Advertisement

ಕೋಡಿಬೆಂಗ್ರೆ-ಹಂಗಾರಕಟ್ಟೆ ಬಾರ್ಜ್‌ ಚಾಲಕರಿಗೆ ಒಂದು ವರ್ಷದಿಂದ ವೇತನ ಇಲ್ಲ

01:35 PM Sep 20, 2022 | Team Udayavani |

ಮಲ್ಪೆ: ಕೋಡಿಬೆಂಗ್ರೆ ಹಂಗಾರಕಟ್ಟೆ ಸಂಪರ್ಕ ಕಲ್ಪಿಸುವ ಮಿನಿ ಬಾರ್ಜ್‌ನಲ್ಲಿ ಸೇವೆಯನ್ನು ನೀಡುತ್ತಿರುವ ಇಬ್ಬರು ದಿನಗೂಲಿ ನೌಕರಿಗೆ ಕಳೆದ ಒಂದು ವರ್ಷದಿಂದ ವೇತನ ಇಲ್ಲದೆ ಅವರ ಬದುಕು ದುಸ್ತರವಾಗಿದೆ.

Advertisement

ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಗೆ ಸೇರಿದ ಬಾರ್ಜ್‌ನಲ್ಲಿ ಕಳೆದ 7 ವರ್ಷದಿಂದ ಕೋಡಿಬೆಂಗ್ರೆಯ ದಿನೇಶ್‌ ಮತ್ತು ಅಶೋಕ್‌ ಚಾಲಕ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಇವರಿಗೆ ವೇತನ ಬಂದಿಲ್ಲ. ಸಂಬಂಧಪಟ್ಟ ಇಲಾಖೆ ಸಂಬಳಕ್ಕಾಗಿ ಇಂದು ನಾಳೆಯೆಂದು ಸತಾಯಿಸುತ್ತಾ ಇದ್ದಾರೆ. ಇದೀಗ ಇವರಿಗೆ ಕನಿಷ್ಠ ಆದಾಯ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಬೇರೆ ಕೆಲಸ ನೋಡಿದರೆ ಬಾರ್ಜ್‌ ಅನ್ನು ಸ್ಥಗಿತಗೊಳಿಸುವ ಪ್ರಸಂಗ ಎದುರಾಗುತ್ತದೆ. ಎರಡು ಪ್ರದೇಶಗಳ ನೂರಾರು ಮಂದಿ ಕಾರ್ಮಿಕರಿಗೆ, ಸ್ಥಳೀಯ ಜನರಿಗೆ ತೊಂದರೆಯಾಗಬಾರದೆಂಬ ಇರಾದೆಯಿಂದ ಇಷ್ಟು ದಿನ ವೇತನ ಇಲ್ಲದೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಬಾರ್ಜ್‌ ಮೂಲಕ ಸಾಗಿದರೆ ತುಂಬಾ ಹತ್ತಿರ

ಅರಬ್ಬಿ ಸಮುದ್ರವನ್ನು ಸೇರುವ ಸೀತಾನದಿಯ ಅಳಿವೆ ಸುತ್ತಲೂ ಸಮುದ್ರ ದಿಂದ ಆವೃತವಾದ ದ್ವೀಪ ಪ್ರದೇಶ ಕೋಡಿಬೆಂಗ್ರೆ. ಇಲ್ಲಿನ ನೂರಾರು ಮನೆಗಳಿದ್ದು, ಸರಕಾರ ಕಚೇರಿ ಹಾಗೂ ಇತರ ಕೆಲಸಗಳಿಗೆ ಮಿನಿ ಬಾರ್ಜ್‌ ಮೂಲಕವೇ ಹಂಗಾರಕಟ್ಟೆ, ಮಾಬುಕಳ, ಸಾಸ್ತಾನಕ್ಕೆ ಭೇಟಿ ನೀಡುತ್ತಾರೆ. ಬಾರ್ಜ್‌ ಹೊರತು ಪಡಿಸಿ ಹಂಗಾರಕಟ್ಟೆ ಕೋಡಿಕನ್ಯಾಣವನ್ನು ಸಂಪರ್ಕಿಸಬೇಕಾದರೆ ಕೆಮ್ಮಣ್ಣು, ಸಂತೆಕಟ್ಟೆ, ಬ್ರಹ್ಮಾವರ ಮೂಲಕ ಕನಿಷ್ಠ 25 ಕಿ.ಮೀ ಸುತ್ತುಬಳಸಿ ಹೋಗಬೇಕು. ಬಾರ್ಜ್‌ ಮೂಲಕ 3-4 ಕಿ. ಮೀ. ಕ್ರಮಿಸಬೇಕಾಗುತ್ತದೆ.

ನಮ್ಮ ಬಾಕಿ ಇರುವ ವೇತನವನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ನಿಮಗೆ ಸಂಬಳದ ಮೊತ್ತ ತತ್‌ಕ್ಷಣ ಕೊಡಲು ಆಗುವುದಿಲ್ಲ. ಅಗತ್ಯ ಇದ್ದರೆ ನೀವು ಬಾರ್ಜ್‌ ಅನ್ನು ಕಟ್ಟಿ ಹೋಗಬಹುದು ಎಂದಿದ್ದಾರೆ. ಇದರಿಂದ ಆವರಿಗೆ ಜನರ ಬಗ್ಗೆ, ನಮ್ಮ ಬಗ್ಗೆ ಇರುವ ಕಾಳಜಿ ಎಷ್ಟೆಂದು ಅರ್ಥವಾಗುತ್ತದೆ ಎನ್ನುತ್ತಾರೆ ಬಾರ್ಚ್‌ ಚಾಲಕ ದಿನೇಶ್‌ ಅವರು.

Advertisement

ತುಕ್ಕು ಹಿಡಿದ ಬಾರ್ಜ್‌

ಈಗಿರುವ ಬಾರ್ಜ್‌ನ ಅಡಿ ಭಾಗದ ಕಬ್ಬಿಣದ ಹಲಗೆ ತುಕ್ಕು ಹಿಡಿದು ಹಾನಿಗೊಂಡಿದೆ. ಮೇಲ್ಭಾಗದಲ್ಲಿ ರಕ್ಷಣ ಗೋಡೆಯೂ ಹಾನಿಯಾಗಿದ್ದು ಸುರಕ್ಷಿತವಾಗಿಲ್ಲ ಎನ್ನಲಾಗಿದೆ. ದುರಸ್ತಿಗಾಗಿ ಹಲವು ಬಾರಿ ದೂರು ನೀಡಲಾಗಿದೆ. ಪ್ರಸ್ತುತ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ದುಡಿಯುತ್ತಿದ್ದು, ತಿಂಗಳಿಗೆ 12 ಸಾವಿರ ರೂ.ಯಂತೆ ವೇತನ ಸಿಗುತ್ತಿದ್ದು ಹೆಚ್ಚುವರಿ ಮಾಡಬೇಕೆಂದು ನೌಕರರು ಆಗ್ರಹಿಸಿದ್ದಾರೆ.

ನಿರೀಕ್ಷಿತ ಉತ್ತರ ಸಿಕ್ಕಿಲ್ಲ: ಒಂದು ವರ್ಷದಿಂದ ಮಾಡಿದ ಕೆಲಸಕ್ಕೆ ವೇತನವೇ ಬಂದಿಲ್ಲ. ಮಾಡಿದ ಸಾಲ ಜಾಸ್ತಿಯಾಗಿದೆ. ಇಲ್ಲಿನ ಜನರಿಗೆ ತೊಂದರೆಯಾಗಬಾರದೆಂದು ಬಾರ್ಜ್‌ ಓಡಿಸುತ್ತಿದ್ದೇವೆ. ಮೀನುಗಾರಿಕಾ ಸಚಿವ ಅಂಗಾರ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಶಾಸಕರಲ್ಲೂ ಮನವಿ ಮಾಡಿದ್ದೇವೆ ನಿರೀಕ್ಷಿತ ಉತ್ತರ ಮಾತ್ರ ಯಾರಿಂದಲೂ ಸಿಕ್ಕಿಲ್ಲ. – ಅಶೋಕ್‌, ಬಾರ್ಜ್‌ ನಿರ್ವಾಹಕ

ವಾರದೊಳಗೆ ಪಾವತಿ: ಕೆಲವೊಂದು ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ವೇತನ ನೀಡುವ ಬಗ್ಗೆ ಈಗಾಗಲೇ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ವಾರದೊಳಗೆ ವೇತನ ಪಾವತಿ ಮಾಡಲಿದ್ದೇವೆ. –ಕ್ಯಾ| ಸಿ. ಸ್ವಾಮಿ, ನಿರ್ದೇಶಕರು, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next