ಮಡಿಕೇರಿ: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 74.08 ಮತದಾನ ನಡೆದಿದೆ.
ಮಡಿಕೇರಿಯಲ್ಲಿ ಶೇಕಡಾ 76.12 ಮತ್ತು ವಿರಾಜ ಪೇಟೆಯಲ್ಲಿ ಶೇಕಡಾ 76.03 ಮತದಾನ ನಡೆದಿದೆ. ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿತ್ತು. ಮತ್ತೆ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದ ಅನಂತರ ಮತದಾನ ಚುರುಕುಗೊಂಡಿದೆ.
ಮಡಿಕೇರಿ, ಒಣಚಲು, ಗಾಳಿಬೀಡು, ಸುಂಟಿಕೊಪ್ಪ, ಗರಗಂದೂರು, ಮಾದಾಪುರ, ಹಟ್ಟಿಹೊಳೆ, ಮಕ್ಕಂದೂರು, ಮೂರ್ನಾಡು, ವಿರಾಜಪೇಟೆ, ಆರ್ಜಿ, ಅಮ್ಮತ್ತಿ-ಕಾರ್ಮಾಡು, ಸಿದ್ದಾಪುರ, ನೆಲ್ಯಹುದಿಕೇರಿ, ವಾಲೂ°ರು, ನಂಜರಾಯಪಟ್ಟಣ, ಕುಶಾಲನಗರ, ಸೋಮವಾರಪೇಟೆ, ಗುಡ್ಡೆಹೊಸೂರು, ಕಂಬಿಬಾಣೆ, ಚೆಟ್ಟಳ್ಳಿ ಮತ್ತಿತರೆಡೆ ಮತದಾರರು ಸರದಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ಕಂಡುಬಂತು.
ಮತದಾನ ದಿನವಾದ ಗುರುವಾರ ಮಳೆ ಬಿಡುವು ನೀಡಿತ್ತು. ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ತಮ್ಮ ಮೊಮ್ಮಕ್ಕಳ ಸಹಾಯದೊಂದಿಗೆ ಹಿರಿಯರು ಮತ್ತು ವಿಶೇಷ ಚೇತನರು ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿದರು. ವಿಶೇಷ ಚೇತನರು ತಮ್ಮ ಮೊಮ್ಮಕ್ಕಳ ಸಹಾಯದೊಂದಿಗೆ ಗಾಲಿ ಕುರ್ಚಿ ವಾಹನದ ಮೂಲಕ ಮತಗಟ್ಟೆಗೆ ತೆರಳಿ ಮತ ಹಕ್ಕು ಚಲಾಯಿಸಿದ್ದು ಕಂಡುಬಂದಿತು.
28ನೇ ಬಾರಿಯೂ ಮಿಟ್ಟು ಚಂಗಪ್ಪ ಮೊದಲ ಮತದಾರ
ಮಡಿಕೇರಿ: ಮಡಿಕೇರಿಯ ಸಂತ ಮೈಕಲರ ಶಾಲಾ ಮತಗಟ್ಟೆಯಲ್ಲಿ ಪ್ರಥಮ ಮತದಾರನಾಗಿ ಮತದಾನ ಮಾಡುವ ಮೂಲಕ 28ನೇ ಚುನಾವಣೆಯಲ್ಲೂ ಮೊದಲ ಮತದಾರರಾಗಿ ಹಿರಿಯ ರಾಜಕಾರಣಿ, ಕೆಪಿಸಿಸಿಯ ಹಿರಿಯ ಉಪಾಧ್ಯಕ್ಷ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಗಮನ ಸೆಳೆದರು. ಕಳೆದ ವಿವಿಧ 27 ಚುನಾವಣೆಗಳಲ್ಲಿಯೂ ಮಿಟ್ಟು ಚಂಗಪ್ಪ ಅವರು ಮತದಾನ ಕೇಂದ್ರದಲ್ಲಿ ಮೊದಲ ಮತದಾರರಾಗಿ ಹಕ್ಕು ಚಲಾಯಿಸಿರುವುದು ವಿಶೇಷ.