ಕಲಬುರಗಿ: ಕನ್ನಡ ಭಾಷಾ ಜ್ಞಾನ ಎಲ್ಲರೂ ಅರಿತರೆ ಅದುವೇ ದೊಡ್ಡ ಹೆಮ್ಮೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸಂಶೋಧನಾ ಪಿಎಚ್‌ಡಿ ಪದವಿ ಪುರಸ್ಕೃತ ಆದರ್ಶ ಶಿಕ್ಷಕ ಡಾ| ಡಿ.ಎನ್. ಪಾಟೀಲ ಹೇಳಿದರು.
ನಗರದ ಎನ್‌ಎಸ್‌ಎಸ್ ಕರಿಯರ್ ಅಕಾಡೆಮಿಯಲ್ಲಿ ಸಂಶೋಧನಾ ಪಿಎಚ್‌ಡಿ ಪಡೆದಿದ್ದಕ್ಕೆ ಹಾಗೂ ಕಸಾಪ ನೂತನ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರಿಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾಡು ನುಡಿ ಬಗ್ಗೆ ಎಲ್ಲರಲ್ಲೂ ಹೆಚ್ಚಿನ ಅಭಿಮಾನ, ಹೆಮ್ಮೆ ಮೂಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಸಾಪ ನೂತನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ನಮ್ಮ ಭಾಗದ ಹಲವು ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ, ಅವರನ್ನು ಗುರುತಿಸುವ ಕಾರ್ಯಕ್ರಮಗಳನ್ನು ಜಾಸ್ತಿ ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.
ನಮ್ಮ ನೆಲ, ಜಲದ ಸಮಸ್ಯೆಗಳ ಜೊತೆಗೆ, ನಮ್ಮ ಜಾನಪದ ಕಲೆಗಳ, ಸಾಹಿತ್ಯದ ಪ್ರಕಾರಗಳ ಬಗ್ಗೆ ಪ್ರತಿ ಹಳ್ಳಿ, ಪ್ರತಿ ಶಾಲೆಯಲ್ಲಿ ಜಾಗೃತಿಗಾಗಿ ಕನ್ನಡ ಸಾಹಿತ್ಯ ಪರಿಷತ್ ಮಾಡಲಿದೆ ಎಂದು ತಿಳಿಸಿದರು.
ಎನ್‌ಎಸ್‌ಎಸ್ ಅಕಾಡೆಮಿ ನಿರ್ದೇಶಕರಾದ ಸಂತೋಷ ಜವಳಿ, ಮಲ್ಲಿಕಾರ್ಜುನ ಬುಳ್ಳ, ಶಿಕ್ಷಕರಾದ ಸಂತೋಷಕುಮಾರ ಖಾನಾಪುರೆ, ಯೋಗಿಶ ಭಂಡಾರಿ, ಚಂದ್ರಶೇಖರ ಕಟ್ಟಿಮನಿ ಮಾತನಾಡಿದರು. ಸಹ ಶಿಕ್ಷಕ ಶಬ್ಬೀರ ವಾಲಿಕಾರ ಸ್ವಾಗತಿಸಿದರು, ಸಂತೋಷ ಹೂಗಾರ ನಿರೂಪಿಸಿದರು. ನಿವೃತ್ತ ಶಿಕ್ಷಕ ಎಸ್.ಜಿ. ಪಾಟೀಲ, ಗೆಳೆಯರ ಬಳಗದ ಶ್ರೀಶೈಲ ಸಾಲಿಮಠ, ಶರಣರಾಜ್ ಚಪ್ಪರಬಂದಿ, ಮೂಲಗೆ, ಪ್ರಿಯಾ ಮತ್ತಿತರರು ಇದ್ದರು.