ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿ ಶಶಾಂಕ್ ಮೇಲೆ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮೊಬೈಲ್‌ನಲ್ಲಿದ್ದ ಯುವತಿಯೊಬ್ಬಳ ಫೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಘಟನೆ ನಡೆದಿದೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಜೂ.4ರಂದು ಕಾಮಾಕ್ಷಿಪಾಳ್ಯ ನಿವಾಸಿ ಶಶಾಂಕ್ ತನ್ನ ಸ್ನೇಹಿತ ಸುಪ್ರೀತ್‌ಗೌಡ ಜತೆ ವಿನಾಯಕ ನಗರದ ಸಮೀಪದ ರುದ್ರಮ್ಮ-ರುದ್ರೇಗೌಡ ಕಲ್ಯಾಣ ಮಂಟಪದ ಬಳಿ ಹೋದಾಗ ಕಮಲನಗರ ನಿವಾಸಿ ಪ್ರಸಾದ್ ಹಾಗೂ ಇತರರೊಂದಿಗೆ ಗಲಾಟೆ ತೆಗೆದ ಆರೋಪಿಗಳು ಚಾಕುವಿನಿಂದ ಶಶಾಂಕ್ ಬೆನ್ನಿಗೆ ಇರಿದಿದ್ದರು.
ಆದರೆ, ಕೆಳಗೆ ಬಿದ್ದಿದ್ದ ಮೊಬೈಲ್ ತೆಗೆದುಕೊಳ್ಳುವಾಗ ಅಪರಿಚಿತರು ಹಲ್ಲೆ ನಡೆಸಿದ್ದರು ಎಂದು ಶಶಾಂಕ್ ಕಲಾಸಿಪಾಳ್ಯ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಆದರೆ, ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಪ್ರಕರಣದ ಹಿಂದಿನ ಸತ್ಯ ಗೊತ್ತಾಗಿದೆ.
ಆಗಿದ್ದೇನು: ಕೆಂಗೇರಿ ಬಳಿಯ ಎಸಿಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಶಾಂಕ್‌ನ ಸ್ನೇಹಿತ ಸುಪ್ರೀತ್ ಗೌಡ ಎಂಬಾತ ಯುವತಿಯೊಬ್ಬಳ ಫೋಟೋವನ್ನು ತನ್ನ ಮೊಬೈಲ್‌ನಲ್ಲಿ ಇಟ್ಟುಕೊಂಡು ಬ್ಲ್ಯಾಕ್‌ವೆುàಲ್ ಮಾಡುತ್ತಿದ್ದ. ಇದಕ್ಕೆ ಕಮಲಾನಗರ ನಿವಾಸಿ ಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲ ದಿನಗಳ ಹಿಂದೆ ವಿಜಯನಗರದ ಮಾರುತಿ ಮಂದಿರ ಬಳಿ ಸುಪ್ರೀತ್‌ಗೌಡನಿಗೆ ಯುವತಿಯನ್ನು ಬ್ಲಾಕ್‌ವೆುàಲ್ ಮಾಡದಂತೆ ಎಚ್ಚರಿಕೆ ನೀಡಿದ್ದ. ಇದರಿಂದ ಇಬ್ಬರು ನಡುವೆ ವೈಷಮ್ಯ ಬೆಳೆದಿತ್ತು.
ಈ ಮಧ್ಯೆ ಸುಪ್ರೀತ್‌ಗೌಡಗೆ ಕರೆ ಮಾಡಿದ್ದ ಪ್ರಸಾದ್, ರಾಜಿ ಮಾಡಿಕೊಳ್ಳುವ ಕುರಿತು ಮಾತನಾಡಲು ಕಾಮಾಕ್ಷಿಪಾಳ್ಯದ ವಿನಾಯಕನಗರಕ್ಕೆ ಬರುವಂತೆ ಹೇಳಿದ್ದ. ಅದರಂತೆ ಸುಪ್ರೀತ್‌ಗೌಡ ತನ್ನ ಸ್ನೇಹಿತ ಶಶಾಂಕ್‌ನನ್ನು ಮಾತುಕತೆಗೆ ಕರೆದೊಯ್ದಿದ್ದ. ಈ ವೇಳೆ ಮಾತುಕತೆ ಸಂದರ್ಭದಲ್ಲಿ ಯುವತಿಯ ಫೋಟೋ ಇದ್ದ ಮೊಬೈಲ್ ನೀಡುವಂತೆ ಪ್ರಸಾದ್ ಕೇಳಿದಾಗ ಸುಪ್ರೀತ್‌ಗೌಡ ನಿರಾಕರಿಸಿದ್ದ. ಇದರಿಂದ ಮತ್ತೆ ಪ್ರಸಾದ್ ಮತ್ತು ಸುಪ್ರೀತ್ ಮಧ್ಯೆ ಮಾತಿನ ಚಕಮಕಿಯಾಗಿ ಕೈ ಮಿಲಾಯಿಸುವ ಹಂತ ತಲುಪಿತು.
ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಪ್ರಸಾದ್ ತನ್ನ ಬಳಿಯಿದ್ದ ಬಟನ್ ಚಾಕುವಿನಿಂದ ಸುಪ್ರೀತ್‌ಗೌಡನ ಮೇಲೆ ಹಲ್ಲೆಗೆ ಮುಂದಾದ. ಈ ವೇಳೆ ಸುಪ್ರೀತ್‌ಗೌಡ ತಪ್ಪಿಸಿಕೊಂಡಿದ್ದು, ಚಾಕು ಜತೆಗಿದ್ದ ಶಶಾಂಕ್ ಬೆನ್ನಿಗೆ ನುಗ್ಗಿತ್ತು. ಇದರಿಂದ ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದ್ದ ಶಶಾಂಕ್‌ನನ್ನು ಕಾಮಾಕ್ಷಿಪಾಳ್ಯದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಪ್ರಕರಣ ಸಂಬಂಧ ಆರೋಪಿ ಪ್ರಸಾದ್‌ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ವೇಳೆ ಯುವತಿಯ ಫೋಟೋ ವಿಚಾರವಾಗಿ ಗಲಾಟೆ ನಡೆದ ಬಗ್ಗೆ ಹೇಳಿಕೆ ನೀಡಿದ್ದಾನೆ. ಮತ್ತೂಂದೆಡೆ ಸುಪ್ರೀತ್‌ಗೌಡ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.