Advertisement
ಕಾಯಕಯೋಗಿ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಹಾಗೂ ಮಂಗಳವಾರ ರಜೆ ಘೋಷಿಸಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮನೆಯಿಂದ ಹೊರಬರುವ ಪ್ರಯತ್ನ ಮಾಡಲಿಲ್ಲ.
Related Articles
Advertisement
ಕುಂಚ ನಮನ: ಕೆ.ಆರ್.ವೃತ್ತದಲ್ಲಿ ಮೈಸೂರು ಜಿಲ್ಲಾ ಕುಂಚ ಕಲಾವಿದರ ಸಂಘದಿಂದ ಡಾ.ಶಿವಕುಮಾರ ಮಹಾಸ್ವಾಮಿಗಳ ಭಾವಚಿತ್ರ ರಚಿಸಿ, ದಾಸೋಹ ತಿಲಕ, ವಿದ್ಯಾದಾನ ತಿಲಕ, ದಾಸೋಹ ಗುರುವಿಗೆ ನಮನ ಎಂಬ ಶೀರ್ಷಿಕೆ ನೀಡಲಾಗಿತ್ತು. ಮೈಸೂರು ಕನ್ನಡ ವೇದಿಕೆವತಿಯಿಂದ ಅಗ್ರಹಾರದ ತ್ಯಾಗರಾಜ ರಸ್ತೆ ಬಳಿ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಬ್ಬು ಬೆಳೆಗಾರರ ಸಂಘ: ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದ ಗನ್‌ಹೌಸ್ ಬಳಿಯ ಕುವೆಂಪು ಉದ್ಯಾನದಲ್ಲಿ ಶಿವಕುಮಾರ ಸ್ವಾಮೀಜಿಗಳ ಗೌರವಾರ್ಥ ಶ್ರದ್ಧಾಂಜಲಿ ಸಭೆನಡೆಸಿ, ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಶಿವಕುಮಾರ ಮಹಾಸ್ವಾಮಿಗಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ನೀಡಬೇಕು. ಜೊತೆಗೆ ದಾಸೋಹಕ್ಕೆ ಹೆಸರಾಗಿದ್ದ ಶ್ರೀಗಳ ಹೆಸರನ್ನು ಬಿಸಿಯೂಟ ಯೋಜನೆಗೆ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಯುಗಾಂತ್ಯ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆವತಿಯಿಂದ ಬಸವಣ್ಣನವರ ಪ್ರತಿಮೆ ಬಳಿ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, 12ನೇ ಶತಮಾನದ ಬಸವಣ್ಣನವರ ತತ್ವ-ಸಿದ್ಧಾಂತವನ್ನು ಪಾಲಿಸಿದ ಮಹಾನ್ ವ್ಯಕ್ತಿ ಸಿದ್ಧಗಂಗಾ ಶ್ರೀಗಳು.
ಶಿವಕುಮಾರ ಮಹಾಸ್ವಾಮಿಗಳ 89 ವರ್ಷಗಳ ಪರಿಶ್ರಮದಿಂದ ಸಿದ್ಧಗಂಗಾ ಮಠ ಇಂದು ಪ್ರಪಂಚದಲ್ಲೇ ಪ್ರಸಿದ್ಧಿಯಾಗಿದೆ. ಕಾಯಕ ಯೋಗಿ ಶಿವಕುಮಾರಸ್ವಾಮಿಗಳ ನಿಧನದಿಂದ ಯುಗಾಂತ್ಯವಾದಂತಾಗಿದೆ. ಆದರೆ, ಅವರು ಜೀವಿಸಿದ್ದ ಈ ಶತಮಾನ ಮುಂದಿನ ಶತಮಾನಕ್ಕೆ ನಾಂದಿಯಾಗಿದೆ ಎಂದರು.
ಕಸಾಪ: ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಂ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಕನ್ನಡ ಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಮೊದಲಾದವರು ಈ ವೇಳೆ ಪುಷ್ಪ ನಮನ ಸಲ್ಲಿಸಿದರು.
ಬಸವ ಸಮಿತಿ: ಮೈಸೂರಿನ ರಾಮಕೃಷ್ಣ ನಗರದ ಬಸವ ಸೇವಾ ಸಮಿತಿವತಿಯಿಂದ ರಾಮಕೃಷ್ಣ ಪರಮಹಂಸರ ಪ್ರತಿಮೆ ಮುಂಭಾಗ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವಿರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಸೇರಿದಂತೆ ಹಲವರು ಹಾಜರಿದ್ದರು.
ಜೆಎಸ್‌ಎಸ್: ಜೆಎಸ್‌ಎಸ್ ಮಹಾ ವಿದ್ಯಾಪೀಠದಲ್ಲಿ ಶಿವಕುಮಾರಸ್ವಾಮೀಜಿಗಳಿಗೆ ಗೌರವ ನಮನ ಸಲ್ಲಿಸಲಾಯಿತು. ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಾಹಕ ಡಾ.ಸಿ.ಜಿ.ಬೆಟಸೂರ್ ಮಠ, ಚಿದ್ರೆ ಶಂಕರಯ್ಯಸ್ವಾಮಿ ಮೊದಲಾದವರು ಪುಷ್ಪ ನಮನ ಸಲ್ಲಿಸಿದರು. ಮಹಾಜನ ಪ್ರಥಮ ದರ್ಜೆ ಕಾಲೇಜು, ಶ್ರೀನಟರಾಜ ಕಾಲೇಜುಗಳಲ್ಲಿ ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳ ಸ್ಮರಣೆ ಮಾಡಲಾಯಿತು.
ಪೊಲೀಸರಿಂದ ಶ್ರದ್ಧಾಂಜಲಿ: ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆ ಮುಂಭಾಗ ಶಿವಕುಮಾರ ಮಹಾಸ್ವಾಮಿಗಳ ಭಾವಚಿತ್ರವಿರಿಸಿ ಪುಷ್ಪ ನಮನದ ಮೂಲಕ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಭಜನೆ: ಅಗ್ರಹಾರದ 101 ಗಣಪತಿ ದೇವಸ್ಥಾನದ ಮುಂಭಾಗ ಶಿವಕುಮಾರ ಸ್ವಾಮಿಗಳ ಭಕ್ತವೃಂದದಿಂದ ಲಿಂಗೈಕ್ಯ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸ್ಕೃತ ಪಾಠಶಾಲಾ ವೃತ್ತದಲ್ಲಿ ಭಕ್ತರು ಭಜನೆಯ ಮೂಲಕ ಗೌರವ ನಮನ ಸಲ್ಲಿಸಿದರು.
ಭೈರವ ಮಠ: ಶಿವಕುಮಾರ ಸ್ವಾಮೀಜಿಗಳ ನಿಧನದ ಹಿನ್ನೆಲೆಯಲ್ಲಿ ಭಾರತೀಯ ಗೋಪರಿವಾರ ಹಮ್ಮಿಕೊಂಡಿದ್ದ ಅಭಯಾಕ್ಷರ ಮೆರವಣಿಗೆಯನ್ನು ರದ್ದುಪಡಿಸಿ, ದೇವರಾಜ ಮೊಹಲ್ಲಾದಲ್ಲಿನ ತ್ರಿಪುರ ಭೈರವಿ ಮಠದ ಆವರಣದಲ್ಲಿ ಶಿವಕುಮಾರ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರೀಗಳ ಆತ್ಮಕ್ಕೆ ಶಾಂತಿ ಕೋರಲಾಯಿತು.
ತ್ರಿಪುರ ಭೈರವಿ ಮಠದ ಅನುಜ್ ಸಾರಸ್ವತ್, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮಕುಮಾರ್, ಭಾರತೀಯ ಗೋಪರಿವಾರದ ಜಿಲ್ಲಾ ಕಾರ್ಯದರ್ಶಿ ರಾಕೇಶ್ ಭಟ್, ಶ್ರೀರಾಮಸೇನೆ ನಗರಾಧ್ಯಕ್ಷ ಸಂಜಯ್ ಮೊದಲಾದವರು ಹಾಜರಿದ್ದರು.
ಐಕ್ಯಸ್ಥಳ ಸಂಗಮ ಕ್ಷೇತ್ರ: ನಂಜನಗೂಡು ತಾಲೂಕಿನ ಸದ್ಗುರು ಮಹದೇವ ತಾತನವರ ಐಕ್ಯಸ್ಥಳ ಸಂಗಮ ಕ್ಷೇತ್ರದಲ್ಲಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸದ್ಗುರು ಮಹದೇವ ತಾತ ಭಕ್ತ ಮಂಡಲಿಯ ಅಧ್ಯಕ್ಷ ಮರಿಸ್ವಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆಂಡಗಣ್ಣಪ್ಪ, ಸಂಘಟನಾ ಕಾರ್ಯದರ್ಶಿ ಗೌಡಿಕೆ ರಾಜಪ್ಪ ಮೊದಲಾದವರು ಹಾಜರಿದ್ದರು.