ಮಡಿಕೇರಿ: ಭೀಕರ ಜಲಪ್ರಳಯದ ನೋವಿನ ಕಥೆಗಳು ದಿನಕ್ಕೊಂದರಂತೆ ಹೊರ ಬರುತ್ತಿದ್ದು , ಪ್ರವಾಹದಿಂದ ಪಾರಾಗಲು ಯತ್ನಿಸುವ ವೇಳೆ ಹಸಿ ಬಾಣಂತಿಯೊಬ್ಬಳು ತನ್ನ 20 ದಿನದ ಮಗುವನ್ನೇ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮುಕ್ಕೊಡ್ಲು ಬಳಿ ಶನಿವಾರ ಜಲಪ್ರವಾಹ ಬಂದೆರಗಿದಾಗ ಮುತ್ತು ಮತ್ತು ಸರಸ್ವತಿ ದಂಪತಿ , 20 ದಿನದ ಹೆಣ್ಣು ಮಗು ಮತ್ತು 4 ವರ್ಷದ ಹೆಣ್ಣು ಮಗುವಿನೊಂದಿಗೆ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಲು ಓಡುತ್ತಿದ್ದರು. ಈ ವೇಳೆ ಬಾಣಂತಿ ಸರಸ್ವತಿ ಕೆಸರಿನಲ್ಲಿ ಕಾಲು ಸಿಕ್ಕಿಹಾಕಿಕೊಂಡು ಮುಗ್ಗರಿಸಿ ಬಿದ್ದಿದ್ದು ಕೈ ಯಲ್ಲಿದ್ದ ಮಗುವು ನೆಲಕ್ಕೆ ಬಿದ್ದಿದೆ.
ಮಗುವನ್ನು ಎತ್ತಿಕೊಂಡು ನೋಡಿದಾಗ ಉಸಿರಾಟ ನಿಲ್ಲಿಸಿದೆ. ತನ್ನ ಕಾಲಿಗಾದ ಗಂಭೀರ ಗಾಯವನ್ನೂ ಲೆಕ್ಕಿಸದೆ ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ಮಗುವಿನ ಆರೋಗ್ಯ ಹೇಗಿದೆ ಎಂದು ಕೇಳಿದ್ದಾರೆ. ದುರಂತವೆಂದರೆ ಅದಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ದಂಪತಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಸರಸ್ವತಿ ಎಡಕಾಲಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತೀ ಕ್ಷಣವೂ ನವ ಮಾಸ ಹೊತ್ತು ಹೆತ್ತ ಮಗುವನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಮನೆ, ಮಗು ಕಳೆದುಕೊಂಡ ದಂಪತಿಗೆ ದಿಕ್ಕು ತೋಚದಂತಾಗಿದೆ.