Advertisement

UV Fusion: ಹೊತ್ತು ಮಾಗುವ ಮುನ್ನ ನಿಮ್ಮನ್ನು ನೀವು ಅರಿಯಿರಿ!

08:35 PM Sep 17, 2024 | Team Udayavani |

ಬೇರೊಬ್ಬರು ಪಡುವ ಕಷ್ಟ ನೋಡಿ ನಗುವಿನೊಂದಿಗೆ ಕಾಲ ಕಳೆದವರು ಮುಂದೊಂದು ದಿನ ಅಳುವ ಸಂದರ್ಭ ಖಂಡಿತವಾಗಿಯೂ ಬರುತ್ತದೆ. ಕರ್ಮಫ‌ಲ ಅನ್ನೋದು ಅದಕ್ಕೇ ಅಲ್ವಾ. ಈ ಮಾತನ್ನು ನಾನು ಯಾವತ್ತೂ ನಂಬುತ್ತೇನೆ.

Advertisement

ಬೇರೆಯವರ ಬಗ್ಗೆ ಕೊರತೆಗಳನ್ನು ಹೇಳುವ ಬದಲು ನಮ್ಮ ಬದುಕಿನ ಬಗ್ಗೆ ನಾವು ಕಾಳಜಿ ವಹಿಸೋಣ. ಜತೆಗೆ  ಇನ್ನೊಬ್ಬರ ಸಾಧನೆಯಲ್ಲಿ ಖುಷಿಪಡುವುದನ್ನು ಕಲಿಯೋಣ. ಕುಂದು-ಕೊರತೆಯನ್ನು ಹುಡುಕುತ್ತಾ ಕೂತಲ್ಲಿ ನಾವು ಅಲ್ಲೇ ಇರುತ್ತೇವೆ. ಸಾಧಿಸುವವರು ಮುಂದೆ ಸಾಗುತ್ತಿರುತ್ತಾರೆ. ನಷ್ಟ ಅನುಭವಿಸುವವರು ನಾವೇ ಆಗಿರುತ್ತೇವೆ.

ನಮ್ಮ ದೇಶದ ಆಸ್ತಿ ನಮ್ಮ ಯುವಜನಾಂಗ. ಯುವ ಜನತೆ  ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ ಸ್ವಾಮಿ ವಿವೇಕಾನಂದರ ಸಂದೇಶವನ್ನು ಮರೆಯುತ್ತಿದ್ದಾರೆ. ನಾವು ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಗೆಲ್ಲಲು ಪ್ರಯತ್ನಿಸಿ,  ಜೀವನವನ್ನು ಗುರಿಯತ್ತ ಮುನ್ನಡೆಸಿ, ಇತರರಿಗೆ ಮಾರ್ಗದರ್ಶನ ನೀಡಬೇಕು.

ನಮ್ಮ  ದೇಶದ ಒಳಿತಿಗಾಗಿ ಹೋರಾಡಬೇಕಿದ್ದ ಬಹಳಷ್ಟು ಯುವಜನತೆ ಇಂದು ಪ್ರೀತಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು, ಧೂಮಪಾನ, ಮದ್ಯಪಾನ, ಕೆಲಸಕ್ಕೆ ಹೋಗದೆ ಮನೆಯಲ್ಲಿರುವುದು, ಧರ್ಮಕ್ಕಾಗಿ, ಆಸ್ತಿಗಾಗಿ ಕಚ್ಚಾಟ ಮಾಡುವುದು, ಇನ್ನೂ ಹತ್ತು ಹಲವಾರು ಕಾರಣದಿಂದ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ಅತೀ  ದೊಡ್ಡ ದುರ್ದೈವವೆಂದರೆ ತಪ್ಪಾಗಲಾರದು. ಮುಂದೊಂದು ದಿನ ತಾವು ಮಾಡಿದ ತಪ್ಪು ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ ಸಮಯ ಕಳೆದಿರುತ್ತದೆ.

ಬದುಕು ನದಿಯಂತಿರಬೇಕು. ಕಷ್ಟ ಬಂದಾಗ ಎದುರಿಸಿ ಮುಂದೆ ಸಾಗುತ್ತಾ ಧೈರ್ಯದಿಂದ ಎದುರಿಸಬೇಕು. ಅತಿಯಾದ ನಿರೀಕ್ಷೆ ಮನಸ್ಸಿನಲ್ಲಿಟ್ಟು ಮುಂದೊಂದು ದಿನ ಅದು ಕಾರ್ಯಗತವಾಗದಿದ್ದಲ್ಲಿ, ತಪ್ಪು ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡುವ ಜನರನ್ನು ನೋಡುವಾಗ ನಿಜಕ್ಕೂ ಬೇಸರವಾಗುತ್ತಿದೆ. ಪ್ರತಿಯೊಬ್ಬರಿಗೆ ಸಂಕಷ್ಟ ಇರುತ್ತದೆ, ಕಷ್ಟವಿಲ್ಲದ ಜೀವನವಿಲ್ಲ.

Advertisement

ಯಾವುದಾದರೂ ಒಂದು ಕಾರಣದಿಂದ ಮಾನಸಿಕವಾಗಿ ಕುಗ್ಗಿದರೆ ಸೂಕ್ತ ವೈದ್ಯರನ್ನು ಭೇಟಿ ಮಾಡಿ, ನಮ್ಮವರಲ್ಲಿ ಮಾತನಾಡಿ ಪರಿಹಾರವನ್ನು ಹುಡುಕಿಕೊಳ್ಳುವುದು ಮುಖ್ಯ.  ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವುದನ್ನು ಮೊದಲು ಬಿಟ್ಟು ಬಿಡಬೇಕು. ನೀವು ಅಂದುಕೊಂಡ ಹಾಗೆ ನಿಮ್ಮ ಬದುಕನ್ನು ರೂಪಿಸಲು ಸಾಧ್ಯವಿಲ್ಲ.

ಆದರೆ ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯ. ಬದುಕಲ್ಲಿ ತಪ್ಪು ನಡೆದರೆ ಕೊರಗದೆ ನಮ್ಮ ಮುಂದಿನ ಬದುಕಿಗೆ ಮಾರ್ಗ ತಿಳಿದುಕೊಳ್ಳೋಣ. ಖುಷಿ ಘಟನೆ ಆದಲ್ಲಿ ಇನ್ನಷ್ಟು ಒಳಿತಾಗಲು ಪ್ರಯತ್ನಿಸೋಣ. ಕಷ್ಟ ಬಂದರೆ ಸರಿಪಡಿಸಲು ದಾರಿ ಹುಡುಕುವ ಪ್ರಯತ್ನ ಮಾಡೋಣ. ಇತರರ ಸಾಧನೆಯನ್ನು ಮಾರ್ಗದರ್ಶನದಂತೆ ಸ್ವೀಕರಿಸಿ, ನಮ್ಮವರಿಗಾಗಿ, ನಮಗಾಗಿ ಬದುಕೋಣ. ಯಾಕೆಂದರೆ ಜೀವನ ಜೀವಿಸಲು ಸಿಗುವುದು ಒಂದೇ ಬಾರಿ ಅಲ್ವಾ.  ಒಮ್ಮೆ ಯೋಚಿಸಿ ನೋಡಿ.

-ಶೃತಿ ಬೆಳ್ಳುಂಡಗಿ

ವಿಜಯಪುರ ಕನ್ನೂರ

Advertisement

Udayavani is now on Telegram. Click here to join our channel and stay updated with the latest news.

Next