ಹೊಸದಿಲ್ಲಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹತ್ತು ವಿಕೆಟ್ ಗಳ ಸೋಲನುಭವಿಸಿದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮತ್ತು ಮಾಲಕ ಸಂಜೀವ್ ಗೋಯೆಂಕಾ ಅವರ ಮಾತುಕತೆ ವಿವಾದಕ್ಕೆ ಕಾರಣವಾಗಿತ್ತು. ತಂಡವು ಸೋಲು ಕಂಡ ಬಳಿಕ ಗೋಯೆಂಕಾ ಅವರು ರಾಹುಲ್ ಜೊತೆ ಅಸಮಾಧಾನದಿಂದ ಮಾತನಾಡುತ್ತಿರುವುದು ಕಂಡು ಬಂದಿತ್ತು. ಈ ವಿಡಿಯೋ ಕ್ಲಿಪ್ ವೈರಲ್ ಆದ ಬಳಿಕ ಎಲ್ಎಸ್ ಜಿ ಮಾಲಿಕರ ವರ್ತನೆಗೆ ಭಾರೀ ಟೀಕೆ ಎದುರಾಗಿದೆ.
ಈ ಘಟನೆಯ ಬಳಿಕ ಕೆಎಲ್ ರಾಹುಲ್ ನೊಂದಿದ್ದಾರೆ, ಅವರು ಲಕ್ನೋ ತಂಡದ ನಾಯಕತ್ವದಿಂದ ಕೆಳಕ್ಕೆ ಇಳಿಯಲಿದ್ದಾರೆ. ಮುಂದಿನ ಸೀಸನ್ ನಲ್ಲಿ ಲಕ್ನೋ ತಂಡವನ್ನೇ ತೊರೆಯಲಿದ್ದಾರೆ ಎಂದೆಲ್ಲಾ ವರದಿಯಾಗಿತ್ತು. ಅಲ್ಲದೆ ಡೆಲ್ಲಿ ವಿರುದ್ದದ ಪಂದ್ಯಕ್ಕಾಗಿ ಅವರು ತಂಡದೊಂದಿಗೆ ಪ್ರಯಾಣಿಸಿಲ್ಲ ಎಂದೂ ಹೇಳಲಾಗಿತ್ತು. ಆದರೆ ಇದೀಗ ಅಸಮಾಧಾನ ಬಗೆಹರಿದಂತೆ ತೋರುತ್ತಿದೆ.
ಸಂಜೀವ್ ಗೋಯೆಂಕಾ ಅವರು ಸೋಮವಾರ, ಮೇ 13 ರಂದು ದೆಹಲಿಯ ಅವರ ನಿವಾಸದಲ್ಲಿ ಕೆಎಲ್ ರಾಹುಲ್ ಅವರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದಾರೆ. ದೆಹಲಿ ವಿರುದ್ಧ ಎಲ್ಎಸ್ ಜಿಯ ನಿರ್ಣಾಯಕ ಪಂದ್ಯಕ್ಕೆ ಒಂದು ದಿನ ಮೊದಲು ಔತಣಕೂಟವು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಜೀವ್ ಗೋಯೆಂಕಾ ಅವರು ಕೆಎಲ್ ರಾಹುಲ್ ಅವರನ್ನು ಅಪ್ಪಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ರಾಹುಲ್- ಗೋಯೆಂಕಾ ಮಾತುಕತೆಯ ಬಗ್ಗೆ ಸಹಾಯಕ ಕೋಚ್ ಲ್ಯಾನ್ಸ್ ಕ್ಲೂಸ್ನರ್ ಅವರು ಅದು ಇಬ್ಬರು ಕ್ರಿಕೆಟ್ ಪ್ರೇಮಿಗಳ ನಡುವಿನ ಚರ್ಚೆ ಎಂದಿದ್ದರು.
“ಇಬ್ಬರು ಕ್ರಿಕೆಟ್ ಪ್ರೇಮಿಗಳ ನಡುವಿನ ಚರ್ಚೆಯಿಂದ ನನಗೆ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ. ನಾವು ಚರ್ಚೆಯನ್ನು ಪ್ರೀತಿಸುತ್ತೇವೆ. ತಂಡಗಳು ಹಾಗೆಯೇ ಉತ್ತಮಗೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಅದು ನಮಗೆ ದೊಡ್ಡ ವಿಷಯ ಅಲ್ಲ” ಎಂದು ಕ್ಲೂಸ್ನರ್ ಸೋಮವಾರ ದೆಹಲಿಯಲ್ಲಿ ಹೇಳಿದರು.