Advertisement

UV Fusion: ಮಾತಿನ ಅರ್ಥ ಒಳಾರ್ಥಗಳು..!

09:08 PM Sep 17, 2024 | Team Udayavani |

ನಮ್ಮ ಬದುಕಿನ ಸ್ವಾರಸ್ಯ ಅಡಗಿರುವುದೇ ಅರ್ಥವಾಗುವುದರಲ್ಲಿ ಎಂದರೆ ತಪ್ಪಿಲ್ಲ. ಸರಿಯಾಗಿ ಅರ್ಥವಾಗದ ಪರಿಣಾಮವೇ ನಮ್ಮ ಜೀವನ ಏರಿಳಿತ ಕಾಣುವುದು ಎನ್ನುವುದರಲ್ಲಿ ಅನುಮಾನವಿಲ್ಲ. ಸರಿಯಾಗಿ ಅರ್ಥವಾಗಿದ್ದರೆ ಹೀಗಾಗುತ್ತಿತ್ತಾ..? ಎಂದು ಹೇಳುವ ನಾವು ಪ್ರತಿ ಪದಕ್ಕೂ, ಪ್ರತಿ ವಾಕ್ಯಕ್ಕೂ, ಪ್ರತಿ ಮಾತಿಗೂ, ಪ್ರತಿ ವಿಷಯಕ್ಕೂ, ಅರ್ಥ ಹುಡುಕುವುದಕ್ಕೆ ಹೋಗುತ್ತೇವೆ. ಅದೇಕೆ ಹೀಗಾಯ್ತು, ಇದೇಕೆ ಹಾಗಾಯ್ತು, ಇವನೇಕೆ ಹೀಗೆ, ಅವಳೇಕೆ ಹಾಗೆ, ನನ್ನ ಮಾತೇಕೆ ಇಷ್ಟು ಕಠಿಣ, ಅವಳ ವರ್ತನೆ ಏಕೆ ಇಷ್ಟು ನಿಷ್ಟುರ..? ಎಂದು ಪ್ರತಿಯೊಂದರಲ್ಲೂ, ಪ್ರತಿಯೊಬ್ಬರಲ್ಲೂ ಅರ್ಥ ಹುಡುಕುವುದರಲ್ಲಿ ಹೋಗುತ್ತೇವೆ.

Advertisement

ಬೇರೊಬ್ಬರ ಮಾತು ಅರ್ಥವಾಗದಿದ್ದರೂ ಪರವಾಗಿಲ್ಲ ಆದರೆ ಅಪಾರ್ಥ ಮಾಡಿಕೊಳ್ಳುವ ಅಭ್ಯಾಸದಿಂದ ದೂರವಿದ್ದರೆ ಲೇಸು. ಕೆಲವು ಜನರು ಅದೇಕೋ ಹಾಗೇ..! ಒಂದು ಹೇಳಿದರೆ ಮತ್ತೂಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ಈಸಿ ಗೋಯಿಂಗ್‌ ಪ್ರವೃತ್ತಿ ಅವರದಲ್ಲ. ಅವರು ಎಲ್ಲವನ್ನು ಕ್ಲಿಷ್ಟಕರವಾಗಿಯೇ, ಕಷ್ಟಕರವಾಗಿಯೇ, ತಮ್ಮ ಬುದ್ಧಿ ಮತ್ತು ತಂತ್ರಜ್ಞಾನದ ಅನುಭವ, ತಾಂತ್ರಿಕ ಕೌಶಲವನ್ನು ಬೆರಕೆ ಮಾಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ..!

ಅನಂತರ ತಪ್ಪು ತಪ್ಪಾಗಿ ಅರ್ಥ ಮಾಡಿಕೊಂಡು ನಮ್ಮ ಜತೆಗೆ ಮಾತು ಬಿಡುತ್ತಾರೆ. ರೋಬೋಟ್‌ ಸಿರಿಯ ಅವತಾರವೆಂಬಂತೆ ಇಂಥವರಿಗೆ ಎಲ್ಲವನ್ನು ಚಿಕ್ಕ ಮಕ್ಕಳಿಗೆ ಹೇಳಿಕೊಡುವಂತೆಯೇ ಹೇಳಬೇಕು. ಹೇಳಲಿಲ್ಲವೆಂದರೆ ತಮ್ಮ ಮೂಗಿನ ನೇರಕ್ಕೆ ನಾವಾಡಿದ ಮಾತುಗಳನ್ನು ಅರ್ಥ ಮಾಡಿಕೊಂಡು ಅವರ ನೆಮ್ಮದಿ ಮಾತ್ರವಲ್ಲ; ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತಾರೆ..!

ಇಂತಹ ಕೆಲವು ಜನ ನಮ್ಮ ಸುತ್ತಮುತ್ತಲೂ ಇರುತ್ತಾರೆ. ಒಂದು ಪದಕ್ಕೆ ಒಂದೇ ಅರ್ಥ ಕೊಡುವುದಿಲ್ಲ ಅವರು..! ಎಲ್ಲವನ್ನು ಕೆದಕಿ ಒಳಾರ್ಥ ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಹಾಗೆ ಪ್ರಯತ್ನಿಸುತ್ತಾ ತಲೆಕೆಡಿಸಿಕೊಳ್ಳುತ್ತಾರೆ. ತಲೆಕೆಡಿಸಿಕೊಂಡು ತಮ್ಮ ಅಮೂಲ್ಯವಾದ ದಿನವನ್ನು ಹಾಳುಗೆಡುವುತ್ತಾರೆ. ಇಂಥವರೊಂದಿಗೆ ವ್ಯವಹರಿಸಬೇಕಾದರೆ ಜಾಗರೂಕರಾಗಿರುವುದು ಒಳಿತು. ಇಲ್ಲದಿದ್ದರೆ ನಮ್ಮ ದಿನವೂ ಅವರು ತೆಗೆದ ಜಗಳದಿಂದ ಹಾಳಾಗುವುದು ಖಚಿತ..!

ನಾವು ಮಾತನಾಡುವ ಭಾಷೆಯಿಂದಲೂ, ಪದ ಪ್ರಯೋಗದಿಂದಲೂ, ಅಪಾರ್ಥಗಳಾಗುವುದು ಹೆಚ್ಚು. ಕೆಲವೊಮ್ಮೆ ಇಂತಹ ಅಪಾರ್ಥಗಳಿಂದ ಜಗಳವಾದರೆ, ಇನ್ನೂ ಕೆಲವೊಮ್ಮೆ ಜನರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಅದೇಕೋ ಗೊತ್ತಿಲ್ಲ, ಕೆಲವರಿಗೆ ಅಲ್ಪಪ್ರಾಣ ಮಹಾಪ್ರಾಣದ ಅಕ್ಷರಗಳನ್ನು ಪ್ರಯೋಗಿಸುವುದರಲ್ಲಿ ಸೋಂಬೇರಿತನ ಎನಿಸುತ್ತದೆ. ಅಥವಾ ಮಹಾಪ್ರಾಣದ ಪದಗಳನ್ನು ಉತ್ಛರಿಸಲು ಸುಸ್ತಾಗುತ್ತದೆಯೋ ಗೊತ್ತಿಲ್ಲ..! ಇನ್ನೂ ಕೆಲವರು ಬೇಡದ ಕಡೆ ಮಹಾಪ್ರಾಣ ಉಪಯೋಗಿಸಿ ತಮಗೆ ತಾವೇ ಕಷ್ಟ ತಂದುಕೊಳ್ಳುತ್ತಾರೆ..!

Advertisement

ಅಕ್ಕಿಗೆ ಹಕ್ಕಿ ಎಂದು, ಹಕ್ಕಿಗೆ ಅಕ್ಕಿ ಎಂದು, ಇಂಗ್ಲಿಷ್‌ನ ಏರ್‌ ಹೇರ್‌ ಆಗಿ, ಹೇರ್‌ ಏರ್‌ ಆಗಿ, ತರಹೇವಾರಿ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಾರೆ. ಹಕ್ಕಿಯು ಹಾರಿ ಬಂದು ಅಕ್ಕಿಯನ್ನು ಹೆಕ್ಕಿ ಹೆಕ್ಕಿ ತಿಂದಿತು ಎಂಬುದನ್ನು ಅಕ್ಕಿಯು ಆರಿ ಬಂದು ಹಕ್ಕಿಯನ್ನು ಎಕ್ಕಿ ಎಕ್ಕಿ ತಿಂದಿತು ಎಂದು ತಮ್ಮದೇ ರೀತಿಯಲ್ಲಿ ಹೇಳಿ ಎದುರಿನವರನ್ನು ಕಕ್ಕಾಬಿಕ್ಕಿ ಮಾಡುತ್ತಾರೆ..!

ಏಳಿ ಮತ್ತು ಹೇಳಿ ಪದಕ್ಕೂ ತದ್ವಿರುದ್ಧವಾಗಿ ಉತ್ಛರಿಸುತ್ತಾರೆ. ನಿರೂಪಕಿಯೊಬ್ಬಳು ಎದುರಿನವರಿಗೆ ಪರವಾಗಿಲ್ಲ ಹೇಳಿ ಎನ್ನುವ ಬದಲು ಪರ್ವಾಗಿಲ್ಲ ಏಳಿ ಎನ್ನುತ್ತಾಳೆ ಅಂದುಕೊಳ್ಳಿ. ಎದುರಿನ ವ್ಯಕ್ತಿ ಓಹೋ ಏಳಬೇಕು ಎನಿಸುತ್ತದೆ. ಸಂದರ್ಶನದ ಕಾಲಾವಧಿ ಮುಗಿಯಿತೇನೋ ಎಂದು ಏಳಲು ಹೊರಟರೆ, ಮತ್ತೆ ಆ ನಿರೂಪಕಿ ಪರವಾಗಿಲ್ಲ ಸರ್‌, ಕೂತ್ಕೊಂಡೇ ಏಳಿ ಎಂದರೆ ಆ ವ್ಯಕ್ತಿಯ ಫ‌ಜೀತಿ ಏನಾಗಿರಬಹುದು ಎಂದು ನೀವೇ ಯೋಚಿಸಿ..!

ನಮ್ಮ ಕರುನಾಡ ಮಾತೃಭಾಷೆ ಕನ್ನಡವಾದರೂ, ಒಂದೊಂದು ಭಾಗದಲ್ಲೂ ಒಂದೊಂದು ರೀತಿಯ ಕನ್ನಡ ಚಾಲ್ತಿಯಲ್ಲಿದೆ. ಮಂಗಳೂರಿನವರು ಮಗು ಕೂಗುತ್ತಿದೆ ಎಂದಾಗ, ಈ ಕಡೆಯ ಜನರು ಓಹೋ ಮಗು ಏಕೆ ಕೂಗುತ್ತಿದೆ..? ಎಂದುಕೊಳ್ಳುತ್ತಾರೆ. ಆದರೆ ಅಲ್ಲಿಯ ಜನಕ್ಕೆ ಕೂಗುವುದು ಎಂದರೆ ಅಳುವುದು. ಇಲ್ಲಿಯ ಜನಕ್ಕೆ ಕೂಗುವುದು ಎಂದರೆ ಜೋರಾಗಿ ಕಿರುಚುವುದು ಎಂದರ್ಥ.

ಇನ್ನೂ ಒಂದೇ ವಸ್ತುವಿಗೆ ಹಲವಾರು ರೀತಿಯಲ್ಲಿ ಹೆಸರುಗಳಿರುತ್ತವೆ. ನನಗೆ ನಲ್ಲಿ ಎಂದರೆ ಇಂಗ್ಲಿಷ್‌ನಲ್ಲಿ ಟ್ಯಾಪ್‌ ಎಂದು ಗೊತ್ತಿತ್ತು ಅಷ್ಟೇ. ಆದರೆ ಅದಕ್ಕೆ ಇನ್ನೊಂದು ವಿಭಿನ್ನವಾದ ಹೆಸರು ಇದೆ ಎಂದು ಗೊತ್ತಾದದ್ದು ನನ್ನ ಮದುವೆಯ ನಂತರವಷ್ಟೇ..! ಮೊದಮೊದಲು ಕೊಳಾಯಿ ತಿರುಗಿಸಿದಾ..? ಎಂದು ಕೇಳಿದಾಗ, ನಾನು ಆಶ್ಚರ್ಯಚಕಿತಳಾಗಿ ಕೊಳವನ್ನು ಏಕೆ ತಿರುಗಿಸಬೇಕು, ನಲ್ಲಿ ಇರುವಾಗ ಕೊಳದಿಂದ ನೀರನ್ನು ಏಕೆ ತರಬೇಕು..? ಎಂದು ಗೊಂದಲಗೊಳ್ಳುತ್ತಿದ್ದೆ. ಅನಂತರ ಗೊತ್ತಾಯಿತು ನಲ್ಲಿಗೆ ಕೊಳಾಯಿ ಎಂದು ಕರೆಯುತ್ತಾರೆ ಅಂತ. ಮುದ್ದೆ ಊಟ ಮಾಡುವಾಗ ತಟ್ಟೆಯ ಕೆಳಗೆ ಇರುವ ಚಿಕ್ಕ ಮರದ ತುಂಡಿಗೆ ಒತ್ತು ಎನ್ನುತ್ತಾರೆ ಎಂದು ಗೊತ್ತಿರಲಿಲ್ಲ. ಮೊದಲ ಬಾರಿಗೆ ಈ ಪದವನ್ನು ಕೇಳಿದಾಗ, ಅದು ಒತ್ತಾ ಮುತ್ತಾ ಎಂದು ಗೊತ್ತಾಗುತ್ತಿರಲಿಲ್ಲ. ಕೊನೆಗೆ ಅದರ ಪದ ಬಳಕೆ ಗೊತ್ತಾಯ್ತು.  ಈ ರೀತಿ ಮನೆ ವಿಳಾಸ ಹೇಳುವಾಗ ಪ್ರಯೋಗಿಸುವ ಹಂಗಾಸು ಹಿಂಗಾಸು ಎಂಬ ಪದವನ್ನು ಮೊದಲಿಗೆ ಕೇಳಿದಾಗ ನಕ್ಕುಬಿಟ್ಟಿದ್ದೆ.

ಯಾವ ಹಾಸು, ಅದೇನನ್ನು ಹಾಸಬೇಕು ಎಂದು ತಿಳಿಯದೆ ಕನ್‌ಫ್ಯೂಸ್‌ ಆಗಿದ್ದೆ..! ಆಮೇಲೆ ಗೊತ್ತಾಯಿತು ವಿಳಾಸ ಹೇಳುವಾಗ ಆ ಕಡೆ, ಈ ಕಡೆ ಎಂದು ಹೇಳಲು ಹೀಗೆ ಹೇಳುತ್ತಾರೆ ಎಂದು..!  ಈ ರೀತಿಯ ಭಾಷೆಯ ವೈಖರಿ, ಪದ ಪ್ರಯೋಗ, ಆಡು ಮಾತುಗಳು, ಪದಗಳ ಉಚ್ಛಾರಣೆ ಕೆಲವು ಸಲ ನಮ್ಮನ್ನು ಅಪಾರ್ಥಕ್ಕೆ ಈಡು ಮಾಡಿ ನಗೆಗಡಲಲ್ಲಿ ತೇಲಿಸಬಹುದು, ಇಲ್ಲವೇ ಸಂಕಟಕ್ಕೆ ಈಡು ಮಾಡಲೂಬಹುದು.

ಮಾತಿನ ಗಮ್ಮತ್ತೇ ಅದು..! ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬಂತೆ ಮಾತು ನಮ್ಮನ್ನು ಸಂಕಷ್ಟಕ್ಕೆ ಈಡು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮಾತು ಹಲವು ಜನರಿಗೆ ಬಂಡವಾಳವಾಗಿಬಿಟ್ಟಿದೆ. ಮಾತು ಈಗಿನ ದಿನಗಳಲ್ಲಿ ಮಾತೆಯ (ಅಮ್ಮನ) ಸ್ಥಾನ ಪಡೆದುಬಿಟ್ಟಿದೆ ಎಂದರೆ ಅತಿಶಯೋಕ್ತಿಯ ಮಾತೇನಲ್ಲ..?! ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿಗೆ ಅನುಗುಣವಾಗಿ ಎಷ್ಟು ಬೇಕೋ ಅಷ್ಟು ಮಾತಾಡುತ್ತಾ, ಎದುರಿನವರ ಮಾತುಗಳನ್ನು ಕೇಳಿ ಗೌರವಿಸುವ ಗುಣವನ್ನು ಕಲಿತುಕೊಂಡರೆ ಅಂಥವರ ಮಾತಿಗೆ ಸಿಗುವ ಬೆಲೆಯೇ ಬೇರೆ ಅಲ್ಲವೇ..!

-ಅಚಲ ಬಿ. ಹೆನ್ಲಿ

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.