ಹಾವೇರಿ: ಕನ್ನಡಿಗರಿಗೆ ಶಿಕ್ಷಣ ಮರೀಚಿಕೆಯಾದಂತಹ ಸಂದರ್ಭದಲ್ಲಿ ಉದಾತ್ತ ಮನೋಭಾವನೆಯಿಂದ ತ್ಯಾಗ ಮತ್ತು ದೂರದೃಷ್ಟಿ ಫಲವಾಗಿ ಜನ್ಮವೆತ್ತಿದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯು ಬೆಳ್ಳಿಚುಕ್ಕಿಯಂತೆ ಹೊಳೆಯುತ್ತಿದೆ ಎಂದು ಬೆಂಗಳೂರು ಎಸ್. ನಿಜಲಿಂಗಪ್ಪ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ| ವಿ.ವಿ. ಹೆಬ್ಬಳ್ಳಿ ಅಭಿಪ್ರಾಯಿಸಿದರು.
ನಗರದ ಕೆಎಲ್‌ಇ ಸಂಸ್ಥೆಯ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಕೆಎಲ್‌ಇ ಸಂಸ್ಥೆಯ 104ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ಇತಿಹಾಸದಲ್ಲಿಯೇ ಅಭೂತಪೂರ್ವವಾದ ಇತಿಹಾಸವನ್ನು ನಿರ್ಮಾಣ ಮಾಡಿದ ಕೆಎಲ್‌ಇ ಸಂಸ್ಥೆಯ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಶಿಕ್ಷಣದ ಮೌಲ್ಯವನ್ನು ಬಹು ಎತ್ತರಕ್ಕೇರಿಸಿದ ಕೀರ್ತಿ ಹೊಂದಿದೆ. ದೇಶಾದ್ಯಂತ ಹಲವಾರು ಸಂಖ್ಯೆ ಅಂಗ ಸಂಸ್ಥೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣವನ್ನು ಪ್ರಸಾರ ಮಾಡುತ್ತಿದೆ ಎಂದರು. ಇತ್ತೀಚೆಗೆ ಡಾ| ಪ್ರಭಾಕರ ಕೋರೆಯವರ
ನೇತೃತ್ವದಲ್ಲಿ ಹೊರರಾಷ್ಟ್ರಗಳಲ್ಲೂ ಅಂಗಸಂಸ್ಥೆಗಳನ್ನು ತೆರೆದು ವಿಶ್ವವ್ಯಾಪಿ ತನ್ನ ಕಾರ್ಯವನ್ನು ವಿಸ್ತರಿಸಿದೆ. ಇದರ ಹಿಂದಿನ ಏಳು ಜನ ಸ್ಥಾಪಕರ ತ್ಯಾಗ ಮತ್ತು ಸಂಕಲ್ಪ, ಇವರುಗಳೊಂದಿಗೆ ಸಹಕಾರವಿತ್ತು. ಸೇವೆಮಾಡಿದ ಮೂರು ಜನ ಮಹಾದಾನಿಗಳ ನೆನಹು ಅಜರಾಮರ. ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿ ಸಬಹುದು ಎಂಬುದಕ್ಕೆ ಇಂದು ಕೆಎಲ್‌ಇ ಸಂಸ್ಥೆಯೇ ನಿದರ್ಶನವಾಗಿದೆ. ಬಹುತರವಾದ ಚರಿತ್ರೆ ಹೊಂದಿರುವ ಸಂಸ್ಥೆ ಅತ್ಯಂತ ಕಿಮ್ಮತ್ತಿನ ಚಾರಿತ್ರವನ್ನು ಇಟ್ಟುಕೊಂಡು ಸಮಾಜವನ್ನು ಮತ್ತು ಸಮಾಜದ ಜನರನ್ನು ಉತ್ತಮ ರೀತಿಯಲ್ಲಿ ಸಂಘಟಿಸುತ್ತ ಮುನ್ನಡೆದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್ ಇ ಸಂಸ್ಥೆಯ ಉಪಾಧ್ಯಕ್ಷ ಎಂ. ಸಿ. ಕೊಳ್ಳಿ ವಹಿಸಿದ್ದರು. ಜಿ.ಎಚ್. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ.ಡಿ. ಶಿರೂರ, ಸದಸ್ಯರಾದ ಸಿ.ಬಿ. ಹಿರೇಮಠ, ಬಸವರಾಜ ಮಾಸೂರ, ಪ್ರಾಚಾರ್ಯ ಡಾ| ಎಂ.ಎಸ್. ಯರಗೊಪ್ಪ, ಬಿ. ಚನ್ನಪ್ಪ, ಜೆ. ಆರ್. ಸಿಂಧೆ, ಸಪ್ನಾ ಲೋಬೊ, ವೆಂಕಟೇಶ ಕಲಾಲ ವೇದಿಕೆಯಲ್ಲಿದ್ದರು. ಕೆ.ಎಲ್.ಇ. ಸಂಸ್ಥೆಯ ಅಂಗ ಸಂಸ್ಥೆಗಳ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ವಚನಗಾಯನ ನಡೆದವು. ಚಂದನಾ ನಾಯಕ ಸ್ವಾಗತಿಸಿದರು. ಹರ್ಷಿತಾ ಪಾಟೀಲ ಪರಿಚಯಿಸಿದರು. ವೀಣಾ ಮಠದ ನಿರ್ವಹಿಸಿದರು. ಕೃತಿ ಮಂಗಳೂರ ವಂದಿಸಿದರು.