ಕುಂದಾಪುರ: ವಿನಾಯಕ ಥಿಯೇಟರ್ ಬಳಿಯಿಂದ ಕೋಡಿಗೆ ಹೋಗುವ ರಸ್ತೆಯಲ್ಲಿ 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಸವಾಲಾಗಿ ಪರಿಣಮಿಸಿದೆ.
ಫ್ಯಾಕ್ಟರಿ, ಬೀಚ್, ಶಾಲೆ, ದೇವಾಲಯ ಸೇರಿದಂತೆ ಮನೆಗಳಿರುವ ಪ್ರದೇಶಕ್ಕೆ ಹೋಗುವ ಘನ ವಾಹನಗಳು ಸದಾ ಓಡಾಡುವ ರಸ್ತೆ ಇದು. ಸಮುದ್ರಕ್ಕಿಂತ ಹೆಚ್ಚು ದೂರದಲ್ಲಿ ಇಲ್ಲದ ಕಾರಣ, ಹಿನ್ನೀರು ಬರುವ ಕಾರಣ ಇಲ್ಲಿ ಕಾಮಗಾರಿ ನಿರ್ವಹಣೆ ಎಲ್ಲ ಕಡೆಯಂತೆ ಸಾಧ್ಯವಿಲ್ಲ. ಈ ಹಿಂದೆ ಮಣ್ಣು ಪರೀಕ್ಷೆ ನಡೆಸಿದಾಗ ಕಲ್ಲು ದೊರೆತಿದೆ ಎಂದು ವರದಿ ಬಂದು ಅದರ ಅನ್ವಯ ಸೇತುವೆ ರಚನೆಗೆ ವಿನ್ಯಾಸ ಮಾಡಲಾಗಿತ್ತು. ಆದರೆ ಕಾಮಗಾರಿ ಮಾಡುವ ವೇಳೆ ಸಮೀಪದಲ್ಲೇ ವಿದ್ಯುತ್ ಕಂಬ, ಮನೆ, ಮರಗಳು, ಆವರಣಗೋಡೆ ಇತ್ಯಾದಿಗಳಿದ್ದು ಆತಂಕವಾಗಿದೆ. ಎಷ್ಟು ಆಳ ಮಾಡಿದರೂ ನೀರು ಹರಿದು ಬಂದು ಸಮಸ್ಯೆಯಾಗುತ್ತಿದೆ. ವಿಸ್ತಾರ ಮಾಡಿದಂತೆ ಆವರಣ ಗೋಡೆಗಳು ಬಿರುಕು ಬಿಡುತ್ತಿದ್ದು ಸಮೀಪದ ಮನೆಗಳಿಗೂ ಆತಂಕದ ವಾತಾವರಣ ಉಂಟಾಗಿದೆ.
ಇತರೆಡೆ ಸೇತುವೆ ರಚಿಸಿದಂತೆ ಆಳ ಮಾಡದೇ ಪಿಲ್ಲರ್ ಹಾಕಿದರೆ ಇಲ್ಲಿ ಬಾಳಿಕೆ ಬರುವುದು ಕಷ್ಟ ಎನ್ನುವುದು ಸ್ಥಳೀಯರ ಅಭಿಪ್ರಾಯ. ಆನಗಳ್ಳಿ ಸೇತುವೆ ರಚಿಸಿದಂತೆ ನೀರಿನಲ್ಲಿ ಅಥವಾ ನೀರು ನಿಲ್ಲಿಸಿ ಸೇತುವೆಗೆ ಪಿಲ್ಲರ್ ಹಾಕಬೇಕು ಎನ್ನುತ್ತಾರೆ ಇಲ್ಲಿನ ಜನ. ಪಂಚಾಂಗ ಹಾಕಿದಾಗ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಹರ್ಷವರ್ಧನ, ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ಮಂಜು ಬಿಲ್ಲವ, ಗೋರಕ್ಷಾ ಪ್ರಮುಖ್ ಮಹೇಶ್ ಶೆಣೈ, ಮಹೇಶ್ ಪೂಜಾರಿ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾಮಗಾರಿಯನ್ನು ಪರಿಶೀಲಿಸಿದ ಎಂಜಿನಿಯರ್ ಪೂರ್ಣಪ್ರಮಾಣದಲ್ಲಿ ಪಂಚಾಂಗ ತೆಗೆಸಿದ್ದು ಮತ್ತೆ ಆಳ ಮಾಡಿ ಪಂಚಾಂಗ ಹಾಕಲು ಸೂಚಿಸಿದ್ದಾರೆ. 70 ಚೀಲದಷ್ಟು ಸಿಮೆಂಟ್, ಮರಳು, ಕಬ್ಬಿಣ, ಜಲ್ಲಿ ಎಂದು ಹಾಕಿದ್ದು ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಹಾಗಿದ್ದರೂ ಗುಣಮಟ್ಟದಲ್ಲಿ ರಾಜಿ ಆಗಲು ಬಿಡದೆ, ಘನ ವಾಹನಗಳು ಹೋಗುವ ಸೇತುವೆ ಆದ್ದರಿಂದ ಕಾಮಗಾರಿ ಸೂಚಿಸಿದ ರೀತಿಯಲ್ಲಿಯೇ ಆಗಬೇಕೆಂದು ಲೋಕೋಪಯೋಗಿ ಇಲಾಖೆ ಸೂಚಿಸಿದೆ. ಅದರಂತೆ ಕಾಮಗಾರಿ ನಡೆಯುತ್ತಿದೆ.
ಆಳ ತೆಗೆದಾಗ ಕೆಸರು ಬರುತ್ತಿದೆ, ನೀರು ನಿಲ್ಲುತ್ತದೆ. ಕಡಿಮೆ ಆಳ ತೆಗೆದರೆ ಪಿಲ್ಲರ್ ಗಟ್ಟಿಯಾಗದು ಎನ್ನುವ ಸಂಶಯ ಇದೆ. ಒಂದೆಡೆ ನೀರು ನಿಯಂತ್ರಣಕ್ಕೆ ದೊರೆಯುತ್ತಿಲ್ಲ. ಅದರ ಮೇಲೆ ಕಾಂಕ್ರೀಟ್ ಹಾಕುವಂತ್ತಿಲ್ಲ. ಇದೆಲ್ಲ ಸವಾಲುಗಳ ಮಧ್ಯೆ ಮಳೆಗಾಲಕ್ಕಿಂತ ಮೊದಲೇ ಕಾಮಗಾರಿ ಪೂರೈಸಿ ವಾಹನ ಓಡಾಟಕ್ಕೆ ಬಿಟ್ಟುಕೊಡಬೇಕಾದ ಅನಿವಾರ್ಯವೂ ಇದೆ. ಕಾಮಗಾರಿಯ ಗುಣಮಟ್ಟ ಕಾಪಾಡುವ ಜತೆಗೆ ಸ್ಥಳೀಯವಾಗಿ ಆಗುತ್ತಿರುವ ನೈಸರ್ಗಿಕ ತೊಂದರೆಗಳನ್ನು ನಿವಾರಿಸಿ, ಹತ್ತಿರದ ಮನೆಗಳಿಗೆ ಅಡಚಣೆಯಾಗದಂತೆ ಕಾಮಗಾರಿ ಮುಗಿಸುವ ಹೊಣೆಗಾರಿಕೆ ಇಲಾಖೆ ಹಾಗೂ ಗುತ್ತಿಗೆದಾರರ ಮೇಲಿದೆ.