Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ತಾಲೂಕು ಅಧ್ಯಕ್ಷರಾದ ಕೆ. ಅರುಣ್ ಭೀಮಯ್ಯ, ಕಾಂಗ್ರೆಸ್ ಪಕ್ಷದ ಮಂದಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ಇತರರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಳು ಮೆಣಸನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಬಿಜೆಪಿಯ ವಿರೋಧವನ್ನು ಲೆಕ್ಕಿಸದೆ ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿರುವುದೇ ಇಂದಿನ ಆಮದು ನೀತಿಗೆ ಕಾರಣವೆಂದು ಟೀಕಿಸಿದರು.
Related Articles
Advertisement
ಆಮದು ಕಾಯ್ದೆಯನ್ನು ವ್ಯಾಪಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆಯೆಂದು ಅರುಣ್ ಭೀಮಯ್ಯ ಸ್ಪಷ್ಟಪಡಿಸಿದರು. ಕಳೆೆದ ತಿಂಗಳು ಕೇಂದ್ರ ವಾಣಿಜ್ಯ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದಾಗ ಕಾಳುಮೆಣಸಿನ ಆಮದಿನಿಂದ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಬಿಜೆಪಿಯ ಹಿರಿಯ ಮುಖಂಡರ ನಿಯೋಗ ಮನವರಿಕೆ ಮಾಡಿಕೊಟ್ಟಿದೆ. ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳು ಮೆಣಸನ್ನು ಕಲಬೆರಕೆ ಮಾಡಿ ಕೊಡಗಿನ ಕಾಳು ಮೆಣಸೆಂದು ಮಾರಾಟ ಮಾಡುತ್ತಿರುವುದರಿಂದ ಉತ್ತಮ ಗುಣಮಟ್ಟದ ಕೊಡಗಿನ ಕಾಳುಮೆಣಸಿಗೆ ಭಾರತಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲು ಬೆಲೆ ಕುಸಿತವಾಗಿದೆ.
ಕಲಬೆರಕೆ ಮಾಡುವ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಆಹಾರ ಕಲಬೆರಕೆ ತಡೆ ಕಾಯ್ದೆಯಡಿ ರಾಜ್ಯ ಸರಕಾರವೆ ಕ್ರಮ ಕೈಗೊಳ್ಳಲಿ ಎಂದು ಅರುಣ್ ಭೀಮಯ್ಯ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಘ ನಾಣಯ್ಯ ಮಾತನಾಡಿ, ಕಾಂಗ್ರೆಸ್ಸಿಗರು ಹೋರಾಟ ನಡೆಸುವುದಾದರೆ ತಾಲ್ಲೂಕು ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹದಗೆಟ್ಟ ರಸ್ತೆಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರ ಎದುರು ಪ್ರತಿಭಟನೆ ನಡೆಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಮಾಚಮಾಡ ಸುಮಂತ್, ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಹಾಗೂ ನಗರ ಯುವ ಮೋರ್ಚಾದ ಉಪಾಧ್ಯಕ್ಷರಾದ ಬಿ.ಪಿ. ಡಿಶು ಉಪಸ್ಥಿತರಿದ್ದರು.