾಕಷ್ಟು ಬಾರಿ ಇಲಾಖೆಗೆ, ಶಾಸಕರಿಗೆ ಮನವಿ ಮಾಡಿಕೊಂಡಿದ್ದರೂ, ಕೂಡ ಅದನ್ನು ತೆರವು ಮಾಡದ ಕಾರಣ ಈ ಬಾರಿಯ ಮೀನುಗಾರಿಕಾ ಋತುವಿಗೆ ತೊಂದರೆಯಾಗುವ ಸಾಧ್ಯತೆ ದಟ್ಟವಾಗಿದೆ. 

ಗಂಗೊಳ್ಳಿಯಲ್ಲಿ ಸುಮಾರು 700 ಮೀ. ಹಾಗೂ ಕೋಡಿಯಲ್ಲಿ ಸುಮಾರು 900 ಮೀ. ಉದ್ದದ ಸಮುದ್ರ ತೀರದಲ್ಲಿ ಕಡಲ್ಕೊರೆತದ ತಡೆಗಾಗಿ ಶಾಶ್ವತ ಪರಿಹಾರವೆನ್ನುವಂತೆ 102 ಕೋ. ರೂ. ವೆಚ್ಚದಲ್ಲಿ 3 ವರ್ಷಗಳಿಂದ ಟ್ರೆಟ್ರಾಫೈಡ್‌ ಹಾಗೂ ಕಲ್ಲುಗಳ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದೀಗ ಕೊನೆಯ ಹಂತದಲ್ಲಿದೆ. ಆದರೆ ಅದಕ್ಕಾಗಿ ಡ್ರೆಜ್ಜಿಂಗ್‌ ಮಾಡಿ ತೆಗೆಯಲಾದ ಹೂಳನ್ನು ಅಲ್ಲಿಂದ ತೆರವು ಮಾಡದ ಕಾರಣ ಸಮಸ್ಯೆ ತಂದೊಡ್ಡಿದೆ.

ವರದಿ ಪ್ರಕಟಿಸಿ ಎಚ್ಚರಿಸಿತ್ತು
ಮರಳು ದಿಬ್ಬವನ್ನು ತುರ್ತಾಗಿ ತೆರವು ಮಾಡ ದಿದ್ದರೆ ಮುಂಬರುವ ಮೀನುಗಾರಿಕಾ ಋತುವಿಗೆ ತೊಂದರೆಯಾಗಲಿದೆ ಎನ್ನುವ ಕುರಿತು ಜೂ. 16 ರಂದು “ಮರಳು ಸಮುದ್ರ ಪಾಲು; ಮೀನುಗಾರಿಕೆಗೆ ಸಂಕಷ್ಟ’ ಎನ್ನುವುದಾಗಿ 
“ಉದಯವಾಣಿ’ ವಿಶೇಷ ವರದಿ ಮೂಲಕ ಸಂಬಂಧಪಟ್ಟವರನ್ನು ಎಚ್ಚರಿಸಿತ್ತು. 

ಇದರಿಂದೇನು ಸಮಸ್ಯೆ ?
ಬ್ರೇಕ್‌ ವಾಟರ್‌ನ ತುದಿಯಲ್ಲಿ ಶೇಖರಣೆಯಾದ ಮರಳಿನಿಂದಾಗಿ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ಬೋಟುಗಳು ಹೊರ ಹೋಗಲು ಹಾಗೂ ಒಳ ಬರಲು ತೊಂದರೆಯಾಗಲಿದೆ. ಅದಲ್ಲದೆ ಮರಳು ರಾಶಿಯಿಂದಾಗಿ ಬೋಟುಗಳು ಪಲ್ಟಿಯಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಈಗ ಬಂದರಿನಿಂದ ತೆರಳಲು ಒಂದು ಸಣ್ಣ ಕಡಲ ಮಾರ್ಗವಿದ್ದು, ಇನ್ನೀಗ ಅದು ಕೂಡ ಮುಚ್ಚುವ ಭೀತಿ ಎದುರಾಗಿದೆ. 

Advertisement

ಇದಕ್ಕೆ ಪರಿಹಾರವೇನು?
ಮರಳು ದಿಬ್ಬವೆಲ್ಲ ಈಗ ಸಮುದ್ರ ಪಾಲಾಗಿದ್ದು, ಇದನ್ನು ಇನ್ನೂ ತೆಗೆಯಲು ಡ್ರೆಜ್ಜಿಂಗ್‌ ಮಾಡಲೇ ಬೇಕು. ಅದು ಕೂಡ ಸಣ್ಣ ಡ್ರೆಜ್ಜಿಂಗ್‌ ಯಂತ್ರದಿಂದ ತೆರವು ಕಾರ್ಯ ಸುಲಭದಲ್ಲಿ ಮಾಡಲು ಸಾಧ್ಯವಿಲ್ಲ. ದೊಡ್ಡ ಡ್ರೆಜ್ಜಿಂಗ್‌ ಯಂತ್ರದಿಂದ ಮಾತ್ರ ಅಲ್ಲಿ ತುಂಬಿರುವ ಹೂಳನ್ನು  ತೆಗೆಯಬಹುದು. 

ಮನವಿ ನೀಡಿದರೂ ಪ್ರಯೋಜನವಿಲ್ಲ
ನಾವು ಈ ವಿಚಾರದಲ್ಲಿ ಎಲ್ಲರಿಗೂ ಮನವಿ ಮಾಡಿದ್ದೆವು. ಆದಷ್ಟು ಬೇಗ ಅಲ್ಲಿರುವ ಮರಳು ದಿಬ್ಬವನ್ನು ತೆರವು ಮಾಡಿ ಎಂದು. ಆದರೆ ಅದೀಗ ಬ್ರೇಕ್‌ವಾಟರ್‌ ಕೊನೆಯಲ್ಲಿ ಹೋಗಿ ಬಿದ್ದಿದೆ. ಇದರಿಂದ ಬೋಟುಗಳಿಗೆ ಹೊರಗೆ ಹೋಗಲು ದಾರಿಯಿಲ್ಲದೆ ಕಷ್ಟವಾಗುತ್ತಿದೆ. ಡ್ರೆಜ್ಜಿಂಗ್‌ ಮಾಡಿ ತೆಗೆಯಬೇಕಾಗಿದೆ. 
– ಗೋಪಾಲ ಖಾರ್ವಿ, 
ಮೀನುಗಾರರು ಕೋಡಿ 

ಮಳೆ ಕಡಿಮೆಯಾದ ತತ್‌ಕ್ಷಣ ಡ್ರೆಜ್ಜಿಂಗ್‌
ಈಗ ಇಲಾಖೆಯ ಡ್ರೆಜ್ಜಿಂಗ್‌ ಯಂತ್ರ ಮಲ್ಪೆಯಲ್ಲಿದೆ. ಅದರ ಕೆಲಸಗಾರರು ರಜೆಯಲ್ಲಿದ್ದಾರೆ. ಮಳೆಯೂ ಹೆಚ್ಚಿರುವುದರಿಂದ ಈಗ ತೆಗೆಯುವುದು ಅಪಾಯಕಾರಿ. ಮಳೆ ಕಡಿಮೆಯಾದ ಕೂಡಲೇ ಅಲ್ಲಿ ರಾಶಿ ಬಿದ್ದಿರುವ ಹೂಳನ್ನು ತೆರವು ಮಾಡಲಾಗುವುದು. ಕೂಡಲೇ ಡ್ರೆಜ್ಜಿಂಗ್‌ ಮಾಡಿ, ಹೂಳು ತೆಗೆಯಲಾಗುವುದು. 
– ನಾಗರಾಜ್‌, ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next