Advertisement

ಕೊಡಚಾದ್ರಿ: ಸ್ವಚ್ಛ ಪರಿಸರಕ್ಕೆ ಭದ್ರತೆಯ ಠೇವಣಿ

02:53 PM Jun 05, 2021 | Adarsha |

ಕೊಲ್ಲೂರು: ಇಲ್ಲಿ ಚಾರಣ, ವಿಹಾರ, ಪ್ರವಾಸಕ್ಕೆ ಬರುವವರು ತಾವು ಒಯ್ಯುವ ಪ್ಲಾಸ್ಟಿಕ್‌ ನೀರಿನ ಬಾಟಲಿ, ಖಾದ್ಯ ಪೊಟ್ಟಣ ಇತ್ಯಾದಿ ಪ್ರತಿ ವಸ್ತುವಿಗೂ ಠೇವಣಿ ಪಾವತಿಸಬೇಕು. ಹಿಂದಿರುಗುವಾಗ ಅವನ್ನು ಎಸೆಯದೆ ಹಿಂದೆ ತಂದಿದ್ದರೆ ಮಾತ್ರ ಠೇವಣಿ ವಾಪಸ್‌. ಅಲ್ಲೇ ಎಸೆದು ಪರಿಸರ ಮಾಲಿನ್ಯ ಉಂಟುಮಾಡಿದರೆ ದಂಡ, ಜತೆಗೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ…

Advertisement

ಇದು ಕೊಡಚಾದ್ರಿಯ ಪಾವಿತ್ರ್ಯದ ಜತೆಗೆ ಅಲ್ಲಿ ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಕೊಡಚಾದ್ರಿ ಪರಿಸರ ಅಭಿವೃದ್ಧಿ ಸಮಿತಿ ಕಟ್ಟಿನಹೊಳೆ ಮತ್ತು ಕೊಲ್ಲೂರು ವನ್ಯಜೀವಿ ವಲಯ, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇವರ ವಿನೂತನ ಜಂಟಿ ಪ್ರಯತ್ನ. ಪರಿಣಾಮವಾಗಿ ಈಗ ಕೊಡಚಾದ್ರಿ ಪ್ಲಾಸ್ಟಿಕ್‌ ಮುಕ್ತ ಪರಿಸರವಾಗಿ ಪರಿವರ್ತನೆಗೊಳ್ಳುತ್ತಿದೆ.

ಕಂಡುಕೊಂಡರು ಹೊಸ ಮಾರ್ಗ: ಪ್ರವಾಸಿಗರು ತಾವು ತರುವ ಪ್ಲಾಸ್ಟಿಕ್‌ ಬಾಟಲಿ, ಆಹಾರ ಪೊಟ್ಟಣ ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲಿ ಎಸೆದು ಸಾಗುವ ಪರಿಪಾಠ ಇತ್ತು. ಇದನ್ನು ನಿಯಂತ್ರಿಸ ಹಲವು ಬಾರಿ ಮೌಖೀಕವಾಗಿ ತಿಳಿಸಿದ್ದರೂ ಫ‌ಲ ನೀಡಿರಲಿಲ್ಲ. ಕೊಡಚಾದ್ರಿಗೆ ಭೇಟಿ ನೀಡುವ ಪ್ರತಿಯೊಬ್ಬನೂ ಪ್ರವೇಶದ್ವಾರದಲ್ಲಿ ತಾನು ಒಯ್ಯುವ ಪ್ರತಿ ವಸ್ತುವಿಗೂ ನಿರ್ದಿಷ್ಟ ಭದ್ರತ ಠೇವಣಿ ಪಾವತಿಸಬೇಕು. ಏನೆಲ್ಲ ಒಯ್ಯುತ್ತಿದ್ದಾರೆ ಎನ್ನುವುದನ್ನು ಕಡತದಲ್ಲಿ ನಮೂದಿಸಲಾಗುತ್ತದೆ, ವಿಡಿಯೊ ಮೂಲಕವೂ ಚಿತ್ರೀಕರಿಸಲಾಗುತ್ತದೆ. ಹಿಂದಿರುಗುವಾಗ ಕಟ್ಟಿನಹೊಳೆ ಗೇಟಿನಲ್ಲಿ ಠೇವಣಿ ರಸೀದಿ ತೋರಿಸಬೇಕು. ಅಲ್ಲಿರುವ ಸಿಬಂದಿ ಒಯ್ದ ವಸ್ತುಗಳಿಗೂ ಹಿಂದಿರುಗುವಾಗ ಇರುವ ವಸ್ತುಗಳಿಗೂ ತಾಳೆ ನೋಡುತ್ತಾರೆ. ಒಯ್ದ ಎಲ್ಲವನ್ನೂ ಹಿಂದಕ್ಕೆ ತಂದಿದ್ದಲ್ಲಿ ಮಾತ್ರ ಪೂರ್ಣ ಠೇವಣಿ ವಾಪಸ್‌ ಮಾಡಲಾಗುತ್ತದೆ. ತಾರದೆ ಇದ್ದಲ್ಲಿ ದಂಡ ವಿಧಿಸಲಾಗುತ್ತದೆ.

ನಿರ್ವಹಣೆಗೆ ಆದಾಯ

Advertisement

 ಪ್ಲಾಸ್ಟಿಕ್‌ ವಸ್ತುಗಳ ಭದ್ರತ ಠೇವಣಿಯಿಂದ ಇಲ್ಲಿಯ ವರೆಗೆ 50,178 ರೂ. ಆದಾಯ ಸಂಗ್ರಹವಾಗಿದೆ. ಶುಲ್ಕ, ದಂಡ ಇತ್ಯಾದಿಗಳಿಂದ ಶನಿವಾರ, ರವಿವಾರಗಳಲ್ಲಿ 30 ಸಾವಿರ ರೂ.ಗೂ ಮಿಕ್ಕಿ ಹಣ ಸಂಗ್ರಹವಾಗುತ್ತಿತ್ತು. ಈ ಮೊತ್ತದಲ್ಲಿ 10 ಸಿಬಂದಿಗಳ ನಿರ್ವಹಣ ವೆಚ್ಚ ನೀಡಲಾಗುತ್ತಿದೆ. ಮಿಕ್ಕಿದ ಹಣದಲ್ಲಿ ಕೊಡಚಾದ್ರಿಯ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ.

ತ್ಯಾಜ್ಯ ಮುಕ್ತ ಕೊಡಚಾದ್ರಿಯಾಗಿ ಪರಿವರ್ತಿಸುವುದರೊಡನೆ ಪ್ರವಾಸಿಗರನ್ನು ಆಕರ್ಷಿಸಲು ಹೆಚ್ಚು ಒತ್ತು ಕೊಡಲು ಅನೇಕ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರ ಸಹಕಾರ ಕೂಡ ಅತೀ ಅಗತ್ಯ.

ರೂಪೇಶ್‌, ಅರಣ್ಯಾಧಿಕಾರಿ

ಕೊಡಚಾದ್ರಿ ಬೆಟ್ಟದ ಪಾವಿತ್ರ್ಯ ಕಾಪಾಡುವುದರೊಡನೆ ಪರಿಸರ ನೈರ್ಮಲ್ಯಕ್ಕೆ ಒತ್ತು ಕೊಟ್ಟು ಹೊಸ ಯೋಜನೆ ರೂಪಿಸಿದ್ದೇವೆ. ಬಹುತೇಕ ಕಡೆ ತ್ಯಾಜ್ಯ ಬಹಳ ಕಡಿಮೆಯಾಗಿದೆ. ಸಮಿತಿಯ ಪ್ರಯತ್ನಕ್ಕೆ ಪ್ರವಾಸಿಗರು ಕೈಜೋಡಿಸಬೇಕು.

ಸುಬ್ರಮಣ್ಯ ಭಟ್‌ ಕೆ.ಡಿ. ಅಧ್ಯಕ್ಷರು, ಪರಿಸರ ಸಂರಕ್ಷಣ ಸಮಿತಿ, ಕೊಡಚಾದ್ರಿ

ಎಷ್ಟು ಶುಲ್ಕ, ಠೇವಣಿ?

ಜೀಪ್‌ ಪ್ರವೇಶ: 100 ರೂ. ಪಾರ್ಕಿಂಗ್‌: 30 ರೂ.  ಪ್ರತೀ ಪ್ರವಾಸಿ: 50 ರೂ. ಚಾರಣಿಗರು: 400 ರೂ. ಪ್ಲಾಸ್ಟಿಕ್‌ ಬಾಟಲಿ: ತಲಾ 50 ರೂ. ಪ್ಲಾಸ್ಟಿಕ್‌ ಕವರ್‌: ತಲಾ 20 ರೂ.

ಡಾ.ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next