Advertisement

ಮಣಿಪಾಲ KMC ಮತ್ತು ಉಡುಪಿ TMAಪೈ ಆಸ್ಪತ್ರೆಗಳಲ್ಲಿ ನಾಳೆಯಿಂದ ಒಪಿಡಿ ಸೇವೆಗಳು ಸಂಪೂರ್ಣ ಬಂದ್

10:44 AM Mar 27, 2020 | Hari Prasad |

ಉಡುಪಿ: ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆ ಹಾಗೂ ಉಡುಪಿಯಲ್ಲಿರುವ ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಮಾರ್ಚ್ 27ರ ಶುಕ್ರವಾರದಿಂದ ಅನ್ವಯವಾಗುವಂತೆ ಎಪ್ರಿಲ್ 15ರವರೆಗೆ ಎಲ್ಲಾ ರೀತಿಯ ಹೊರ ರೋಗಿ ಚಿಕಿತ್ಸಾ ಸೇವೆಗಳನ್ನು (ಒ.ಪಿ.ಡಿ.) ರದ್ದುಗೊಳಿಸಲಾಗಿದೆ. ಕೋವಿಡ್ 19 ವೈರಸ್ ಪ್ರಕರಣಗಳು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಈ ನಿರ್ಧಾರವನ್ನು ಇಂದು ಪ್ರಕಟಿಸಿದ್ದಾರೆ.

Advertisement

ಆದರೆ, ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಅಪಘಾತ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗಳು ಅಗತ್ಯವಿರುವ ರೋಗಿಗಳಿಗೆ ಲಭ್ಯವಿರುತ್ತದೆ. ಆದರೆ ಉಡುಪಿಯಲ್ಲಿರುವ ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ಹೊರ ರೋಗಿ, ಒಳ ರೋಗಿ ಮತ್ತು ತುರ್ತು ಸೇವಾ ವಿಭಾಗಗಳನ್ನು ಈ ಮೇಲೆ ತಿಳಿಸಿದ ದಿನಾಂಕದವರೆಗೆ ಮುಚ್ಚಲಾಗುವುದು.

ಜ್ವರ, ಕೆಮ್ಮು ಸೇರಿದಂತೆ ಬೇರಿನ್ಯಾವುದೇ ಆರೋಗ್ಯ ಸಮಸ್ಯೆಗಳ ತಪಾಸಣೆಗೆ ಬರುವ ರೋಗಿಗಳು ನೇರವಾಗಿ ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡತಕ್ಕದ್ದು. ಅಲ್ಲಿಂದ ಬಳಿಕ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಆಸ್ಪತ್ರೆಯ ಸಂಬಂಧಿತ ವಿಭಾಗಗಳಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು.

ಕಿಮೋಥೆರಪಿ ಮತ್ತು ರೇಡಿಯೋಥೆರಪಿಗಾಗಿ ಆಗಮಿಸುವ ರೋಗಿಗಳು ನೇರವಾಗಿ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಗೆ ಬರತಕ್ಕದ್ದು. ಗರ್ಭಿಣಿಯರು ನೇರವಾಗಿ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ಬರತಕ್ಕದ್ದು. ಡಯಾಲಿಸಿಸ್‍ನಲ್ಲಿರುವವರು ನೇರವಾಗಿ ಡಯಾಲಿಸಿಸ್ ಕೇಂದ್ರಕ್ಕೆ ಬರತಕ್ಕದ್ದು. ಪ್ರಯೋಗಾಲಯ ಪರೀಕ್ಷಾ ಸೇವೆಯು ತುರ್ತು ಸಂದರ್ಭಕ್ಕೆ ಮಾತ್ರ ಅನ್ವಯಿಸುವುದು. ಮಕ್ಕಳಿಗೆ ಕೊಡಲಾಗುವ ಲಸಿಕಾ ಸೌಲಭ್ಯ ಕೂಡಾ 15 ಏಪ್ರಿಲ್ 2020ರವರೆಗೆ ಇರುವುದಿಲ್ಲ.

27 ಮಾರ್ಚ್ 2020 ಶುಕ್ರವಾರದಿಂದ ಅನ್ವಯವಾಗುವಂತೆ ಡಾ. ಟಿಎಂಎ ಪೈ ಆಸ್ಪತ್ರೆ, ಉಡುಪಿಯಲ್ಲಿ ಎಲ್ಲಾ ಹೊರರೋಗಿ, ಒಳರೋಗಿ ಮತ್ತು ತುರ್ತುಸೇವೆ ವಿಭಾಗವನ್ನು ಮುಚ್ಚಲಾಗುವುದು. ತುರ್ತುಸೇವೆ ಅವಶ್ಯವಿರುವ ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿಯ ಎಲ್ಲಾ ರೋಗಿಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಭೇಟಿ ನೀಡುವಂತೆ ಈ ಮೂಲಕ ಕೋರಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next