ಕೋಲಾರ: ಗ್ರಾಹಕರಿಗೆ ಇರುವ ಸೇವೆಗಳು ಮತ್ತು ಕಾನೂನಿನ ಕುರಿತಾದ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದಾಗ ಗ್ರಾಹಕ ಸೇವೆಯಲ್ಲಾಗುತ್ತಿರುವ ಮೋಸ ತಡೆಯಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಜಿ.ಶಿರೋಳ್ ತಿಳಿಸಿದರು.
ನಗರದ ಜಿಲ್ಲಾ ಸಹಕಾರ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹಳಷ್ಟು ಕಡೆ ಅರಿವು, ಮಾಹಿತಿ ಕೊರತೆಯಿಂದಾಗಿ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಗ್ರಾಹಕನನ್ನು ಜಾಗೃತಗೊಳಿಸಿದಾಗ ಇಂತಹ ಮೋಸ ತಡೆಯೊಡ್ಡಬಹುದು. ಯಾವುದೇ 100 ರೂ., ವೆಚ್ಚಕ್ಕಿಂತ ಮೇಲ್ಪಟ್ಟ ವಸ್ತುಗಳನ್ನು ಖರೀದಿಸಿದಾಗ ನಂತರ ಮೋಸ ಕಂಡು ಬಂದರೆ ದೂರು ದಾಖಲಿಸಲು ರಸೀದಿ ಕಡ್ಡಾಯವಾಗಿ ಇರಬೇಕು ಎಂದರು.
ತೆರಿಗೆ ಕಟ್ಟಬೇಕಲ್ಲ ಎನ್ನುವ ಪರಿಪಾಠದಿಂದ ರಸೀದಿ ಪಡೆಯದ ಜನ ಹೆಚ್ಚಾಗುತ್ತಿದ್ದಾರೆ. ಇಂತಹ ಸಭೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಭಾಗವಹಿಸಿ ವಿಚಾರಗಳನ್ನು ತಿಳಿದು ಬಾರದೇ ಇರುವವರಿಗೆ ತಿಳಿಸಿಕೊಡಬೇಕೆಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಕೆ.ಎನ್.ಲಕ್ಷ್ಮೀàನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 3.50 ಲಕ್ಷ ಕುಟುಂಬಗಳಿದ್ದರೂ ಕೇವಲ 25 ದೂರು ಬಂದಿವೆ ಎಂದರು. ವಕೀಲ ಕೆ.ವಿ.ಸುರೇಂದ್ರ ಕುಮಾರ್, ಗ್ರಾಹಕರ ಮನೆ ಬಾಗಿಲಿಗೆ ಮಾಹಿತಿ ತಿಳಿಸಿಕೊಡಲು ಕಾನೂನು ಸೇವೆಗಳ ಪ್ರಾಧಿಕಾರದಿಂದ ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಕಾಯ್ದೆ ಇಲಾಖೆ ಡಾ.ಚಾರಣಿ, ಜಿಪಂನ ಚಂದ್ರಪ್ಪ ಮಾದರಿ ಮತದಾನ ಪ್ರಕ್ರಿಯೆ ಬಗ್ಗೆ ಅಣಕು ಮತದಾನ ಮತ್ತು ನೈತಿಕ ಮತದಾನದ ಬಗ್ಗೆ ಮಾತನಾಡಿದರು.
ರಾಜ್ಯ ಕ್ರಿಯೇಟ್ ಸಂಸ್ಥೆ ಅಧ್ಯಕ್ಷ ವೈ.ಜಿ.ಮುರಳೀಧರನ್, ಆಹಾರ ಸುರಕ್ಷತಾ ಅಧಿಕಾರಿ ಕೆ.ಆರ್.ವೆಂಕಟರಾಜು, ಎಸ್.ಒ.ಜಯಕುಮಾರ್, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷೆ ಕೆ.ಎಸ್. ನಾಗವೇಣಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕ ಕೆ.ಪಿ.ಮಧುಸೂದನ್ ಮತ್ತಿತರರಿದ್ದರು.