Advertisement

ವಿದ್ಯಾರ್ಥಿಗಳಿಗೆ ಜ್ಞಾನ ಹಂಚಿಕೆ ಕೌಶಲ್ಯ ತರಬೇತಿ ಕಾರ್ಯಾಗಾರ

08:42 PM Mar 01, 2020 | Team Udayavani |

ಹುಣಸೂರು: ವಿದ್ಯಾರ್ಥಿಗಳು ಪದವಿ ನಂತರ ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳಬೇಕು. ಯುವಸಮೂಹ ಉನ್ನತ ಪ್ರತಿಭೆಗಳಿಂದ ಕೂಡಿದ್ದರೂ ಅದರ ಸದ್ಬಳಕೆಯಾಗುತ್ತಿಲ್ಲ. ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಯುವಜನತೆ‌ ಅಡ್ಡದಾರಿ ಹಿಡಿಯುತ್ತಿದೆ ಎಂದು ಶಾಸಕ ಎಚ್‌.ಪಿ. ಮಂಜುನಾಥ್‌, ವಿಷಾದಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ದೇವರಾಜ ಅರಸು ಪ್ರಥಮದರ್ಜೆ ಕಾಲೇಜು, ಜ್ಞಾನಧಾರ ಪ್ರಥಮದರ್ಜೆ, ಇ-ಚಾನೆಲ್‌ ಹಾಗೂ ಶಾಸಕರ ಸಹಕಾರದೊಂದಿಗೆ ತಾಲೂಕಿನ 8 ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಪದವಿ ನಂತರ ಮುಂದೇನು, ಕೌಶಲ್ಯ ಬೆಳೆಸಿಕೊಳ್ಳುವ, ಸಂದರ್ಶನ ಎದುರಿಸುವ ಬಗೆ, ತಮ್ಮೊಳಗಿನ ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತು ಆಯೋಜಿಸಿದ್ದ ಜ್ಞಾನ ಹಂಚಿಕೆಯ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಯುವಕರು ಅಸಾಧಾರಣ ಪ್ರತಿಭೆಯುಳ್ಳವರಾಗಿದ್ದು, ಅವರನ್ನು ನಿರ್ದಿಷ್ಟ ದಿಕ್ಕಿಗೆ ಹೋಗುವಂತೆ ಪ್ರೇರೇಪಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿದ್ಯಾರ್ಥಿಗಳ ಮನಸನ್ನು ಅರಿತು ಅವರಿಗೆ ದಾರಿ ತೋರಿ, ಅವರ ಲೋಪದೋಷಗಳನ್ನು ಸರಿಪಡಿಸಬೇಕಿದೆ. ಈ ಕಾರ್ಯಾಗಾರದಲ್ಲಿ ಪದವಿ ನಂತರ ಮುಂದೇನು, ತಂತ್ರಜ್ಞಾನಗಳ ಸದ್ಬಳಕೆ ಹೇಗೆ, ಆತ್ಮಸ್ಥೈರ್ಯ ಗಳಿಸುವುದು ಹೇಗೆ ಎಂಬ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ನೀವು ಅನುಸರಿಸಿದ್ದೇ ಆದಲ್ಲಿ ಗುರಿ ಸಾಧಿಸಬಹುದು ಎಂದರು.

ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಲ್ಲೂ ಇಂತಹ ಪ್ರಯತ್ನ ನಡೆದಿಲ್ಲ. ನಾನು ಹೆಚ್ಚಿನ ಆಸಕ್ತಿ ವಹಿಸಿ ಇದನ್ನು ಆಯೋಜಿಸಿದ್ದೇನೆ. ನನ್ನ ಅಧಿಕಾರಾವಧಿ ಇರುವವರೆಗೂ ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು. ಜಿಪಂ ಸದಸ್ಯೆ ಡಾ.ಪುಷ್ಪಾ ಅಮರನಾಥ್‌ ಮಾತನಾಡಿ, ವಿದ್ಯಾರ್ಥಿಗಳು ನಿಮ್ಮ ಪ್ರಗತಿಗಾಗಿ, ಕೌಶಲ್ಯತೆಯ ಬೆಳವಣಿಗೆಗೆ ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಜ್ಞಾನ ವೃದ್ಧಿಸಿಕೊಳ್ಳಲು ವಯಸ್ಸಿನ ಮಿತಿ ಇಲ್ಲ, ನೀವು ಜೀವನದಲ್ಲಿ ಆತ್ಮವಿಶ್ವಾಸ, ಧೈರ್ಯ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು.

ಕಾರ್ಯಾಗಾರದಲ್ಲಿ ಅರಸು ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಕಾರ್ಯಕ್ರಮ ಸಂಯೋಜಕ ಸಹಾಯಕ ಪ್ರಾಧ್ಯಾಪಕ ಆರ್‌.ಗುರುಸ್ವಾಮಿ, ಗಣೇಶ್‌ಕಿತ್ತೂರು, ಜ್ಞಾನಧಾರಾ ಪ್ರಾಂಶುಪಾಲ ಕೆ.ಎಚ್‌.ಜಗದೀಶ್‌ ಮಾತನಾಡಿದರು. ಪದವಿ ನಂತರ ಮುಂದೇನು ಕುರಿತು ಸಂಪನ್ಮೂಲ ವ್ಯಕ್ತಿ ಸುಧೀಂದ್ರ ಮಾಹಿತಿ ನೀಡಿದರು. ಈಕ್ವಿಲೈಸರ್‌ ಆರ್‌.ಸಿ.ಎಂ. ಸಂಸ್ಥೆಯ ಅಮಿತ್‌ ಸೇರಿದಂತೆ ತಾಲೂಕಿನ 8 ಪದವಿ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next