ಬೆಂಗಳೂರು: ರಕ್ತದಾನದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕು ಎಂದು ಲೇಖಕ ಡಾ.ನಾ.ಸೋಮೇಶ್ವರ್ ಅಭಿಪ್ರಾಯಪಟ್ಟರು.
ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ಶಾಖೆ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪಘಾತ ಹಾಗೂ ಪ್ರಸವದ ಸಂದರ್ಭದಲ್ಲಿ ರಕ್ತ ದೊರೆಯದೆ ಹೆಚ್ಚು ಜನ ಮೃತಪಡುತ್ತಾರೆ. ಹೀಗಾಗಿ ರಕ್ತದಾನ ಮಾಡುವ ಮೂಲಕ ಜೀವಗಳ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ರಾಸಾಯನಿಕ ವಸ್ತುಗಳಿಂದ ಕೃತಕ ರಕ್ತ ಸಂಶೋಧಿಸಲಾಗಿದ್ದರೂ ಅದು ಆಮ್ಲಜನಕವನ್ನು ಮಾತ್ರ ಕೊಂಡೊಯ್ಯುವ ಕೆಲಸ ಮಾಡುತ್ತದೆ. ನೈಜ ರಕ್ತಕ್ಕೆ ಸಮನಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ಇದರಿಂದ ಶರೀರದ ತೂಕ ನಿಯಂತ್ರಣ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗಲಿದೆ ಎಂದರು.
ಸಂಸ್ಥೆಯ ರಾಜ್ಯ ಶಾಖೆ ಸಮನ್ವಯಾಧಿಕಾರಿ ಕೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಸಂಗ್ರಹವಾಗುತ್ತಿರುವ ರಕ್ತದ ಪ್ರಮಾಣಕ್ಕೆ ಹೋಲಿಸಿದರೆ, ಬೇಡಿಕೆ ಹೆಚ್ಚಾಗಿದೆ. ಸಂಸ್ಥೆಯ ವತಿಯಿಂದ ಕಳೆದ ವರ್ಷ ರಾಜ್ಯದಲ್ಲಿ 33,643 ಯುನಿಟ್ ರಕ್ತ ಸಂಗ್ರಹಿಸಿದ್ದು, ಈ ಬಾರಿ ಹೆಚ್ಚು ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ 12 ಮಂದಿಗೆ ಇದೇ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ 50ಕ್ಕೂ ಹೆಚ್ಚು ಸೈನಿಕರು ರಕ್ತದಾನ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಸಂಸ್ಥೆಯ ರಾಜ್ಯ ಶಾಖೆ ಪ್ರಧಾನ ಕಾರ್ಯದರ್ಶಿ ಎಸ್.ಅಶೋಕ್ ಕುಮಾರ್ ಶೆಟ್ಟಿ, ಇತರರು ಹಾಜರಿದ್ದರು.