Advertisement

ಕೊಚ್ಚಿ-ಬೆಂಗಳೂರು ಅನಿಲ ಪೈಪ್‌ಲೈನ್‌ ಯೋಜನೆ: ಕೇರಳದಲ್ಲಿ ವಿಘ್ನ

12:47 PM Nov 03, 2017 | Team Udayavani |

ಕಲ್ಲಿಕೋಟೆ/ಮಂಗಳೂರು: ಕೊಚ್ಚಿ-ಕುಟ್ಟನಾಡ್‌-ಬೆಂಗಳೂರು-ಮಂಗಳೂರು ಎಲ್‌ಎನ್‌ಜಿ ಯೋಜನೆಗೆ ಮತ್ತಷ್ಟು ಅಡ್ಡಿ ಆತಂಕ ಎದುರಾಗಿದೆ. 
ಕೇರಳದ ಮುಕ್ಕಮ್‌ ಎಂಬ ಗ್ರಾಮದ ವ್ಯಾಪ್ತಿಯಲ್ಲಿ ಯೋಜನೆಗೆ ತೀವ್ರ ಅಡ್ಡಿ ಎದುರಾಗಿದ್ದು, ಸ್ಥಳೀಯ ಗ್ರಾಮಸ್ಥರು ಸತತ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪೈಪ್‌ಗ್ಳನ್ನು ಹಾಕಲು ನೆಲ ಅಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Advertisement

ಬುಧವಾರವೂ ರೈತರ ಪ್ರತಿಭಟನೆ ತಾರಕಕ್ಕೇರಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಹೀಗಾಗಿ ಭಾರಿ ಪೊಲೀಸ್‌ ಭದ್ರತೆಯಲ್ಲೇ ಗುರುವಾರ ಕೆಲಸ ಶುರುವಾಗಿದ್ದು, ಈ ಸಂದರ್ಭದಲ್ಲೂ ಕೆಲ ಕಿಡಿಗೇಡಿಗಳು ಕಾರ್ಮಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ, ರಸ್ತೆಯಲ್ಲಿ ಟೈರ್‌ ಇಟ್ಟು ಸುಟ್ಟಿದ್ದಾರೆ. ಪೊಲೀಸರು ಸುಮಾರು 4 ಕಿ.ಮೀ.ಗಳ ವರೆಗೆ ಭದ್ರತೆ ನೀಡಿದ್ದಾರೆ.

ಈ ಮಧ್ಯೆ, ಕಲ್ಲುತೂರಾಟ ನಡೆಸಿದ ಸಂಬಂಧ 30 ಮಂದಿಯನ್ನು ಬಂಧಿಸಿರುವುದಾಗಿ ಮುಕ್ಕಂನ ಪೊಲೀಸರು ಹೇಳಿದ್ದಾರೆ. ತಿರುವಂಬಾಡಿ ವಿಧಾನಸಭಾ ಕ್ಷೇತ್ರದ ಮೂರು ಪಂಚಾಯತಿಗಳಲ್ಲಿ ಈ ಮಾರ್ಗ ಹಾದು ಹೋಗುತ್ತಿದ್ದು, ಪ್ರತಿಪಕ್ಷ ಯುಡಿಎಫ್ ನೇತೃತ್ವದಲ್ಲೇ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಕಳೆದ ಹಲವಾರು ತಿಂಗಳುಗಳಿಂದಲೇ ಇಲ್ಲಿನ ರೈತರು ಪ್ರತಿಭಟನೆ ನಡೆಸುತ್ತಿದ್ದು ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲವೆಂದು ಹಠ ಹಿಡಿದಿದ್ದಾರೆ. ಅಲ್ಲದೆ ಮರು ಸರ್ವೇ ಮಾಡಿ, ಬೇರೆ ಕಡೆಯಲ್ಲಿ ಪೈಪ್‌ಲೈನ್‌ ತೆಗೆದುಕೊಂಡು ಹೋಗುವಂತೆ ಆಗ್ರಹಿಸಿದ್ದಾರೆ. 

2010ರಲ್ಲಿ ರಾಜ್ಯದ ವೀರಪ್ಪ ಮೊಯ್ಲಿ ಅವರು ಇಂಧನ ಸಚಿವರಾಗಿದ್ದ ವೇಳೆ ಉದ್ಘಾಟನೆಗೊಂಡಿದ್ದ ಈ ಯೋಜನೆ 2013ರಲ್ಲೇ ಮುಗಿಯಬೇಕಿತ್ತು. ಆದರೆ, ಪದೇ ಪದೆ ಅಡ್ಡಿ ಆತಂಕ ಎದುರಾದ ಹಿನ್ನೆಲೆಯಲ್ಲಿ 2015ಕ್ಕೆ ಮುಗಿಸುವ ಗುರಿ ಇರಿಸಿಕೊಳ್ಳಲಾಗಿತ್ತು. 4,493 ಕೋಟಿ ರೂ.ಗಳ ಭಾರಿ ಯೋಜನೆಗೆ ಮತ್ತೆ ಅವಕಾಶ ಸಿಕ್ಕಿದ್ದು 2019ರ ಫೆಬ್ರವರಿಗೆ ಮುಗಿಯಬೇಕಿದೆ. ಆದರೆ ರೈತರ ಸತತ ಪ್ರತಿರೋಧದಿಂದಾಗಿ ಈ ಗುರಿಯೊಳಗೆ ಮುಗಿಯುವುದೇ ಎಂಬ ಆತಂಕವೂ ಎದುರಾಗಿದೆ.

ಈ ಮಧ್ಯೆ ಕಳೆದ ತಿಂಗಳ 5ರಂದು ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ಯೋಜನೆಗೆ ಆಗುತ್ತಿರುವ ಅಡ್ಡಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆಗ ತಮಿಳುನಾಡಿನಲ್ಲಿ ರೈತರು ಈ ಯೋಜನೆಗೆ ಅಡ್ಡಿ ಮಾಡುತ್ತಿದ್ದುದನ್ನು ಪ್ರಸ್ತಾಪಿಸಿದ್ದರು. ರೈತರ ಮನವೊಲಿಕೆ ಮಾಡಿ ಯೋಜನೆಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸೂಚಿಸಿದ್ದರು. 

Advertisement

ಏನಿದು ಯೋಜನೆ?: ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಎಲ್‌ಎನ್‌ಜಿಯನ್ನು ಸಂಗ್ರಹಿಸಿಟ್ಟುಕೊಳ್ಳಲು ಕೊಚ್ಚಿಯಲ್ಲಿ ಸ್ಥಳವಿಲ್ಲ. ಹೀಗಾಗಿ ಕೊಚ್ಚಿಯಿಂದ ಶುರುವಾಗುವ ಈ ಪೈಪ್‌ಲೈನ್‌ ಬೆಂಗಳೂರು ಮತ್ತು ಮಂಗಳೂರಿಗೆ ಪ್ರತ್ಯೇಕವಾಗಿ ಸಂಪರ್ಕಿಸುತ್ತದೆ.

ಅಂದರೆ ಕೊಚ್ಚಿಯಿಂದ ಕಲ್ಲಿಕೋಟೆ, ಕಣ್ಣೂರು, ಕಾಸರಗೋಡು ಮತ್ತು ಮಂಗಳೂರಿಗೆ ಒಂದು ಮಾರ್ಗ, ಇನ್ನೊಂದರಲ್ಲಿ ಕೊಚ್ಚಿಯಿಂದ ಶುರುವಾಗಿ ಪಾಲಕ್ಕಾಡ್‌, ಕೊಯಮತ್ತೂರು, ಈರೋಡ್‌, ಸೇಲಂ, ಕೃಷ್ಣಗಿರಿ ಮತ್ತು ಬೆಂಗಳೂರಿಗೆ ತಲುಪಲಿದೆ. ಈ ಪೈಪ್‌ಲೈನ್‌ನಿಂದಾಗಿ ಸಾಗಾಟ ಮತ್ತು ಕೊಚ್ಚಿಗೆ ಬರುವ ದ್ರವೀಕೃತ ಅನಿಲವನ್ನು ಬೆಂಗಳೂರು ಮತ್ತು ಮಂಗಳೂರಿಗೆ ಸಾಗಿಸಬಹುದಾಗಿದೆ. ಆರಂಭದಲ್ಲಿ 3000 ಕೋಟಿ ರೂ.ಗಳ ಯೋಜನೆಯಾಗಿದ್ದ ಇದು ಬಳಿಕ 4,493 ಕೋಟಿ ರೂ.ಗಳಿಗೆ ತಲುಪಿದೆ. 

ಈಗಾಗಲೇ ಬೆಂಗಳೂರಿನ ಮನೆ ಮನೆಗೂ ದ್ರವೀಕೃತ ನೈಸರ್ಗಿಕ ಅನಿಲವನ್ನು ಪೈಪ್‌ಗ್ಳ ಮೂಲಕ ನೀಡುವ ಯೋಜನೆ ಶುರುವಾಗಿದೆ. ಇದಕ್ಕೆ ಮಹಾರಾಷ್ಟ್ರದ ದಾಬೋಲ್‌ನಿಂದ ಬಿಡದಿಗೆ ಅನಿಲ ಪೈಪ್‌ಲೈನ್‌ ಮೂಲಕವೇ ಬರುತ್ತಿದೆ. ಹಾಗೆಯೇ ಕೊಚ್ಚಿಯಿಂದಲೂ ಬೆಂಗಳೂರಿಗೆ ಎಲ್‌ಎನ್‌ಜಿ ಪೈಪ್‌ಲೈನ್‌ ಮೂಲಕ ಬಂದರೆ ಇನ್ನಷ್ಟು ಉಪಯೋಗವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next