Advertisement

ಕಲ್ಯಾಣ ಕಾರ್ಯಕ್ರಮ ತಿಳಿವಳಿಕೆ ಮೂಡಿಸಿ

07:13 AM Mar 01, 2019 | |

ತುಮಕೂರು: ಸರ್ಕಾರದಿಂದ ಬಡಜನರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದ್ದರೂ ಕೆಲವರಿಗೆ ತಿಳಿವಳಿಕೆ ಕೊರತೆಯಿಂದ ಪಡೆಯಲು ಸಾಧ್ಯವಾಗದ ಕಾರಣ ನಗರ ಪ್ರದೇಶದ ಕೊಳಗೇರಿಗಳಲ್ಲಿ ಬಡತನ ಇನ್ನು ಹೆಚ್ಚುತ್ತಿದ್ದು, ಹೀಗಾಗಿ ಜಾಗೃತಿ ಮೂಡಿಸಿ ಎಂದು ತುಮಕೂರು ಮಹಾನಗರ ಪಾಲಿಕೆ ಉಪಮೇಯರ್‌ ರೂಪಶ್ರೀ ಸಲಹೆ ನೀಡಿದರು.

Advertisement

ನಗರದ ಎನ್‌.ಆರ್‌.ಕಾಲೋನಿ ಶೈಕ್ಷಣಿಕ ಭವನದಲ್ಲಿ ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದ ವಿವಿಧ ವಸತಿ ಯೋಜನೆಗಳು ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ ಶಿಬಿರದಲ್ಲಿ ಮಾತನಾಡಿ, ಸರ್ಕಾರದ ಸೌಲಭ್ಯಗಳು ಹೆಚ್ಚು ಬಡ ಜನರು ಪಡೆಯದೆ ಇರಲು ಅವರಿಗೆ ಮಾಹಿತಿ ಕೊರತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಇಂಥ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ನುಡಿದರು. 

ಸರ್ಕಾರದ ಸೌಲಭ್ಯ: ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಜಿ.ಪಿ.ದೇವರಾಜು ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ 34 ಇಲಾಖೆಗಳಲ್ಲಿ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಪ್ರಮುಖವಾಗಿ ನಗರ ಪ್ರದೇಶದ ಕೊಳಗೇರಿಗಳಲ್ಲಿ ವಿಶೇಷವಾಗಿ ತಳಸಮುದಾಯಗಳಿಗೆ ಸರ್ಕಾರಿ ಯೋಜನೆಗಳ ಅರಿವಿಲ್ಲದೇ ವಿದ್ಯಾಭಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಪೌರ ಕಾರ್ಮಿಕರ ಹಾಗೂ ಹಮಾಲಿ ಕಾರ್ಮಿಕರಾಗಿ ದುಡಿಮೆಗೆ ಮುಖ ಮಾಡುತ್ತಿದ್ದಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯಿಂದ ದಲಿತರ ಶಿಕ್ಷಣ ಮಟ್ಟ ಹೆಚ್ಚಿಸಲು ಹಾಸ್ಟೆಲ್‌ ಸೌಲಭ್ಯ, ವಿದ್ಯಾರ್ಥಿ ವೇತನ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಶೇ.24.10 ರ ಯೋಜನೆ: ಈ ಸಮುದಾಯದವರು ಅಂತರ್‌ಜಾತಿ ವಿವಾಹವಾದರೆ, ಪರಿಶಿಷ್ಟ ಜಾತಿಯ ಒಳ ಪಂಗಡಗಳಲ್ಲಿ ವಿವಾಹವಾಗುವವರಿಗೆ, ಸರಳ ವಿವಾಹವಾಗುವವರಿಗೆ ಮತ್ತು ವಿಧವಾ ಪುನರ್‌ ವಿವಾಹವಾಗುವವರಿಗೆ ಹಾಗೂ ದೇವದಾಸಿ ಮಕ್ಕಳ ವಿವಾಹವಾಗುವವರಿಗೆ ಸರ್ಕಾರದಿಂದಲೇ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕೇಂದ್ರಿಯ ಮಾದರಿ ಶಾಲೆಗಳಾದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ಶಾಲೆ,

Advertisement

ಏಕಲವ್ಯ ಶಾಲೆಗಳಿಗೆ ನಗರ ಪ್ರದೇಶದ ಮಕ್ಕಳ ಸೇರ್ಪಡೆ ಪ್ರಮಾಣ ಕಡಿಮೆಯಾಗುತ್ತಿದೆ. ಶೇ.24.10 ರ ಯೋಜನೆಯಡಿಯಲ್ಲಿ ದಲಿತ ಸಮುದಾಯಗಳಿಗೆ ಅಗತ್ಯವಿರುವ ಸೌಲಭ್ಯಗಳ ಆಧಾರದ ಮೇಲೆ ಇಲಾಖೆಗಳು ತಮ್ಮ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕಿದೆ ಎಂದು ನುಡಿದರು. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌ ಮಾತನಾಡಿ, ಇತ್ತೀಚಿಗೆ ಚಿಕ್ಕವಯಸ್ಸಿನಲ್ಲೇ ಪ್ರೀತಿ, ವಿವಾಹ, ಮತ್ತು ದುಶ್ಚಟಗಳಿಂದ ಸ್ಲಂನಲ್ಲಿರುವ ಯುವಜನರು ಬಲಿಯಾಗುತ್ತಿದ್ದು, ಇದರಿಂದ ಹೊರಬೇಕು ಎಂದು ಹೇಳಿದರು.

ಮತದಾರರ ಪ್ರಾತ್ಯಕ್ಷಿಕೆ: ವಿವಿ ಪ್ಯಾಟ್‌ನಿಂದ ಮತಚಲಾವಣೆ ಖಾತರಿ, ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿ ಎಂದು ನಿರ್ಮಿತಿ ಕೇಂದ್ರದ ರಾಜಶೇಖರ್‌ ಮತದಾರರ ಪ್ರಾತ್ಯಕ್ಷಿಕೆ ನೆರವೇರಿಸಿಕೊಟ್ಟು ವಿವಿಪ್ಯಾಟ್‌ನಲ್ಲಿ ಮತ ಚಲಾವಣೆ ಖಾತ್ರಿ ಕುರಿತು ತಿಳಿಸಿದರು. 

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಸುಬ್ಬನಾಯ್ಕ, ಕೊಳಗೇರಿ ಅಭಿವೃದ್ಧಿ ಮಂಡಳಿ ತುಮಕೂರು ವಿಭಾಗದ ವ್ಯವಸ್ಥಾಪಕ ಶಂಕರ್‌, ಪರಿಶಿಷ್ಟ ಪಂಗಡಗಳ ಜಿಲ್ಲಾ ಅಧಿಕಾರಿ ರಾಜ್‌ ಕುಮಾರ್‌, ಕೊಳಗೇರಿ ಹಿತರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಶೆಟ್ಟಾಳಯ್ಯ, ಅರುಣ್‌ ಹಾಗೂ ರಘು ಮೊದಲಾದವರು ಇದ್ದರು.

ವಿವಿಧ ಯೋಜನೆಗಳಡಿ ಮನೆ ಮಂಜೂರು: ತುಮಕೂರು ನಗರಕ್ಕೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಿಂದ 1,470 ಮನೆಗಳ ಮಂಜೂರಾಗಿದ್ದು, ಈಗಾಗಲೇ ಕೊಳಗೇರಿ ಮುಕ್ತ ನಗರವಾಗಿಸಲು ಈ ಭಾಗದಲ್ಲಿ ರಾಜೀವ್‌ ಆವಾಸ್‌ ಯೋಜನೆಯಡಿಯಲ್ಲಿ ನಗರದಲ್ಲಿ 2,754 ಮನೆಗಳನ್ನು ಕರ್ನಾಟಕ ಕೊಳಗೇರಿ ಮಂಡಳಿಯಿಂದ ನಿರ್ಮಿಸಲಾಗಿದೆ.

ಮುಂದೆ ಸರ್ವರಿಗೂ ಸೂರು ಯೋಜನೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಘೋಷಿತ 14 ಕೊಳಚೆ ಪ್ರದೇಶಗಳಲ್ಲಿ 1,470 ಮನೆಗಳನ್ನು ನಿರ್ಮಿಸಿಕೊಡಲು ಅನುಮೋದನೆ ನೀಡಿದ್ದಾರೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೊಳಚೆ ನಿವಾಸಿಗಳು ಇದರ ಪ್ರಯೋಜನ ಪಡೆದಿಕೊಳ್ಳಬಹುದು. ಕೊಳಚೆ ಪ್ರದೇಶಗಳ ಘೋಷಣೆ, ಪರಿಚಯ ಪತ್ರ ವಿತರಣೆ ಮತ್ತು ಮೂಲ ಸೌಲಭ್ಯ ಮಂಡಳಿಯಿಂದ ನೀಡಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ತುಮಕೂರು ವಿಭಾಗದ ವ್ಯವಸ್ಥಾಪಕ ಶಂಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next