ನೀರನ್ನು ಜೀವದಾಯಿ ಎನ್ನುವರು. ವಿಜ್ಞಾನ ತರಗತಿಯಲ್ಲಿ ಮಕ್ಕಳಿಗೆ ಮೊತ್ತ ಮೊದಲು ಬೋಧಿಸುವ ಸಾಲೇ ಅದು. ಭೂಮಿಯ ಶೇ. 70ರಷ್ಟು ಭಾಗ ನೀರೇ ತುಂಬಿಕೊಂಡಿದ್ದರೂ, ಅದರಲ್ಲಿ 2.5 ಶೇ. ಮಾತ್ರ ಶುದ್ಧ ನೀರು. ಉಳಿದದ್ದು ಸಮುದ್ರದ ಉಪ್ಪು ನೀರು. ದೇಶ ದೇಶಗಳ ನಡುವೆ, ರಾಜ್ಯಗಳ ನಡುವೆ ಜಗಳ ತಗಾದೆಗಳಾಗುತ್ತಿರುವುದು ಈ 2.5 ನೀರಿನಿಂದಾಗಿ. ಆದ್ದರಿಂದಲೇ ಸರ್ವವ್ಯಾಪಿಯಾಗಿರುವ 70ರಷ್ಟಿರುವ ಉಪ್ಪು ನೀರನ್ನು ಶುದ್ಧ ನೀರಾಗಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇದೆ. ಅದೇನೇ ಇರಲಿ ಇಷ್ಟು ಮುಖ್ಯವಾದ ಈ ಪಾರದರ್ಶಕ ದ್ರವದ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ.
1. ನಾವು ಘನವೆಂದು(ಸಾಲಿಡ್) ಅಂದುಕೊಂಡಿರುವ ಅನೇಕ ವಸ್ತುಗಳು ದ್ರವದಿಂದ(ಲಿಕ್ವಿಡ್) ರೂಪಿತವಾಗಿವೆ. ಉದಾಹರಣೆಗೆ ಟೊಮೆಟೋದ ಶೇ. 90ರಷ್ಟು ನೀರು. ಆ್ಯಪಲ್, ಪೈನಾಪಲ್ ಗಳಲ್ಲಿ ಶೇ. 80ರಷ್ಟು ನೀರಿದೆ. ಆಶ್ಚರ್ಯವೆಂದರೆ ಮಾನವ ದೇಹದ ಶೇ. 60 ಭಾಗ ನೀರಿನಿಂªಲೇ ಕೂಡಿದೆ.
2. ನೀರು ಶಕ್ತಿಯ ಮೂಲ ಕೂಡ. ಹರಿಯುವ ನೀರಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸುವುದು ನಿಮಗೆ ತಿಳಿದೇ ಇರುತ್ತದೆ. ಅದನ್ನು ಹೈಡ್ರೋಎಲಕ್ಟ್ರಿಸಿಟಿ ಎಂದು ಕರೆಯುವರು. ಇದಲ್ಲದೆ ಭೂಮಿಯ ಒಡಲಾಳದಲ್ಲಿನ ಒರತೆ ಕೊರಕಲುಗಳ ನಡುವಿಂದ ಲಾವಾ ಹರಿದು ಅದರ ಆವಿ ಮಾತ್ರ ಭೂಮಿಯ ಮೇಲ್ಮೆ„ ತಲುಪುತ್ತದೆ. ಇದನ್ನು ಬಳಸಿ ಪರಿಸರ ಸ್ನೇಹಿ ವಿದ್ಯುತ್ ಅನ್ನು ತಯಾರಿಸುತ್ತಾರೆ. ಅದನ್ನು ಜಿಯೋ ಥರ್ಮಲ್ ಪವರ್ ಎನ್ನುವರು.
3. ತಣ್ಣಗಿನ ನೀರು ಕುಡಿದಾಗ ಕೆಲವೊಮ್ಮೆ ಮೈ ಜುಮ್ಮೆನ್ನುತ್ತದೆ. ಇದು ಏಕೆಂದರೆ ತಣ್ಣೀರು ವೇಗಸ್ ಎನ್ನುವ ನರವನ್ನು ಪ್ರಚೋದಿಸುತ್ತದೆ. ವೇಗಸ್ ನರ ಮೆದುಳಿನಿಂದ ಸೂಚನೆಗಳನ್ನು ಇತರೆ ಅಂಗಗಳಿಗೆ ರವಾನಿಸುವ ನರ. ತಣ್ಣೀರಿನಿಂದ ನರ ಪ್ರಚೋದನೆಗೊಂಡಾಗ ಜೋರಾಗಿ ಹೊಡೆದುಕೊಳ್ಳುವ ಹೃದಯ ತಹಬದಿಗೆ ಬರುತ್ತದೆ. ಮನಸ್ಸು ಶಾಂತವಾಗುತ್ತದೆ.
4. ನೀರು ಭೂಮಿ ಮೇಲೆ ಬಂದಿದ್ದಾದರೂ ಹೇಗೆ? ಕೆಲ ವಿಜ್ಞಾನಿಗಳ ಊಹೆಯಂತೆ ಶತಕೋಟಿ ವರ್ಷಗಳ ಹಿಂದೆ ಆಕಾಶಕಾಯ ಅಥವಾ ಮಂಜುಗಡ್ಡೆಯಿದ್ದ ಧೂಮಕೇತು ಭೂಮಿಗೆ ಬಡಿದಾಗ ಅದರಲ್ಲಿದ್ದ ಮಂಜುಗಡ್ಡೆ ಭೂಮಿ ಮೇಲೆ ನೀರಾಗಿ ಭೂಮಿಯ ವಾತಾವರಣ ಸೇರಿತು.
5. ಒಂದು ಪಾತ್ರೆಯಲ್ಲಿ ಬಿಸಿ ನೀರು, ಮತ್ತೂಂದು ಪಾತ್ರೆಯಲ್ಲಿ ತಣ್ಣೀರು. ಇವೆರಡನ್ನು ಫ್ರೀಜರ್‌ನಲ್ಲಿಟ್ಟರೆ ಮೊದಲು ಮಂಜುಗಡ್ಡೆಯಾಗುವುದು ಯಾವುದು? ನಿಮ್ಮ ಉತ್ತರ ತಣ್ಣೀರು ಅಂತಾದರೆ, ಅದು ತಪ್ಪು! ಬಿಸಿ ನೀರು ಮೊದಲು ಮಂಜುಗಡ್ಡೆಯಾಗಿ ಪರಿವರ್ತಿತವಾಗುತ್ತದೆ.
– ಹರ್ಷವರ್ಧನ್ ಸುಳ್ಯ