ಹುಣಸೂರು: ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ರಷ್ಟು ಫಲಿತಾಂಶದ ಜೊತೆಗೆ ಪ್ರತಿವರ್ಷ ಅತ್ಯುತ್ತಮ ಸಾಧನೆಗೈಯುತ್ತಿರುವ ತಾಲೂಕಿನ ಬಿಳಿಕೆರೆ ಹೋಬಳಿಯ ಮನುಗನಹಳ್ಳಿ ಸರಕಾರಿ ಪ್ರೌಢಶಾಲೆಯು ಇತರೆ ಶಾಲೆಗಳಿಗೆ ಮಾದರಿಯಾಗಿದೆ ಎಂದು ಸಾಹಿತಿ ಹಾಗೂ ಅಂಕಣಕಾರ ಬನ್ನೂರು ಕೆ. ರಾಜು ಪ್ರಶಂಸಿಸಿದರು.
ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಮೈಸೂರಿನ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು ಈ ಶಾಲೆಯ ವಿದ್ಯಾರ್ಥಿಗಳ ಸಾಧನೆಯು ಇತರೆ ಶಾಲೆಗಳು ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಗಳಿಸುವ ಜೊತೆಗೆ ಜ್ಞಾನಾರ್ಜನೆ ಉದ್ದೀಪನಗೊಳಿಸುವ ವಿಷಯಗಳ ಕಡೆಗೂ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.
ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರಾದ ನಿವೃತ್ತ ಶಿಕ್ಷಕ ಸಂಗಪ್ಪ ಮಾತನಾಡಿ, ಈ ಸರಕಾರಿ ಶಾಲೆಯ ಶಿಕ್ಷಕರ ಅವಿರತ ಶ್ರಮದಿಂದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೆ„ದಿದ್ದು, ಇಂಥ ಶಾಲೆಯಲ್ಲಿ ವ್ಯಾಸಂಗ ಮಾಡಿದ ನೀವು ಉನ್ನತ ಹುದ್ದೆ, ಯಾವುದೇ ಕ್ಷೇತ್ರದಲ್ಲಿದ್ದರೂ ಓದಿದ ಶಾಲೆಯನ್ನು ಮರೆಯಬೇಡಿ, ಅದರ ಪ್ರಗತಿಗೆ ನೆರವಾಗಿರೆಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಗೀತಾ ಈ ಬಾರಿ ಶೇ 100 ರಷ್ಟು ಫಲಿತಾಂಶದ ಜೊತೆಗೆ ಅಭಿಷೇಕ್ ಎಂಬ ವಿದ್ಯಾರ್ಥಿ 591 ಅಂಕಗಳಿಸಿ ತಾಲೂಕಿಗೆ ಮೂರನೇ ಸ್ಥಾನ ಪಡೆದಿರುವುದು, ಈತ ಕನ್ನಡ 125, ಸಮಾಜ ವಿಜ್ಞಾನ 100 ಹಾಗೂ ಗಣೇಶ ಮತ್ತು ನಿಸರ್ಗ ಕನ್ನಡ ವಿಷಯದಲ್ಲಿ 125 ಅಂಕಗಳಿಸಿ ಮತ್ತು ಪಲ್ಲವಿ ಸಹ ಉತ್ತಮ ಅಂಕ ಪಡೆದಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ,
ಈ ಶಾಲೆಯ ಪ್ರಗತಿಕಂಡು ಪ್ರತಿಷ್ಟಾನದವರು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತಿವರ್ಷ ಮಕ್ಕಳನ್ನು ಅಭಿನಂದಿಸುತ್ತಿರುವುದು ಸಂತಸ ತಂದಿದ್ದು, ಮುಂದೆ ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡಿದೆ ಎಂದರು. ಕಾವೇರಿ ಬಳಗದ ಅಧ್ಯಕ್ಷೆ ಕಾವೇರಮ್ಮ ಮಾತನಾಡಿದರು. ದಾನಿ ಅಂಕನಹಳ್ಳಿ ಮಹೇಶ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಲೇಖನ ಸಾಮಗ್ರಿ ವಿತರಿಸಿದರು. ನಿವೃತ್ತ ಎಂಜಿನಿಯರ್ ಸಣ್ಣಗೋವಿಂದೇಗೌಡ ಭಾಗವಹಿಸಿದ್ದರು. ಪ್ರತಿಷ್ಠಾನದವತಿಯಿಂದ ಸಾಧಕ ವಿದ್ಯಾರ್ಥಿಗಳೊಂದಿಗೆ ಶಾಲೆಯ ಎಲ್ಲ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು.