Advertisement

ಮಂಗಳೂರು to ಬೆಂಗಳೂರು:ನವಜಾತ ಶಿಶುವನ್ನು ಹೊತ್ತು ಝೀರೋಟ್ರಾಫಿಕ್ ಮೂಲಕ ಸಾಗಿದ ಆ್ಯಂಬುಲೆನ್ಸ್

03:12 PM Mar 18, 2020 | Hari Prasad |

ಮಂಗಳೂರು: ಗಂಭೀರ ಹೃದಯದ ಸಮಸ್ಯೆಯಿಂದ ಬಳಲುತ್ತಿರುವ 40 ದಿನದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Advertisement

ಬಿಸಿರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನರಾಯಪಟ್ಟಣ, ನೆಲಮಂಗಲ ಮೂಲಕ ಬೆಂಗಳೂರು ಹೊರವಲಯವನ್ನು ಪ್ರವೇಶಿಸಿ ಅಲ್ಲಿಂದ ಬಳಿಕ ನೇರವಾಗಿ ಜಯನಗರ 9ನೇ ಬ್ಲಾಕ್ ನಲ್ಲಿರುವ ಜಯದೇವ ಆಸ್ಪತ್ರೆಗೆ ಆ್ಯಂಬುಲೆನ್ಸ್ ತಲುಪಿತು.

ಕಡಿದಾದ ತಿರುವು ರಸ್ತೆ ಮತ್ತು ‍ಘಾಟಿ ಮಾರ್ಗದ ಮೂಲಕ ಆ್ಯಂಬುಲೆನ್ಸ್ ಚಲಾಯಿಸಿ ನವಜಾತ ಶಿಶುವನ್ನು ಸಕಾಲದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಿದ ಕೆ.ಎಂ.ಸಿ.ಸಿ. ಆ್ಯಂಬುಲೆನ್ಸ್ ನ ಚಾಲಕ ಹನೀಫ್ ಬಳಂಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನೆಕೆರೆಯವರು ಎಂಬ ಮಾಹಿತಿ ಲಭ್ಯವಾಗಿದೆ.


ಹೀಗೊಂದು ಆ್ಯಂಬುಲೆನ್ಸ್ ಬರುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೊದಲೇ ಸೂಚನೆ ನೀಡಿದ್ದ ಕಾರಣ ಇದು ಸಾಗಿ ಬರುವ ರಸ್ತೆಯುದ್ದಕ್ಕೂ ಜನರು ರಸ್ತೆಯ ಎರಡೂ ಕಡೆಗಳಲ್ಲಿ ನಿಂತು ಆ್ಯಂಬುಲೆನ್ಸ್ ಸಾಗಲು ಅವಕಾಶ ಮಾಡಿಕೊಟ್ಟರು.

ಹ್ಯಾರಿಸ್ ಗೇರುಕಟ್ಟೆ ಅವರ 40 ದಿನ ಪ್ರಾಯದ ಮಗು ಗಂಭೀರ ಹೃದಯಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯುವಂತೆ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದರು.

Advertisement

ಬಳಿಕ ಕೆ.ಎಂ.ಸಿ.ಸಿ.ಯ ಆ್ಯಂಬುಲೆನ್ಸ್ ನಲ್ಲಿ ಮಗುವನ್ನು ‘ಝೀರೋ’ ಟ್ರಾಫಿಕ್ ವ್ಯವಸ್ಥೆಯಲ್ಲಿ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಕರೆದೊಯ್ಯಲು ನಿರ್ಧರಿಸಲಾಯಿತು. ರಾಜ್ಯ ಪೊಲೀಸ್ ಇಲಾಖೆಯ ಸಕಾಲಿಕ ಸ್ಪಂದನದೊಂದಿಗೆ ಆ್ಯಂಬುಲೆನ್ಸ್ ಸಾಗುವ ಹೆದ್ದಾರಿಯನ್ನು ಸಂಚಾರ ಮುಕ್ತಗೊಳಿಸುವಲ್ಲಿ ಆಯಾ ಪ್ರದೇಶದ ಪೊಲೀಸ್ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸ್ ಸಿಬ್ಬಂದಿಗಳ ಸಕಾಲಿಕ ನೆರವಿನೊಂದಿಗೆ ಈ ಆ್ಯಂಬುಲೆನ್ಸ್ ಇಂದು ಸಾಯಂಕಾಲ 4.35ರ ಸುಮಾರಿಗೆ ಜಯದೇವ ಆಸ್ಪತ್ರೆಯನ್ನು ತಲುಪಿತು.

ಇದೀಗ ಮಗುವನ್ನು ಜಯದೇವ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಿಕೊಳ್ಳಲಾಗಿದೆ. ಈ ಆ್ಯಂಬುಲೆನ್ಸನ್ನು ಬೆಂಗಳೂರಿನ ಹನೀಫ್ ಬಳಂಜ ಅವರು ಚಲಾಯಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next