Advertisement

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

08:24 PM Aug 07, 2022 | Team Udayavani |

ಬೆಂಗಳೂರು: ಹಲವು ದಿನಗಳಿಂದ ಬೆಂಗಳೂರು ಸಹಿತ ಹಲವೆಡೆ ಸುರಿಯುತ್ತಿರುವ ಮಳೆ ರವಿವಾರವೂ ಮುಂದುವರಿದಿದೆ. ಮಳೆ ಸಂಬಂಧಿ ಅವಘಡಕ್ಕೆ ರಾಮನಗರ ಜಿಲ್ಲೆ ಕುದೂರು ಹಾಗೂ ಹಾಸನದ ಚನ್ನರಾಯಪಟ್ಟಣದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

Advertisement

ಶೆಡ್‌ನ‌ಲ್ಲಿ ಮಲಗಿದ್ದವರ ಮೇಲೆ ಪಕ್ಕದ ಮನೆಯ ದನದ ಕೊಟ್ಟಿಗೆಯ ಗೋಡೆ ಬಿದ್ದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಕುದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಎನ್‌.ಎಚ್‌-75 ರ ಸೋಲೂರು ಬಳಿ ಶನಿವಾರ ಮಧ್ಯರಾತ್ರಿ ಸಂಭವಿಸಿದೆ.

ನೇಪಾಲ ಮೂಲದ ಕೂಲಿ ಕಾರ್ಮಿಕರ ಮಕ್ಕಳಾದ ಫರ್ಬಿನ್‌ (4) ಇಷಿಕಾ (3) ಮೃತಪಟ್ಟವರು.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು, ಬಾಗೂರು ಹೋಬಳಿ ಕಲ್ಲೇಸೋಮನಹಳ್ಳಿಯ ತಿಮ್ಮ ಶೆಟ್ಟಿ (40) ಅವರು ಚನ್ನರಾಯಪಟ್ಟಣದಿಂದ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಬಾಗೂರು ರಸ್ತೆ ಮಾಳೆಕೊಪ್ಪಲು ಬಳಿ ಬೃಹತ್‌ ಮರವೊಂದು ಅವರು ಸಂಚರಿಸುತ್ತಿದ್ದ ಬೈಕ್‌ ಮೇಲೆ ಬಿದ್ದಿದೆ. ಪರಿಣಾಮ ಅವರು ಮೃತಪಟ್ಟಿದ್ದಾರೆ.

ಕುಸಿಯುವ ಸ್ಥಿತಿಯಲ್ಲಿ ದೇಗುಲ
ದಕ್ಷಿಣ ಬದರೀಕಾಶ್ರಮವೆಂದೇ ಪ್ರಖ್ಯಾತವಾದ ಮೇಲುಕೋಟೆಯ ಶ್ರೀಬದರೀನಾರಾಯಣ ಸ್ವಾಮಿ ದೇಗುಲ ಮಳೆಯಿಂದಾಗಿ ಅಪಾಯದ ಅಂಚಿನಲ್ಲಿದೆ. ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯಕ್ಕಿಂತಲೂ ಪುರಾತನ ದೇಗುಲ ಎಂಬ ಇತಿಹಾಸ ಹೊಂದಿರುವ ಬದರಿನಾರಾಯಣನ ಸನ್ನಿಧಿಯ ಇಡೀ ಕಟ್ಟಡ ನಿರಂತರ ಮಳೆಯಿಂದಾಗಿ ಸೋರುತ್ತಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗುತ್ತಿದೆ. ಇಲ್ಲಿನ ಕಲ್ಲಿನ ಬೃಹತ್‌ ತೊಲೆಯೊಂದು ಕುಸಿದಿದ್ದು, ಇತರ ತೊಲೆಗಳು ಶಿಥಿಲಾವಸ್ಥೆ ತಲುಪಿ ಕುಸಿಯುವ ಹಂತದಲ್ಲಿವೆ.

Advertisement

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಅಣೆಕಟ್ಟಿನಿಂದ 1,01,211 ಕ್ಯೂಸೆಕ್‌ ನೀರನ್ನು ರವಿವಾರ ಮಧ್ಯಾಹ್ನದಿಂದ ಕಾವೇರಿ ನದಿ ಮೂಲಕ ಹೊರ ಬಿಡಲಾಗಿದ್ದು, ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮುಳುಗಡೆ ಹಂತಕ್ಕೆ ತಲುಪಿರುವ ಕಾರಣ ನದಿ ತೀರದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಭಾಗಮಂಡಲ, ಮಡಿಕೇರಿ ಸೇರಿ ಕಾವೇರಿ ಕಣಿವೆ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಣೆಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

ಕೊಡಗಿನಲ್ಲಿ ಹಲವು ರಸ್ತೆಗಳು ಜಲಾವೃತ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆ ತೀವ್ರತೆ ಪಡೆದುಕೊಂಡಿದೆ. ಬಿಡುವು ನೀಡದ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ. ಇಲ್ಲಿನ ಶ್ರೀಭಗಂಡೇಶ್ವರ ದೇವಾಲಯದ ಆವರಣಕ್ಕೆ ಪ್ರವಾಹದ ನೀರು ಬಂದಿದೆ.

ಮಳೆ ಮತ್ತಷ್ಟು ಹೆಚ್ಚಾದರೆ ಪ್ರವಾಹದಿಂದ ಭಾಗಮಂಡಲ- ಮಡಿಕೇರಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳಿಗೆ. ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ನಿರಂತರ ಮಳೆಯಾಗುತ್ತಿರುವ ಗಡಿಭಾಗ ಕರಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮರಗಳು ಧರೆಗುರುಳಿದ್ದು, ಗುಡ್ಡ ಕುಸಿದಿದೆ. ಮಳೆಹಾನಿ ಪ್ರದೇಶಗಳ ಪರಿಶೀಲನೆಗೆಂದು ತೆರಳಿದ್ದ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಮರ ಮತ್ತು ಗುಡ್ಡದ ಮಣ್ಣು ತೆರವುಗೊಳಿಸುವವರೆಗೆ ಸುಮಾರು ಒಂದೂವರೆ ಗಂಟೆ ಕಾಲ ರಸ್ತೆಯಲ್ಲೇ ಉಳಿಯಬೇಕಾಯಿತು.
ದಕ್ಷಿಣ ಕೊಡಗು ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ವ್ಯಾಪ್ತಿಯಲ್ಲಿ ಕಳೆದ 5 ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಗ್ರಾಮದ ಬೆಳೆಗಾರ ಚೊಟ್ಟಂಗಡ ಬೋಸ್‌ ಅವರ ಮನೆಯ ಸಮೀಪ ಕಾಫಿ ತೋಟದಲ್ಲಿ ಜಲಸ್ಫೋಟ ಉಂಟಾಗಿದೆ. ಕೊಡಗಿನಲ್ಲಿ ಮಳೆ ಮುಂದುವರಿದಿದ್ದು, ಜು.8 ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಕೊಲ್ಲೂರು, ಭಾಗಮಂಡಲ: 16 ಸೆಂ.ಮೀ. ಮಳೆ
ಬೆಂಗಳೂರು: ಭಾನುವಾರ ಬೆಳಗ್ಗೆ 8.30ಕ್ಕೆ ಅಂತ್ಯವಾದ 24 ತಾಸುಗಳ ಅವಧಿಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಯಿತು. ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಕೊಡಗಿನ ಭಾಗಮಂಡಲದಲ್ಲಿ ತಲಾ 16 ಸೆಂ.ಮೀ. ಮಳೆಯಾಗಿದ್ದು, ಇದು ರಾಜ್ಯದಲ್ಲಿಯೇ ಅಧಿಕವಾಗಿತ್ತು. ಮಂಗಳವಾರ ಬೆಳಗ್ಗೆವರೆಗಿನ ಅವಧಿಯಲ್ಲಿ ರಾಜ್ಯದ ಎಲ್ಲೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next