ಮಣಿಪಾಲ: ಕೊಕ್ಕರ್ಣೆ ಬಳಿ ಜೂ .8ರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ನವೀನ್ (38) ಅವರ ಅಂಗಗಳನ್ನು ಆರು ಮಂದಿ ರೋಗಿಗಳಿಗೆ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ನವೀನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೂ.9ರ ಬೆಳಗ್ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರತರವಾದ ಗಾಯವನ್ನು ಹೊಂದಿದ್ದ ನೆಲೆಯಲ್ಲಿ ವೈದ್ಯರ ತಂಡ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಚೇತರಿಸಿಕೊಳ್ಳುವ ಲಕ್ಷಣ ಕಂಡು ಬರಲಿಲ್ಲ.
ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಅನುಸಾರ ನವೀನ್ ಅವರನ್ನು ಜೂ.10ರ ಸಂಜೆ 5ಕ್ಕೆ ಮೊದಲನೆಯ ಮತ್ತು ರಾತ್ರಿ 11.35ಕ್ಕೆ ಎರಡನೇ ಬಾರಿ (6 ಗಂಟೆಗಳ ಅಂತರದಲ್ಲಿ)ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರಿಯ ಗೊಂಡಿದೆ ಎಂದು ಘೋಷಿಸಿದರು.
ಅನಂತರ ನವೀನ್ ಅವರ ಪತ್ನಿ ಮಲ್ಲಿಕಾ ಮತ್ತು ಅವರ ಕುಟುಂಬದ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಸಾಧ್ಯವಾಗಬಹುದಾದ ಅಂಗಗಳನ್ನು ದಾನ ಮಾಡಲು ಇಚ್ಛೆಯನ್ನು ವ್ಯಕ್ತಪಡಿಸಿದರು.
ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು 2 ಕಾರ್ನಿಯಾಗಳು/ಕಣ್ಣುಗಡ್ಡೆಗಳನ್ನು ತೆಗೆದು 6 ಜನರ ಜೀವ ಉಳಿಸಲು ಸಹಾಯವಾಗಿದೆ.
ನೋಂದಾಯಿತ ರೋಗಿಗಳಿಗೆ ಎರಡು ಕಾರ್ನಿಯಾಗಳು ಮತ್ತು ಒಂದು ಮೂತ್ರಪಿಂಡ ಮತ್ತು ಚರ್ಮವನ್ನು ಕಸ್ತೂರ್ಬಾ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಬಳಸಲಾಯಿತು. ಯಕೃತ್ತು ಮತ್ತು ಒಂದು ಕಿಡ್ನಿಯನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು. ದಾನ ಮಾಡಿದ ಅಂಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಲಾಯಿತು.