Advertisement

ನೈಟ್‌ ಶತಕ; ಇಂಗ್ಲೆಂಡಿಗೆ ದಾಖಲೆ ಗೆಲುವು

09:27 AM Feb 28, 2020 | sudhir |

ಕ್ಯಾನ್‌ಬೆರಾ: ನಾಯಕಿ ಹೀತರ್‌ ನೈಟ್‌ ಅವರ ಅಜೇಯ 108 ರನ್‌ ಪರಾಕ್ರಮದಿಂದ ಬುಧವಾರದ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ ಮೇಲೆ ಸವಾರಿ ಮಾಡಿದ ಇಂಗ್ಲೆಂಡ್‌ 98 ರನ್ನುಗಳ ಜಯಭೇರಿ ಮೊಳಗಿಸಿದೆ. ಇದು ಟಿ20 ವಿಶ್ವಕಪ್‌ನಲ್ಲಿ ದಾಖಲಾದ ರನ್‌ ಅಂತರದ ಅತೀ ದೊಡ್ಡ ಗೆಲುವು.
ಇಂಗ್ಲೆಂಡ್‌ 2 ವಿಕೆಟಿಗೆ 176 ರನ್‌ ಪೇರಿಸಿತು. ಇದು ಇಂಗ್ಲೆಂಡಿನ ಸರ್ವಾಧಿಕ ಟಿ20 ಗಳಿಕೆ. ಥಾಯ್ಲೆಂಡ್‌ 7 ವಿಕೆಟಿಗೆ 78 ರನ್‌ ಮಾಡಿ ಶರಣಾಯಿತು.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ ಆರಂಭಿಕರಿಬ್ಬರನ್ನೂ ಶೂನ್ಯಕ್ಕೆ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಆದರೆ ನಥಾಲಿ ಶೀವರ್‌ ಮತ್ತು ಹೀತರ್‌ ನೈಟ್‌ ಮುರಿಯದ 3ನೇ ವಿಕೆಟಿಗೆ 169 ಪೇರಿಸಿದರು. ಇದು ವನಿತಾ ಟಿ20 ವಿಶ್ವಕಪ್‌ ಚರಿತ್ರೆಯಲ್ಲಿ ಎಲ್ಲ ವಿಕೆಟ್‌ಗಳಿಗೆ ಅನ್ವಯವಾಗುವಂತೆ ದಾಖಲಾದ ಅತ್ಯಧಿಕ ಮೊತ್ತ.

ನೈಟ್‌ ಅವರ ಅಜೇಯ 108 ರನ್‌ 66 ಎಸೆತಗಳಿಂದ ಹರಿದು ಬಂತು. ಸಿಡಿಸಿದ್ದು 13 ಬೌಂಡರಿ, 4 ಸಿಕ್ಸರ್‌. ಶೀವರ್‌ 52 ಎಸೆತ ಎದುರಿಸಿ 58 ರನ್‌ ಹೊಡೆದರು (8 ಬೌಂಡರಿ).

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-2 ವಿಕೆಟಿಗೆ 176 (ನೈಟ್‌ ಅಜೇಯ 108, ಶೀವರ್‌ ಅಜೇಯ 58). ಥಾಯ್ಲೆಂಡ್‌-7 ವಿಕೆಟಿಗೆ 78 (ಚಾಂಟಮ್‌ 32, ಚೈವೈ ಅಜೇಯ 19, ಶ್ರಬೊÕàಲ್‌ 21ಕ್ಕೆ 3, ಶೀವರ್‌ 5ಕ್ಕೆ 2).

ಪಂದ್ಯಶ್ರೇಷ್ಠ: ಹೀತರ್‌ ನೈಟ್‌.

Advertisement

ಹೀತರ್‌ ನೈಟ್‌ ದಾಖಲೆಗಳು
– ಹೀತರ್‌ ನೈಟ್‌ ಮೂರೂ ಪ್ರಕಾರಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ್ತಿ. ಅವರು ಆಸ್ಟ್ರೇಲಿಯ ವಿರುದ್ಧದ 2013ರ ಟೆಸ್ಟ್‌ನಲ್ಲಿ 157 ರನ್‌ ಹಾಗೂ 2017ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ 106 ರನ್‌ ಬಾರಿಸಿದ್ದರು.

– ನೈಟ್‌ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡಿನ ಮೊದಲ ಆಟಗಾರ್ತಿ. ಬಾಂಗ್ಲಾದೇಶ ವಿರುದ್ಧದ 2014ರ ಪಂದ್ಯದಲ್ಲಿ ಚಾರ್ಲೋಟ್‌ ಎಡ್ವರ್ಡ್ಸ್‌ 80 ರನ್‌ ಹೊಡೆದದ್ದು ಹಿಂದಿನ ದಾಖಲೆ.

– ನೈಟ್‌ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ವಿಶ್ವದ 4ನೇ ಆಟಗಾರ್ತಿ. ಮೆಗ್‌ ಲ್ಯಾನಿಂಗ್‌, ಡಿಯಾಂಡ್ರ ಡಾಟಿನ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಉಳಿದ ಮೂವರು.

– ನೈಟ್‌ ಏಕದಿನ ಹಾಗೂ ಟಿ20 ವಿಶ್ವಕಪ್‌ಗ್ಳೆರಡರಲ್ಲೂ ಸೆಂಚುರಿ ಹೊಡೆದ ವಿಶ್ವದ 2ನೇ ಆಟಗಾರ್ತಿ. ಮೆಗ್‌ ಲ್ಯಾನಿಂಗ್‌ ಮೊದಲ ಸಾಧಕಿ.

– ಟಿ20 ಕ್ರಿಕೆಟ್‌ನಲ್ಲಿ ನೈಟ್‌ 4ನೇ ಸಲ 50 ಪ್ಲಸ್‌ ರನ್‌ ಬಾರಿಸಿದರು. ಇವೆಲ್ಲವೂ ಕ್ಯಾನ್‌ಬೆರಾದ “ಮನುಕ ಓವಲ್‌’ನಲ್ಲೇ ದಾಖಲಾದದ್ದು ವಿಶೇಷ.

– ನೈಟ್‌ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡಿನ ಮೊದಲ ನಾಯಕಿ. 2014ರ ಆಸ್ಟ್ರೇಲಿಯ ಎದುರಿನ ಪಂದ್ಯದಲ್ಲಿ ಚಾರ್ಲೋಟ್‌ ಎಡ್ವರ್ಡ್ಸ್‌ ಅಜೇಯ 92 ರನ್‌ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

– ಹೀತರ್‌ ನೈಟ್‌ ಟಿ20 ಕ್ರಿಕೆಟ್‌ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಇಂಗ್ಲೆಂಡಿನ 7ನೇ ಆಟಗಾರ್ತಿ ಎನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next