ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲದಲ್ಲೀಗ (ಕೆಎಂಎಫ್) ಹಾಲಿನ ಹೊಳೆ ಹರಿದಿದೆ. ರಾಸು ಹಸುಗಳಿಗೆ ಹಸಿ ಮೇವು ಸಿಗುತ್ತಿರುವುದರಿಂದ ಕೆಎಂಎಫ್ ನ ಹಾಲಿನ ಪೊರೈಕೆ ಇದೀಗ 1 ಕೋಟಿ ಲೀಟರ್‌ಗೆ ತಲುಪಿದೆ. ಕಳೆದ ಜೂ.28 ಮತ್ತು 29ರಂದು ರೈತರು ಕೆಎಂಎಫ್ ಗೆ 1 ಕೋಟಿ ಲೀಟರ್ ಹಾಲು ಪೂರೈಕೆ ಮಾಡಿದ್ದು ಇದು ಕೆಎಂಫ್ ನ ಹಾಲು ಪೂರೈಕೆಯಲ್ಲಿ ದಾಖಲೆಯಾಗಿದೆ.
ಕಳೆದ ತಿಂಗಳ 27 ತಾರೀಖೀನವರೆಗೂ ಹಾಲು 98 ಲಕ್ಷ ಲೀಟರ್ ಆಸು ಪಾಲಿನಲ್ಲೇ ಇತ್ತು. ಇದಾದ ಒಂದೆರಡು ದಿನಗಳಲ್ಲಿ ಒಂದು ಕೋಟಿ ಲೀಟರ್ ತಲುಪಿದೆ ಎಂದು ಕೆಎಂಎಫ್ ನಿರ್ದೇಶಕ ಜಗದೀಶ್ ಮಾಹಿತಿ ನೀಡಿದ್ದಾರೆ.
ರಾಜ್ಯವ್ಯಾಪಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಸು ಹಸುಗಳಿಗೆ ಹಸಿಮೇವು ಸಿಗುತ್ತಿದೆ. ಆ ಹಿನ್ನೆಲೆಯಲ್ಲಿ ರಾಸು ಹಸುಗಳು ಹೆಚ್ಚು ಹಾಲು ನೀಡುತ್ತಿವೆ. ಆದರೆ, ಕಳೆದ ಒಂದೆರಡು ದಿನಗಳಿಂದ 98 ಲಕ್ಷ ಲೀಟರ್ ಹಾಲು ಪೂರೈಕೆ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಕೆಎಂಎಫ್ ನಲ್ಲಿ ಇಷ್ಟು ಪ್ರಮಾಣದಲ್ಲಿ ಹಾಲು ಪೂರೈಕೆ ಯಾವ ವರ್ಷವೂ ಆಗಿರಲಿಲ್ಲ. ಆದರೆ, ಈ ವರ್ಷ ಹೊಸ ದಾಖಲೆಯಾಗಿದೆ ಎಂದು ಹೇಳಿದ್ದಾರೆ. ರೈತರಿಂದ ಹಾಲು ಹೆಚ್ಚಿಗೆ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ಸಂಗ್ರಹ ಕಷ್ಟವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಹೆಚ್ಚುವರಿ ಹಾಲನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಪ್ರತಿ ನಿತ್ಯ ಸರಾಸರಿ 98.17 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿತ್ತು. ಇದೇ ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್)ದ ಸಾರ್ವಕಾಲಿಕ ದಾಖಲೆಯಾಗಿತ್ತು. ಇದೀಗ ಈ ಪ್ರಮಾಣ 1 ಕೋಟಿ ಲೀಟರ್‌ಗಳ ಗಡಿಯನ್ನೂ ದಾಟಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಹಾಲು ಸಂಗ್ರಹಣೆ ಪ್ರಮಾಣವು ಶೇ. 15ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.