ಹೊಸದಿಲ್ಲಿ: ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಬಗ್ಗೆ ಈಗಲೂ ಹಲವು ಅಧ್ಯಯನಗಳು ನಡೆಯುತ್ತಿವೆ. ಅತ್ಯಂತ ಕಡಿಮೆ ಮಟ್ಟದ ರೆಸಲ್ಯೂಷನ್ ಇರುವ ಎದೆಯ ಎಕ್ಸ್‌ರೇ ಮೂಲಕ ಸೋಂಕಿತರನ್ನು ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ:ಬೇರೆ ಮದುವೆಯಾದರೂ ಲವ್ ಮುಂದುವರಿಸಿದ್ದ ಪ್ರೇಮಿಗಳು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ನೆರವಿನೊಂದಿಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರವರ್ತಿತ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ ತಂತ್ರಜ್ಞಾನ ಪಾರ್ಕ್
(ಎಆರ್ ಟಿಪಿಎಆರ್‌ಕೆ) ಮತ್ತು ಸ್ಟಾರ್ಟ್‌ಅಪ್, “ನಿರ್ಮಯಿ’ – ಕೃತಕ ಬುದ್ಧಿಮತ್ತೆ ಬಳಕೆ ಮಾಡಿ ಈ ಹೊಸ ವ್ಯವಸ್ಥೆಯನ್ನು ರೂಪಿಸಿವೆ. ಎಕ್ಸ್‌ರೇ ಚಿತ್ರಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲೂ ಸಾಧ್ಯವಿದೆ. ಸೋಂಕು ಪರೀಕ್ಷೆಯಲ್ಲಿ ಶೇ.98.86ರಷ್ಟು ನಿಖರತೆ ಇದೆ.
ಹೊಸ ವ್ಯವಸ್ಥೆಗೆ ಎಕ್ಸ್‌ರೇ ಸೇತು ಎಂದು ಹೆಸರಿಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ 1,200ಕ್ಕೂ ಅಧಿಕ ವರದಿಗಳನ್ನು ಹೊಸ ವ್ಯವಸ್ಥೆಯ ಆಧಾರದಲ್ಲಿ ಪರಿಶೀಲನೆ ನಡೆಸಲಾಗಿದೆ. ಯಾವ ಭಾಗಕ್ಕೆ ಸೋಂಕು ತಗಲಿದೆ ಎಂಬುದನ್ನು ವೈದ್ಯರ ಸಹಾಯದಿಂದ ಪತ್ತೆ ಹಚ್ಚಲಾಗುತ್ತದೆ.
ಅದಕ್ಕಾಗಿ ವೈದ್ಯರು
www.xraysetu.com ಎಂಬ ವೆಬ್ ಸೈಟ್‌ಗೆ ಲಾಗ್‌ಇನ್ ಆಗಬೇಕು. ಬಳಿಕ ‘ಟ್ರೈ ದ ಫ್ರೀ ಎಕ್ಸ್ ರೇ ಸೇತು ಬೇಟಾ’ ಬಟನ್ ಒತ್ತಬೇಕು. ನಂತರ ಹೊಸ ಪುಟ ತೆರೆದುಕೊಳ್ಳಲಿದೆ. ಸ್ಮಾರ್ಟ್ ಫೋನ್ ನಲ್ಲೂ ವೈದ್ಯರು
8046163838 ಎಂಬ ವಾಟ್ಸ್ ಆ್ಯಪ್ ಸಂಖ್ಯೆಗೆ ಮೆಸೇಜ್ ಕಳುಹಿಸುವ ಮೂಲಕ ಎಕ್ಸ್‌ರೇ ಸೇತು ಪ್ರಕ್ರಿಯೆ ಆರಂಭಿ ಸಬಹುದು. ಸೋಂಕಿತನ ಎದೆಯ ಎಕ್ಸ್‌ರೇ ಚಿತ್ರದ ಮೇಲೆ ಕ್ಲಿಕ್ ಮಾಡಿದ ಬಳಿಕ ಎರಡು ಪುಟದ ವರದಿ ಸ್ವಯಂಚಾಲಿತವಾಗಿ ಮುದ್ರಿತವಾಗುತ್ತದೆ.