Advertisement

‘ಪ್ರಕೃತಿ ಹಿಂಸೆ ತಡೆಯುವ ಅರಿವು ಅಗತ್ಯ’

02:13 PM Oct 26, 2017 | Team Udayavani |

ಪುತ್ತೂರು: ಕಾಡು ನಾಶದಿಂದ ತೊಡಗಿ ಹಲವು ರೀತಿಯಲ್ಲಿ ಪ್ರಕೃತಿ ಮೇಲಿನ ಹಿಂಸೆ ನಡೆಯುತ್ತಲೇ ಇದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಜೀವ ವೈವಿಧ್ಯ ಮಂಡಳಿ ತಾಲೂಕು ನಿರ್ವಹಣೆ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಹೇಳಿದರು.

Advertisement

ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ವತಿಯಿಂದ ಪುತ್ತೂರು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಬುಧವಾರ ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌ನ ಜೀವ ವೈವಿಧ್ಯ ನಿರ್ವಹಣೆ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಆಧುನಿಕ ಜಗತ್ತುನ ಬದಲಾವಣೆ ವೇಗವಾಗಿ ನಡೆಯುತ್ತಿದೆ. ಇದರ ನಡುವೆ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಹಿಂದಿನ ವರ್ಷವೇ ಕೆಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜೀವ ವೈವಿಧ್ಯದ ದಾಖಲಾತಿ ಸಂಗ್ರಹಿಸಲಾಗಿದೆ. ನಮ್ಮ ಪರಿಸರದಲ್ಲಿರುವ ಪ್ರಾಣಿ, ಸಸ್ಯ ಸೇರಿದಂತೆ ಜೀವ ಪ್ರಭೇದದ ದಾಖಲಾತಿ ಸಂಗ್ರಹಿಸಲಾಗಿದೆ. ಇದರ ಮಾಹಿತಿಯನ್ನು ನಾಟಿ ವೈದ್ಯರಿಂದ ತಿಳಿದುಕೊಳ್ಳಲಾಗಿದೆ. ಮುಂದೆ ಇದನ್ನು ಏನು ಮಾಡಬೇಕು. ಮಾತ್ರವಲ್ಲ, ಹೆಚ್ಚಿನ ಹಿತಿಯನ್ನು ಹೇಗೆ ಸಂಗ್ರಹಿಸಬೇಕು ಎಂಬ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಲಾಗುವುದು ಎಂದರು.

ಉಳಿಸುವ ಕೆಲಸ ಆಗಬೇಕು
ಇದೀಗ ಮಾಹಿತಿ ಕಾರ್ಯಾಗಾರವಷ್ಟೇ ನಡೆಯಲಿದೆ. ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟಕ್ಕೆ ಹೋಗಿ, ಪ್ರಾಯೋಗಿಕ ಕೆಲಸ ನಡೆಸಲಾಗುವುದು. ಇದಕ್ಕೆ ಪತ್ರಕರ್ತರ ಸಂಘವೂ ಸೇರಿಕೊಳ್ಳಲಿದೆ. ಗ್ರಾಮದಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹವಾಗಲಿದೆ. ಇದನ್ನು ಉಳಿಸುವ ಕೆಲಸ ಆಗಬೇಕು ಎಂದರು.

ಪ್ರಕೃತಿ ನಾಶಕ್ಕೆ ನಾವೇ ಕಾರಣ
ರಾಜ್ಯ ಜೀವ ವೈವಿಧ್ಯ ಮಂಡಳಿಯ ತಾಂತ್ರಿಕ ನಿರ್ವಾಹಕಿ ಐಶ್ವರ್ಯ ಮಾತನಾಡಿ, ಪ್ರಕೃತಿ ಹಾಳಾಗಲು ನಾವೇ ಕಾರಣ. ಮಿತಿಮೀರಿದ ಪ್ಲಾಸ್ಟಿಕ್‌ ಬಳಕೆ, ಗುಬ್ಬಚ್ಚಿಗಳ ಅಳಿವಿಗೆ ಕಾರಣವಾದ ಅತಿಯಾದ ಮೊಬೈಲ್‌ ಬಳಕೆಗೆ ಆದ್ಯತೆ ನೀಡುತ್ತಿದ್ದೇವೆ.

Advertisement

ನಮ್ಮ ಅಗತ್ಯಕ್ಕೆ ಎಷ್ಟು ಅಗತ್ಯವೋ ಅಷ್ಟನ್ನು ಬಳಸುವುದನ್ನು ಬಿಟ್ಟು, ಅತಿಯಾದ ಬಳಕೆ ಮಾಡುತ್ತಿದ್ದೇವೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸಾಕಷ್ಟು ಜೀವ ವೈವಿಧ್ಯ ಇದೆ. ಮಕ್ಕಳು ಪುಸ್ತಕದಲ್ಲಿದ್ದ ಮಾಹಿತಿಯನ್ನು ಮಾತ್ರ ಕಲಿಯುತ್ತಿದ್ದಾರೆ. ಪ್ರಾಯೋಗಿಕ ಮಾಹಿತಿ ಗೊತ್ತೇ ಇಲ್ಲ. ಮಕ್ಕಳಿಗೆ ಮಾಹಿತಿ ನೀಡಿ, ಅವರಿಂದಲೇ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.

ತಾಲೂಕು ಪಂಚಾಯತ್‌ ಸದಸ್ಯರಾದ ಲಲಿತಾ ಈಶ್ವರ್‌, ಕುಸುಮಾ, ಯೋಜನಾಧಿಕಾರಿ ಗಣಪತಿ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್‌ನ ಶಿವಪ್ರಕಾಶ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರೋತ್ಸಾಹ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಮಾತನಾಡಿ, ಜೀವ ವೈವಿಧ್ಯವನ್ನು ಉಳಿಸಲು ಪ್ರೋತ್ಸಾಹ ನೀಡಬೇಕಿದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆಯಬೇಕಿದೆ. ಇದರಿಂದ ಮಾನವ ಸಂಕುಲಕ್ಕೆ ಪ್ರಯೋಜನವೇನು, ಪೂರಕ ಹೇಗೆ ಎಂಬ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಎಲ್ಲ ಸಂಘ ಸಂಸ್ಥೆಗಳು ಜಾಗೃತರಾಗಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next