Advertisement
Related Articles
Advertisement
ತನ್ನ ಚುಂಚಿನ ಸಮತೋಲನ ಕಾಯ್ದುಕೊಳ್ಳಲು ತುಂಬಾ ಬಲಿಷ್ಟವಾದ ಕುತ್ತಿಗೆ, ಮಾಂಸಖಂಡ ಈ ಹಕ್ಕಿಯಲ್ಲಿ ರೂಪುಗೊಂಡಿದೆ. ಇದರ ಕಣ್ಣುಗಳು ಸಹ ಅತಿ ಸೂಕ್ಷ್ಮವಾಗಿ ರೂಪುಗೊಂಡಿವೆ. ಅದರ ರಕ್ಷಣೆಗಾಗಿ ಈ ತಳಿಯ ಹಕ್ಕಿಗಳಲ್ಲಿ ಕಣ್ಣಿನ ಮೇಲೆಯೇ ಕಣ್ಣಿನ ಪಟಲ ರೂಪುಗೊಂಡಿದೆ. ಒಮ್ಮೆ ಮೆಚ್ಚಿ ಒಂದಾದ ಹಕ್ಕಿಗಳು ಜೀವಮಾನ ಪೂರ್ತಿ ಜೊತೆಯಾಗಿಯೇ ಬದುಕುತ್ತವೆ. ಅತಿ ಹೆಚ್ಚು ಮಳೆ ಬೀಳುವ ಉಷ್ಣವಲಯ ಮತ್ತು ಸಮಶೀತೋಷ್ಣ ವಲಯಗಳ ದೊಡ್ಡ ಮರಗಳಿರುವ ಬೆಟ್ಟ ಪ್ರದೇಶದಲ್ಲಿ ಈ ಹಕ್ಕಿಗಳು ಇರುನಲೆ ಮಾಡಿಕೊಂಡಿರುತ್ತವೆ. ಅದಲ್ಲದೇ ಫಾಸಲ್ ಅವರ ದಾಖಲೆಯಂತೆ ಸುಮಾರು 15ಮಿಲಿಯನ್ ವರ್ಷಗಳ ಹಿಂದೆ ಈ ಕೊಂಬು ಕೊಕ್ಕಿನ ದೊಡ್ಡ ಹಕ್ಕಿ ಇರುವುದು ದಾಖಲಾಗಿದೆ.
ಈ ಹಕ್ಕಿಗಳು 45 ವರ್ಷಕ್ಕಿಂತ ಹೆಚ್ಚು ಕಾಲ ಬದುಕಿರುವ ಉಲ್ಲೇಖವಿದೆ. ಅಲ್ಲದೇ, ಅತ್ಯಂತ ದೊಡ್ಡ ಮೇಲ್ಕೊಕ್ಕನ್ನು ಹೊಂದಿರುವ ಹಕ್ಕಿ ಬಾಳಿದ್ದೂ ದಾಖಲಾಗಿದೆ. ಹೀಗೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದ ಹಕ್ಕಿ ಇದಾಗಿದೆ. ಇದರ ಚುಂಚು ಮತ್ತು ಮೇಲುcಂಚಿನ ಭಾರ ಇದರ ದೇಹದ ಭಾರದ ಶೇ. 11ರಷ್ಟು ಇರುತ್ತದೆ. ಹಕ್ಕಿಗೆ ಇದರಿಂದ ಆಗುವ ಲಾಭ ಏನು? ಎಂಬುದು ಸಂಶೋಧನೆಯಿಂದ ತಿಳಿಯಬೇಕಾಗಿದೆ. ಸುಂದರ ಚುಂಚು, ಬಣ್ಣ ಬಣ್ಣದ ಸುಂದರ ರೆಕ್ಕೆಗಾಗಿ ಇದನ್ನು ಕೊಲ್ಲುವುದರಿಂದ ಇದರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಕೋಡು ಕೊಕ್ಕಿನ ಹಕ್ಕಿಗಳ ಕುತ್ತಿಗೆ ಮಾಂಸ ಖಂಡಗಳೂ ಅತ್ಯಂತ ಬಲವಾಗಿದ್ದು -ಉದ್ದ ಮತ್ತು ಹೆಚ್ಚು ಭಾರ ಇರುವ ಕೊಕ್ಕನ್ನು ಹೊಂದಿದ್ದರೂ ಸರಾಗವಾಗಿ ತನ್ನ ಕುತ್ತಿಗೆಯನ್ನು ಆಚೆ- ಈಚೆ ತಿರುಗಿಸಲು ಅನುಕೂಲಕರವಾಗಿದೆ.
ಮರಕುಟುಕ ಹಕ್ಕಿಯ ಕುತ್ತಿಗೆಯಂತೆ ಈ ಹಕ್ಕಿಯ ಕುತ್ತಿಗೆಯ ಮಾಂಸಖಂಡಗಳೂ -ಮರದ ದಿಮ್ಮಿ ಕೊರೆಯಲು, ಗೂಡು ರಚಿಸಲು ಮತ್ತು ಹೆಣ್ಣು ಹಕ್ಕಿ ಗೂಡಿನ ಒಳಸೇರಿ ಒಳಗಿನಿಂದ-ಹಣ್ಣಿನ ಚರಟ, ಮರದ ಪುಡಿ, ಮಣ್ಣು ಸೇರಿಸಿ ಗೂಡು ಕಟ್ಟಲು ನೆರವಾಗುತ್ತದೆ. ಹೆಣ್ಣು ಹಕ್ಕಿ ಗೂಡು ಸೇರಿ 4-6 ತಿಂಗಳ ಕಾಲ ಬಂದಿಯಾಗುತ್ತದೆ. ಆ ಸಮಯದಲ್ಲಿ ಗಂಡು- ಹೆಣ್ಣಿಗೆ ಆಹಾರವನ್ನು ಹಾರಿಸಿ ಹಾರಿಸಿ ಚುಂಚಿನ ತುದಿ ತಂದುಕೊಂಡು ಹಣ್ಣನ್ನು ಎಸೆಯಲು -ಈ ದೊಡ್ಡ ಚುಂಚಿನ ನೆರವುಬೇಕಾಗುತ್ತದೆ. ದೊಡ್ಡ ಚುಂಚಾಗಿರುವುದರಿಂದ ಇದರ ಒಳಗಡೆ ಒಂದಕ್ಕಿಂತ ಹೆಚ್ಚು ಹಣ್ಣು ಇರಿಸಿಕೊಳ್ಳಲು ಸಹಕಾರಿ. ಕೋಡು ಚುಂಚಿನ ಹಕ್ಕಿಗೆ ಹಳಗೇರು, ಆಲ, ಬಸರಿ, ಅತ್ತಿ, ಬೈಣೆ ಹಣ್ಣುಗಳು ಪ್ರಧಾನ ಆಹಾರ. ಈ ಹಕ್ಕಿಯ ಮಲವಿಸರ್ಜನೆಯಿಂದ ಬೀಜ ಮೊಳೆತು ಸಸಿಯಾಗುವುದರಿಂದ ಕಾಡಿನ ಮರಗಳ ಅಭಿವೃದ್ಧಿಯಲ್ಲಿ ಇದರ ಪಾತ್ರ ಸಹ ಹಿರಿದು. ಕೆಲವೊಮ್ಮ ಚಿಕ್ಕ ಪುಟ್ಟ ಕೀಟ, ಹಾವುಗಳನ್ನು ಹಿಡಿದು ತಿಂದ ಉದಾಹರಣೆಯೂ ಇದೆ.
ಈ ಹಕ್ಕಿ ಸಾಮಾನ್ಯವಾಗಿ 24 ದಿನಗಳವರೆಗೆ ಮೊಟ್ಟೆಗೆ ಕಾವು ಕೊಡುತ್ತದೆ. ದೊಡ್ಡ ಹಕ್ಕಿ 45 ದಿನಗಳ ಕಾಲ ಕಾವುಕೊಡುತ್ತದೆ. ಈ ಸಂದರ್ಭದಲ್ಲಿ ಹೆಣ್ಣು ಹಕ್ಕಿಗೆ ಮತ್ತು ಮರಿಗಳಿಗೆ ಆಹಾರ ಸರಬರಾಜು ಮಾಡುವ ಜವಾಬ್ದಾರಿ ಗಂಡು ಹಕ್ಕಿಯದು. ಇದು ದಿನಕ್ಕೆ ಸುಮಾರು 70 ಕ್ಕಿಂತ ಹೆಚ್ಚು ಸಲ ಆಹಾರ ನೀಡುತ್ತದೆ . ಮರಿ ಬೆಳೆದು ದೊಡ್ಡದಾದಾಗ, ಗೂಡಲ್ಲಿ ಜಾಗ ಸಾಲದಂತಾದಾಗ ಹೆಣ್ಣು ಚಿಕ್ಕ ಗೂಡನ್ನು ಒಡೆದು, ಗೂಡನ್ನು ದೊಡ್ಡದು ಮಾಡಿ, ಪುನಃ ಬಂದಹಾಕಿ ಗೂಡನ್ನು ರಿಪೇರಿ ಮಾಡುತ್ತದೆ. ಪಿ. ವಿ. ಭಟ್ ಮೂರೂರು