Advertisement

ಜನತಾ ಕರ್ಫ್ಯೂಗೆ ಕೊಡಗು ಸ್ತಬ್ಧ; ವಿರಾಜಪೇಟೆ ವ್ಯಾಪ್ತಿಯಲ್ಲಿ ಅಭೂತಪೂರ್ವ ಬೆಂಬಲ

10:02 AM Mar 28, 2020 | Sriram |

ಗೋಣಿಕೊಪ್ಪ / ಮಡಿಕೇರಿ: ಕೋವಿಡ್‌ 19 ಹರಡುವ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕರೆನೀಡಿದ ಜನತಾ ಕರ್ಫ್ಯೂ ಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯಿತು. ಬೆಳಗ್ಗೆ 7ರಿಂದ ರಾತ್ರಿ 9ರ ತನಕ ಜನತೆ ತಮ್ಮ ಮನೆಗಳಿಂದ ಹೊರ ಬಾರದೆ ಪ್ರಧಾನಿ ಕರೆಗೆ ಸ್ಪಂದಿಸಿ ಕೋವಿಡ್‌ 19 ವೈರಸ್‌ ವಿರುದ್ಧ ಒಂದು ದಿನದ ಮೌನ ಕ್ರಾಂತಿಗೆ ಕಹಳೆ ಊದಿದರು.

Advertisement

ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಬಾಳಲೆ, ಪೊನ್ನಪ್ಪಸಂತೆ, ಪಾಲಿಬೆಟ್ಟ, ಹುದಿಕೇರಿ, ಶ್ರೀಮಂಗಲ, ಶೆಟ್ಟಿಗೇರಿ, ಕಾನೂರು, ಕುಟ್ಟ ,ನಾಲ್ಕೇರಿ, ಸೇರಿದಂತೆ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕಿನ 38 ಗ್ರಾಪಂ ವ್ಯಾಪ್ತಿಗಳಲ್ಲಿ ಜನತೆಯ ಓಡಾಟ ವಾಹನಗಳ ಸಂಚಾರದ ಸದ್ದುಗದ್ದಲ ಗಳಿಲ್ಲದೆ ನಿರಾವ ಮೌನ ತಾಳಿತ್ತು.
ಪೊನ್ನಂಪೇಟೆಯಲ್ಲಿ ಹಾಲಿನ ಡೈರಿ, ಪತ್ರಿಕೆ ಅಂಗಡಿ ಔಷಧಿ ಮಳಿಗೆಗಳು, ಬಿಟ್ಟು ಬೇರೆ ಯಾವುದೇ ವ್ಯಾಪಾರ ವಹಿವಾಟುಗಳು ನಡೆಯಲಿಲ್ಲ. ಗೋಣಿಕೊಪ್ಪಲಿನಲ್ಲಿ ಬೆಳಿಗ್ಗೆ 7 ಗಂಟೆಯವರೆಗೆ ಹಾಲು ಮತ್ತು ಪತ್ರಿಕೆಗಳ ವಿತರಣೆ ನಡೆಯಿತು.

ಅನಂತರ ಜನಸಂಚಾರ ಇಲ್ಲದೆ ಪಟ್ಟಣ ಮೌನದ ಮುಸುಕು ಹೊದ್ದು ಮಲಗಿತ್ತು. ಕೆಲವರು ದ್ವಿಚಕ್ರ ವಾಹನದಲ್ಲಿ ಓಡಾಡುವುದು ಕಂಡು ಬಂದಿದ್ದರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ.

ಗೋಣಿಕೊಪ್ಪಲಿನ ಶ್ರೀ ಉಮಾಮಹೇಶ್ವರಿ ದೇವಸ್ಥಾನವನ್ನು ಪ್ರಾತಃಕಾಲ ಪೂಜೆಯ ಅನಂತರ ಮುಚ್ಚಲಾಯಿತು ಭಕ್ತಾದಿಗಳಿಗೆ ಪ್ರವೇಶವಿರಲಿಲ್ಲ. ಪೆಟ್ರೋಲ್‌ ಬಂಕ್‌ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಕರೆ ನೀಡಿದರು.

ಗೋಣಿಕೊಪ್ಪದಲ್ಲಿ ಕೆಲವು ಬಂಕುಗಳು ಕಾರ್ಯನಿರ್ವಹಿಸಿದ್ದು ಕಂಡುಬಂದಿತ್ತು. ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಚೆಸ್ಕಂ ಇಲಾಖೆ ಜನರ ಸೇವೆಗಾಗಿ ತೆರೆದಿದ್ದು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಕೇಬಲ್‌ ಕಚೇರಿಯು ತೆರೆದಿತ್ತು.
ಆಟೋ ಚಾಲಕರ ಸಂಘ, ವಾಹನ ಚಾಲಕರ ಸಂಘ, ಬಸ್‌ ಚಾಲಕರ ಮತ್ತು ಮಾಲೀಕರ ಸಂಘ ಜನತ ಕರ್ಫ್ಯೂಗೆ ಬೆಂಬಲ ಸೂಚಿಸಿರುವುದರಿಂದ ಸರ್ವಜನಿಕರ ಸೇವೆಯಿಂದ ಒಂದು ದಿನಕ್ಕೆ ತಾತ್ಕಾಲಿಕವಾಗಿ ವಿಮುಕ್ತಿ ಹೊಂದಿತ್ತು.

Advertisement

ತಿತಿಮತಿ ವ್ಯಾಪ್ತಿಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ತಿತಿಮತಿ ಗ್ರಾಮೀಣ ಭಾಗದಲ್ಲಿ ಬಡ್ಡಿ ಮತ್ತು ಚೀಟಿ ನಡೆಸುವ ತಂಡದವರು ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡುವುದು ಕಂಡುಬಂದಿತ್ತು.

ಗೋಣಿಕೊಪ್ಪ ನಿಲ್ದಾಣ ಬಿಕೋ
ಗೋಣಿಕೊಪ್ಪ ಕೋವಿಡ್‌ 19 ಹಿನ್ನೆಲೆ ಪೊನ್ನಂಪೇಟೆ, ಗೋಣಿಕೊಪ್ಪಲು ಪಟ್ಟಣಗಳಲ್ಲಿ ವ್ಯಾಪಾರ ವಹಿವಾಟುಗಳು ಕ್ಷೀಣಿಸಿರುವುದರಿಂದ ಬಹುತೇಕ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿದರು.

ವಿರಾಜಪೇಟೆ ತಾಲ್ಲೂಕಿನ ಚಿನ್ನ-ಬೆಳ್ಳಿ ವರ್ತಕರ ಸಂಘದ ಕರೆಗೆ ಸ್ಪಂದಿಸಿ ಪೊನ್ನಂಪೇಟೆ ಮತ್ತು ಗೋಣಿಕೊಪ್ಪಲುವಿನ ಚಿನ್ನ-ಬೆಳ್ಳಿ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ತಮ್ಮ ಅಂಗಡಿ ಮಳಿಗೆಗಳಲ್ಲಿ ಕರಪತ್ರಗಳನ್ನು ಅಂಟಿಸುವ ಮೂಲಕ ಜನಜಾಗೃತಿ ಮೂಡಿಸಲು ಮುಂದಾದರು.

ಕೆಲವು ಖಾಸಗಿ ವಾಹನಗಳ ಸಂಚಾರ ಹೊರತುಪಡಿಸಿದಂತೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳಲ್ಲಿ ಸಾರ್ವಜನಿಕರ ಸಂಚಾರ ಕಂಡುಬರಲಿಲ್ಲ. ಹೀಗಾಗಿ ಬಹುತೇಕ ಖಾಸಗಿ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆಟೋ ಚಾಲಕರು ಹಾಗೂ ವಾಹನ ಚಾಲಕರು ಸಾರ್ವಜನಿಕರಿಗೆ ಸ್ಯಾನಿಟೈಸರ್‌ ವಿತರಿಸಿ, ಮಾಸ್ಕ್ಗಳನ್ನು ಧರಿಸುವ ಮೂಲಕ ಕೋವಿಡ್‌ 19 ಬಗ್ಗೆ ಜಾಗೃತಿ ಮೂಡಿಸಲು ಮುಂದಾದರು.

ಗೋಣಿಕೊಪ್ಪದ ಎರಡನೇ ವಿಭಾಗದಲ್ಲಿ ದುಬೈನಿಂದ ಬಂದ ಮಹಿಳೆಯನ್ನು ಪೂರ್ವಭಾವಿ ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಸುಳ್ಳು ವದಂತಿಗಳಿಗೆ ಕಿವಿಗೊಡದೆ ನೈಜ ವಿಚಾರಗಳ ಬಗ್ಗೆ ತಿಳಿದುಕೊಂಡು ಜಾಗೃತರಾಗಬೇಕು ಎಂದು ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ. ಯತಿರಾಜ್‌ ಸಾರ್ವಜನಿಕರಿಗೆ ಕರೆ ನೀಡಿದರು. ಗೋಣಿಕೊಪ್ಪ ಪಂಚಾಯಿತಿ ವತಿಯಿಂದ ಪಟ್ಟಣದ ಬೀದಿಗಳಲ್ಲಿ ಕೀಟನಾಶಕ ಔಷಧಿಗಳನ್ನು ಸಿಂಪಡಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್‌ ಅವರು ತಾವೇ ಖುದ್ದು ಔಷಧಿ ಸಿಂಪಡಿಸಲು ಪೌರ ಕಾರ್ಮಿಕರೊಂದಿಗೆ ಕೈಜೋಡಿಸಿದರು.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಗೆ ಸಾರ್ವಜನಿಕರ ಪ್ರವೇಶವನ್ನು ಈ ತಿಂಗಳ 31ರ ವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಗ್ರಾಮಸ್ಥರಿಗೆ ದೂರವಾಣಿ ಮತ್ತು ಇಮೈಲ್‌ಗ‌ಳ ಮೂಲಕ ತಮ್ಮ ಸೇವೆಗೆ ಪಂಚಾಯಿತಿ ಅನುಕೂಲ ಕಲ್ಪಿಸಿದೆ ಎಂದು ಪಿ.ಡಿ.ಓ ಮಾಹಿತಿ ನೀಡಿದ್ದಾರೆ.

ಪೊನ್ನಂಪೇಟೆ ಗ್ರಾ.ಪಂ. ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೋನಿ ಮತ್ತು ಬಡಾವಣೆಯ ನಿವಾಸಿಗಳಿಗೆ ಮಾಸ್ಕ್ ಗಳನ್ನು ವಿತರಿಸಿದರು.

ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಪಾಲಿಬೆಟ್ಟ ಭಾಗಗಳಲ್ಲಿ ಮೀನು, ಮಾಂಸ ಮಾರಾಟದ ಮಳಿಗೆಗಳನ್ನು ಮುಚ್ಚಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next