Advertisement
ಸಾಮಾನ್ಯವಾಗಿ ಹಣ ಸಂಪಾದನೆ, ಉಳಿತಾಯ, ಹಣಕಾಸು ಹೂಡಿಕೆ ಇವೆಲ್ಲವುಗಳ ಹಿಂದಿರುವ ನಮ್ಮ ಮನೋಭಿಲಾಷೆ ಎಂದರೆ ನಾವೂ ಕರೋಡ್ಪತಿಗಳಾಗಬೇಕು ಎಂಬುದೇ ಆಗಿರುತ್ತದೆ. ಈಗಿನ ದಿನಗಳಲ್ಲಿ ಲಕ್ಷಕ್ಕೆ ಬೆಲೆಯೇ ಇಲ್ಲ; ಹಾಗಾಗಿ ಲಕ್ಷಾಧಿಪತಿಗಳಾಗಬೇಕೆಂಬ ಜನಸಾಮಾನ್ಯರ ಕನಸು ಇಪ್ಪತ್ತೆದು ವರ್ಷಗಳ ಹಿಂದಿನ ಮಾತು; ಈಗ ಕೋಟಿಗೆ ಮಾತ್ರವೇ ಬೆಲೆ; ಹಾಗಾಗಿ ಈಗಿನ ದಿನಗಳಲ್ಲಿ ಕೋಟ್ಯಧಿಪತಿಗಳಾಗುವುದೇ ಒಳ್ಳೆಯದು.
Related Articles
Advertisement
ಇನ್ನೊಂದು ಬಹಳ ಮುಖ್ಯ ವಿಷಯವೆಂದರೆ ಇಎಲ್ಎಸ್ಎಸ್ನಲ್ಲಿ ತೆರಿಗೆ ವಿನಾಯಿತಿಗಾಗಿ ವರ್ಷಕ್ಕೆ ಗರಿಷ್ಠ 1.50 ಲಕ್ಷ ರೂ. ಹೂಡಲು ಇರುವ ಅವಕಾಶವನ್ನು ಏಕಗಂಟಿನ ಹೂಡಿಕೆಯಲ್ಲಿ ಅಥವಾ ಪ್ರತೀ ತಿಂಗಳ ಕಂತು ಹೂಡಿಕೆಯಲ್ಲಿ (ಇದನ್ನೇ ಸಿಪ್ ಅನ್ನುವುದು : ಸಿಪ್ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಮಾಡಬಹುದು. ಒಂದು ಹಣಕಾಸು ವರ್ಷ ಆರಂಭವಾಗುವ ಒಂದು ಕ್ಯಾಲೆಂಡರ್ನ ಎಪ್ರಿಲ್ 1ರಿಂದ ತೊಡಗಿ ಮುಂದಿನ ಕ್ಯಾಲೆಂಡರ್ನ ಮಾರ್ಚ್ 31ರ ಒಳಗಿನ ಅವಧಿಯಲ್ಲಿ, ತೆರಿಗೆ ವಿನಾಯಿತಿಗಾಗಿ ಈ 1.50 ಲಕ್ಷ ರೂ.ಗಳ ಗರಿಷ್ಠ ಮೊತ್ತವನ್ನು ಕಂತು ಕಂತಿನಲ್ಲಿ ಅಥವಾ ಏಕಗಂಟಿನಲ್ಲಿ ಹೂಡಬಹುದು.
ಕಂತು ಕಂತಿನ ಸಿಪ್ ಮೂಲಕ ಹೂಡಿದ ಪಕ್ಷದಲ್ಲಿ ಸಿಗುವ ಲಾಭ ಏಕಗಂಟಿನ ಹೂಡಿಕೆಗಿಂತ ಅತ್ಯಧಿಕ ಎನ್ನುವುದು ಬಹಳ ಮುಖ್ಯ ವಿಚಾರ. ಏಕೆಂದರೆ ಶೇರು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಇಎಲ್ಎಸ್ಎಸ್ ಯೂನಿಟ್ ಧಾರಣೆ ಏರಿಳಿತ ಕಾಣುವುದರಿಂದ ಕಂತು ಕಂತಿನ ಹೂಡಿಕೆ ಕ್ರಮದಲ್ಲಿ ಎಷ್ಟೋ ವೇಳೆ ಅತೀ ಕಡಿಮೆ ಧಾರಣೆಯ ಯೂನಿಟ್ ಗಳು ನಮಗೆ ಸಿಗುತ್ತವೆ. ಶೇರು ಮಾರುಕಟ್ಟೆಯಲ್ಲಿ ತೇಜಿ ಬಂದಾಗ ಯೂನಿಟ್ ಧಾರಣೆಯೂ ಏರುವುದರಿಂದ ವರ್ಷದ ಕೆಲವು ಅವಧಿಯಲ್ಲಿ ಇಎಲ್ಎಸ್ಎಸ್ ಯೂನಿಟ್ ಧಾರಣೆ ಕೂಡ ಏರುತ್ತದೆ. ಆದುದರಿಂದಲೇ ಈ ಮ್ಯೂಚುವಲ್ ಫಂಡ್ ಸ್ಕೀಮನ್ನು “ಈಕ್ಟಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್’ ಅನ್ನುವುದು.
ಇದಕ್ಕೊಂದು ಉದಾಹಣೆಯನ್ನು ಇಲ್ಲಿ ನೀಡಬಹುದು : ನೀವು ತಿಂಗಳಿಗೆ 12,500 ರೂ. ಪ್ರಕಾರ ಸಿಸ್ಟಮ್ಯಾಟಿಕ್ ಪ್ಲಾನ್ (ಸಿಪ್) ನಡಿ 15 ವರ್ಷಗಳ ಅವಧಿಗೆ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿದ್ದೀರಿ. ನಿಮ್ಮ ಹಾಗೆ ಇನ್ನೊಬ್ಬ ವ್ಯಕ್ತಿ ವರ್ಷಕ್ಕೆ ಏಕಗಂಟಿನಲ್ಲಿ ವರ್ಷಕ್ಕೆ 1.50 ಲಕ್ಷ ರೂ.ಗಳನ್ನು 15 ವರ್ಷಗಳ ಅವಧಿಗೆ ಹೂಡಿದ್ದಾರೆ ಎಂದು ತಿಳಿಯೋಣ. 15 ವರ್ಷಗಳು ಮುಗಿದಾಗ ನೀವು ಹೂಡಿರುವ ಒಟ್ಟು ಹಣ 22.50 ಲಕ್ಷ ಆಗಿರುತ್ತದೆ; ಇನ್ನೊಬ್ಬ ವ್ಯಕ್ತಿ ವಾರ್ಷಿಕ ಏಕಗಂಟಿನಲ್ಲಿ 15 ವರ್ಷಗಳಲ್ಲಿ ಹೂಡಿದ ಹಣ ಕೂಡ 22.50 ಲಕ್ಷ ರೂ. ಆಗಿರುತ್ತದೆ. ಇಬ್ಬರಿಗೂ ಶೇ.15ರ ಇಳುವರಿ ಸಿಕ್ಕಿರುತ್ತದೆ ಎಂದಿಟ್ಟುಕೊಳ್ಳೋಣ. ಹಾಗಿದ್ದರೂ ಸಿಪ್ ಮೂಲಕ ಕಂತು ಕಂತಿನಲ್ಲಿ ಮಾಡಿದ ಹೂಡಿಕೆಯ ಮೌಲ್ಯ 15 ವರ್ಷ ಮುಗಿದಾಗ 84,60,789 ರೂ. ಆಗಿರುತ್ತದೆ. ಆದರೆ ಏಕಗಂಟಿನ ಹೂಡಿಕೆ ಮೌಲ್ಯ 15 ವರ್ಷ ಮುಗಿದಾಗ 83,57,620 ರೂ. ಆಗಿರುತ್ತದೆ. ಎಂದರೆ 1,03,169 ರೂ ಹೆಚ್ಚು ಇಳುವರಿ ಸಿಪ್ ಹೂಡಿಕೆದಾರನಿಗೆ ಬಂದಿರುತ್ತದೆ !
ತಿಂಗಳಿಗೆ 12,500 ರೂ. ಪ್ರಕಾರ ನೀವು ಒಂದೊಮ್ಮೆ 20 ವರ್ಷಗಳ ಅವಧಿಗೆ ಸಿಪ್ ಮೂಲಕ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿದಲ್ಲಿ ಶೇ.15ರ ಅಶ್ಯೂರ್ಡ್ ರಿಟರ್ನ್ ಪ್ರಕಾರ ನಿಮಗೆ ಸಿಗುವ ಮೊತ್ತ ಇನ್ನೂ ದೊಡ್ಡದು. ಈ ಸಂದರ್ಭದಲ್ಲಿ ನೀವು 20 ವರ್ಷಗಳ ಕಾಲ ಉಳಿತಾಯ ಮಾಡುವ ಹಣದ ಹೂಡಿಕೆ ಮೊತ್ತವೇ 1.78 ಕೋಟಿ ರೂ.ಗಳಾಗಿರುತ್ತದೆ. ಅಂತಿರುವಾಗ ಇದರ ಜತೆಗೆ ಇಳುವರಿ ಮೊತ್ತ ಸೇರುವಾಗ ಕೈಗೆ ಸಿಗುವ ಮೊತ್ತ ಮತ್ತೂ ದೊಡ್ಡದು; ಎಂದರೆ ಸಹಜವಾಗಿಯೇ ನೀವು ಆಗ ಕರೋಡ್ಪತಿಗಳಾಗಿರುತ್ತೀರಿ!
ಹನಿ ಕೂಡಿ ಹಳ್ಳ, ತೆನೆ ಕೂಡಿ ಕಣಜ ಎಂಬ ಜನಪದ ನುಡಿ ನಿಜಕ್ಕೂ ಅಕ್ಷರಶಃ ಸತ್ಯ ಎನ್ನುವುದನ್ನು ನಾವು ಸಣ್ಣ ಸಣ್ಣ ಮೊತ್ತದ ಉಳಿತಾಯವನ್ನು ನಿರಪಾಯಕರ ಲಾಭದಾಯಕ ಮಾರ್ಗಗಳಲ್ಲಿ ತೊಡಗಿಸಿದಾಗ ಅನುಭವದಿಂದ ಕಾಣಬಹುದು. ಇಎಲ್ಎಸ್ಎಸ್ ಬಗ್ಗೆ ನೀವು ನೆನಪಿಟ್ಟು ಕೊಳ್ಳಬೇಕಾದ ಅಂಶಗಳು ಹೀಗಿವೆ :
1. ಹೂಡಿಕೆ ಶಿಸ್ತನ್ನು ಮೈಗೂಡಿಸಿಕೊಳ್ಳಬಹುದು
2. ನಗದು ಲಭ್ಯತೆಯ ಕೊರತೆ ಉಂಟಾಗದು (ಹೂಡಿದ ಹಣದ ಲಾಕ್ ಇನ್ ಪೀರಿಯಡ್ ಕೇವಲ 3 ವರ್ಷ)
3. ಕಂತು ಕಂತಿನಲ್ಲಿ ಸಿಪ್ ಮೂಲಕ ಹಣ ಹೂಡುವಾಗ ರೂಪಾಯಿ ವೆಚ್ಚ ಸರಾಸರಿಯಾಗುತ್ತಾ ಸಾಗುತ್ತದೆ.
4. ಹೂಡಿಕೆ ಅತೀ ಸುಲಭ
5. ತಿಂಗಳಿಗೆ ಕೇವಲ 500 ರೂ. ಮೂಲಕವೂ ಸಿಪ್ – ಇಎಲ್ಎಸ್ಎಸ್ ಹೂಡಿಕೆ ಆರಂಭಿಸಬಹುದು
6. ಹೆಚ್ಚುವರಿ ಇಳುವರಿ (ಶೇರು ಮಾರುಕಟ್ಟೆ ಏರಿಳಿತದಿಂದ ಸಿಗುವ ಲಾಭ).
ಈ ಎಲ್ಲ ಮೂಲಭೂತ ಅಂಶಗಳನ್ನು ಸರಿಯಾಗಿ ಮನನ ಮಾಡಿಕೊಂಡು ಮುಂದಡಿ ಇಟ್ಟರೆ ಒಂದು ಕಾಲಮಿತಿಯೊಳಗೆ ನಾವೂ ಕರೋಡ್ ಪತಿಗಳಾಗಬಹುದು ಎಂದು ಹೇಳಬಹುದು. ಆದರೆ ಅದನ್ನು ಸಾಧಿಸಲು ದೃಢವಾದ ಮನೋಸಂಕಲ್ಪ ಹೊಂದಿರುವುದು ಅಗತ್ಯ.