ಒಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಮಾಡುವಾಗ ಮುಖ್ಯವಾಗಿ ಗಮನ ಹರಿಸಬೇಕಾಗಿರುವುದು ಸಿನಿಮಾದ ಕಥೆಯ ಓಟ ಹಾಗೂ ಕ್ಷಣ ಕ್ಷಣದ ಕುತೂಹಲದ ಬಗ್ಗೆ. ದೃಶ್ಯದಿಂದ ದೃಶ್ಯಕ್ಕೆ ಸಿನಿಮಾ ಕುತೂಹಲ ಕಾಯ್ದುಕೊಂಡರೆ ಅರ್ಧ ಗೆದ್ದಂತೆ. ಈ ನಿಟ್ಟಿನಲ್ಲಿ “ಕ್ಲಾಂತ’ ಒಂದು ಮೆಚ್ಚುಗೆಗೆ ಪಾತ್ರವಾಗುವ ಸಿನಿಮಾ.
ನಿರ್ದೇಶಕ ವೈಭವ್ ಪ್ರಶಾಂತ್ ಒಂದು ಥ್ರಿಲ್ಲರ್ ಕಥೆಯನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ,ವೀಕೆಂಡ್‌ನಲ್ಲಿ ಮನೆಯವರಿಗೆ ತಿಳಿಸದೆ ಹುಡುಗ-ಹುಡುಗಿ ಅಪರಿಚಿತ ಸ್ಥಳವೊಂದಕ್ಕೆ ಹೋಗಿ, ಅಲ್ಲಿ ಸಮಸ್ಯೆಗಳಿಗೆ ಸಿಲುಕಿ ಕೊಳ್ಳುತ್ತಾರೆ. ಇದರಿಂದ ಹೇಗೆ ಪಾರಾಗುತ್ತಾರೆ, ಒಂದು ನಿರ್ಧಾರ ಹೇಗೆಲ್ಲಾ ತೊಂದರೆಗೆ ಸಿಲುಕಿಸುತ್ತದೆ ಎಂಬುದೇ ಸಿನಿಮಾದ ಕಥೆಯ ಒಂದು ಎಳೆ.
“ಕ್ಲಾಂತ’ ಎಂಬ ಪದಕ್ಕೆ ಸಂಸ್ಕೃತದಲ್ಲಿ ದಣಿವು, ಆಯಾಸ ಎಂಬ ಅರ್ಥವಿದೆ. ಸಿನಿಮಾದ ಕಥೆಗೆ ಸೂಕ್ತವಾಗಿದೆ ಎಂಬ ಕಾರಣಕ್ಕೆ ಚಿತ್ರತಂಡ ಇದನ್ನೇ ಟೈಟಲ್ ಆಗಿ ಇಟ್ಟಿದೆ. ಚಿತ್ರದಲ್ಲಿ ತುಳುನಾಡಿ ಕೊರಗಜ್ಜ ದೈವದ ಪವಾಡದ ಬಗ್ಗೆ ಹೇಳಲಾಗಿದೆ. ಆರಂಭದಲ್ಲಿ ಹಾಡು, ಇಂಟ್ರೊಡಕ್ಷನ್ ಮೂಲಕ ಮೂಲ ಕಥೆ ತೆರೆದುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ, ಒಮ್ಮೆ ಕಥೆ ತೆರೆದುಕೊಂಡ ನಂತರ ಕ್ಷಣ ಕ್ಷಣಕ್ಕೂ ರೋಚಕವಾಗಿ, ಟ್ವಿಸ್ಟ್‌ಗಳ ಮೂಲಕ ಸಾಗಿ, ಪ್ರೇಕ್ಷಕರನ್ನು ಕಥೆ ಜೊತೆ ಹೆಜ್ಜೆ ಹಾಕಿಸುತ್ತದೆ. ಈ ಸಿನಿಮಾದಲ್ಲಿ ಇಂದಿನ ಯೂತ್ಸ್ಗೆ ಒಂದು ಸಂದೇಶ ಹೇಳುವ ಪ್ರಯತ್ನ ಕೂಡಾ ಆಗಿದೆ.
“ಕ್ಲಾಂತ’ ಸಿನಿಮಾದಲ್ಲಿ ವಿಘ್ನೇಶ್ ನಾಯಕರಾಗಿ ಹಾಗೂ ಸಂಗೀತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಅವರೊಂದಿಗೆ ಶೋಭರಾಜ್, ವೀಣಾ ಸುಂದರ್, ಸಂಗೀತಾ, ದೀಪಿಕಾ, ಪ್ರವೀಣ್ ಜೈನ್, ಸ್ವಪ್ನಾ ಶೆಟ್ಟಿಗಾರ್ ನಟಿಸಿದ್ದಾರೆ. ನಾಯಕ ವಿಘ್ನೇಶ್ ವಿಭಿನ್ನ ಶೇಡ್‌ಗಳಲ್ಲಿ ಗಮನ ಸೆಳೆಯುವ ಜೊತೆಗೆ ಪಾತ್ರದಲ್ಲಿ ಮಿಂಚಿದ್ದಾರೆ. ಥ್ರಿಲ್ಲರ್ ಸಿನಿಮಾವನ್ನು ಇಷ್ಟಪಡುವವರಿಗೆ “ಕ್ಲಾಂತ’ ಖುಷಿ ನೀಡಬಹುದು