Advertisement

“ನೀನ್ಯಾಕೆ ಪದವಿ ಮುಗಿಸಬಾರದು!”; ಕೆ.ಎಲ್‌.ರಾಹುಲ್‌ ಗೆ ಈಗಲೂ ತಾಯಿ ಕೇಳುವ ಪ್ರಶ್ನೆ

09:24 AM Mar 31, 2022 | Team Udayavani |

ಭಾರತ ಕ್ರಿಕೆಟ್‌ ತಂಡದ ಉಪನಾಯಕ ಕೆ.ಎಲ್‌.ರಾಹುಲ್‌ ಸದ್ಯ ಲಕ್ನೋ ಸೂಪರ್‌ ಜೈಂಟ್ಸ್‌ ಐಪಿಎಲ್‌ ತಂಡದ ನಾಯಕರಾಗಿದ್ದಾರೆ. ಅವರು ಬ್ರೇಕ್‌ಫಾಸ್ಟ್‌ ವಿಥ್‌ ಚಾಂಪಿಯನ್ಸ್‌ ಎಂಬ ಚಾಟ್‌ ಶೋನಲ್ಲಿ ಒಂದಷ್ಟು ವಿಶೇಷ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ತಮಾಷೆಯಂತಿದ್ದರೂ ಈ ಸಂಗತಿಗಳು ಪ್ರತಿಯೊಬ್ಬರಿಗೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವಂತೆ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತವೆ. ಓದಿಕೊಳ್ಳಿ…

Advertisement

ನೀನ್ಯಾಕೆ ಡಿಗ್ರಿ ಮುಗಿಸಬಾರದು?

ನನ್ನ ತಾಯಿ ಈಗಲೂ ನೀನು ಪದವಿ ಪೂರೈಸಿಲ್ಲ ಎಂದು ಬೈಯ್ಯುತ್ತಾರೆ. ಕೊರೊನಾ ಕಾರಣಕ್ಕೆ ಲಾಕ್‌ಡೌನ್‌ ಆಗಿದ್ದಾಗ, ನೀನ್ಯಾಕೆ ಪಟ್ಟುಹಿಡಿದು ಕೂತು ಓದಬಾರದು? ಇನ್ನೂ ಬಾಕಿಯಿರುವ 30 ವಿಷಯಗಳನ್ನು ಓದಿ ಮುಗಿಸಲು ಏನು ಕಷ್ಟ? ಅನುತ್ತೀರ್ಣಗೊಂಡಿರುವ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ ಪದವಿ ಮುಗಿಸಬಹುದಲ್ಲ? ಎಂದು ಕೇಳಿದ್ದರು. ಆಗದಕ್ಕೆ ನಾನು, ಅಮ್ಮಾ ನಾನೇನು ಮಾಡಬೇಕು ಹೇಳು? ನಾನು ಕ್ರಿಕೆಟ್‌ ಆಡುತ್ತಿದ್ದೇನೆ, ಪ್ರದರ್ಶನ ಚೆನ್ನಾಗಿಯೇ ಇದೆ. ಈಗ ನಾನು 30 ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೀಬೇಕಾ? ಎಂದು ಪ್ರಶ್ನಿಸಿದ್ದೆ. ಅಮ್ಮಾ ಅಷ್ಟೇ ಸಹಜವಾಗಿ, ಹೌದು ಏನು ತಪ್ಪು ಎಂದರು!

ಆರ್‌ಬಿಐ ಕೆಲಸ ಸಿಕ್ಕಿದ್ದಾಗಲೇ ಅವರು ನಿಜಕ್ಕೂ ಖುಷಿಪಟ್ಟಿದ್ದು!

ನಾನು ಭಾರತ ಕ್ರಿಕೆಟ್‌ ತಂಡಕ್ಕೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ನಮ್ಮಪ್ಪ ಅಮ್ಮ ಬಹಳ ಖುಷಿ ಪಟ್ಟಿರಲಿಲ್ಲ. ಅದಾಗಿ ನಾಲ್ಕು ವರ್ಷ ನಾನು ಕ್ರಿಕೆಟ್‌ ಆಡಿ ಹೆಸರು ಮಾಡಿದ್ದೆ. ಆಮೇಲೆ ನನಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ ಕೆಲಸ ಸಿಕ್ಕಿತು. ನನಗೆ ಕೇಂದ್ರ ಸರ್ಕಾರದ ನೌಕರಿ ಸಿಕ್ಕಿದ್ದಾಗ ಅವರು ಬಹಳ, ಬಹಳ ಖುಷಿಪಟ್ಟಿದ್ದರು! ಪರ್ವಾಗಿಲ್ಲ ಇನ್ನು ನಿನಗೆ ಒಳ್ಳೆಯ ಸಂಬಳ ಸಿಗುತ್ತದೆ, ಜೀವನದಲ್ಲಿ ಒಂದು ನೆಲೆ ಕಂಡುಕೊಂಡೆ ಎಂಬಂತಿತ್ತು ಅವರ ಭಾವ. ಅವರು ಕ್ರೀಡಾಪಟುಗಳನ್ನು ಗೌರವಿಸುತ್ತಾರೆ. ಆದರೆ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ.

Advertisement

ಇದನ್ನೂ ಓದಿ:ಇಂದು ಸೋತವರ ಸೆಣಸಾಟ: ಚೆನ್ನೈ ಸೂಪರ್‌ ಕಿಂಗ್ಸ್‌-ಲಕ್ನೋ ಸೂಪರ್‌ ಜೈಂಟ್ಸ್‌

ವಿಜ್ಞಾನ ತೆಗೆದುಕೊಂಡರೆ ಕ್ರಿಕೆಟ್‌ ಆಡಲು ಕಷ್ಟ

ನಮ್ಮ ತಂದೆ ವೃತ್ತಿಯಲ್ಲಿ ಪ್ರೊಫೆಸರ್‌, ತಾಯಿಯೂ ಪ್ರೊಫೆಸರ್‌! ನಮ್ಮ ಕುಟುಂಬದಲ್ಲಿ ಯಾರನ್ನೇ ನೋಡಿದರೂ ಒಂದೋ ವೈದ್ಯರಾಗಿರುತ್ತಾರೆ, ಎಂಜಿನಿಯರ್‌ಗಳಾಗಿರುತ್ತಾರೆ ಅಥವಾ ಇನ್ನೇನೋ ದೊಡ್ಡದೊಡ್ಡ ಉದ್ಯೋಗದಲ್ಲಿರುತ್ತಾರೆ. ನಾನೂ ಕೂಡ 10ನೇ ತರಗತಿಯವರೆಗೆ ಉತ್ತಮ ವಿದ್ಯಾರ್ಥಿಯೇ ಆಗಿದ್ದೆ. ಅದು ಮುಗಿದ ಕೂಡಲೇ ಮುಂದಿನ ಶಿಕ್ಷಣಕ್ಕೆ ವಿಜ್ಞಾನವೋ, ವಾಣಿಜ್ಯವೋ ಎಂಬ ಗೊಂದಲ ಶುರುವಾಗಿತ್ತು. ನನ್ನ ಕುಟುಂಬದಲ್ಲಿ ಯಾರೂ, ಎಂದೂ ವಾಣಿಜ್ಯಶಾಸ್ತ್ರ ತೆಗೆದು ಕೊಂಡಿರಲಿಲ್ಲ. ಆ ವಿಷಯ ತೆಗೆದುಕೊಂಡರೆ ಅವಮಾನವೆಂಬಂತೆ ಅವರು ಭಾವಿಸಿದ್ದರು. ಆದರೆ ನಾನು ಮಾತ್ರ ವಿಜ್ಞಾನ ತೆಗೆದುಕೊಂಡು, ಜೊತೆಜೊತೆಗೇ ಕ್ರಿಕೆಟ್‌ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಅವರದನ್ನು ಅರ್ಥ ಮಾಡಿಕೊಂಡರು.

ಹೆಸರಿನ ಬಗ್ಗೆಯೇ ಸುಳ್ಳು ಹೇಳಿದ್ದರು!

ನನಗೆ ರಾಹುಲ್‌ ಅಂತ ಯಾಕೆ ಹೆಸರಿಟ್ಟರು? ಅದಕ್ಕೆ ನನ್ನಮ್ಮ ಒಂದು ಕತೆಯನ್ನೇ ಹೇಳಿದ್ದರು! ಅವರು ಶಾರುಖ್‌ ಖಾನ್‌ರ ದೊಡ್ಡ ಅಭಿಮಾನಿ. 90ರ ದಶಕದಲ್ಲಿ ಶಾರುಖ್‌ ಅವರ ಪಾತ್ರಗಳಿಗೆಲ್ಲ ರಾಹುಲ್‌ ಹೆಸರೇ ಇರುತ್ತಿತ್ತು. ಹಾಗಾಗಿ ನನಗೂ ಅದೇ ಹೆಸರು ಇಡಲಾಯಿತು. ಹೀಗೆಂದು ತಾಯಿ ಹೇಳಿದ್ದನ್ನೇ ನಾನು ನಂಬಿಕೊಂಡಿದ್ದೆ. ಇದನ್ನು ನನ್ನ ಗೆಳೆಯನೊಬ್ಬನಿಗೆ ಹೇಳಿದೆ. ಅವನು ಬಾಲಿವುಡ್‌ ಸಿನಿಮಾಗಳನ್ನು ವಿಪರೀತ ನೋಡುತ್ತಾನೆ. ಅವನೊಮ್ಮೆ, ಶಾರುಖ್‌ ಅವರು ರಾಹುಲ್‌ ಹೆಸರಿನಲ್ಲಿ ಮೊದಲ ಪಾತ್ರ ಮಾಡಿದ್ದು 1994ರಲ್ಲಿ. ನೀನು ಹುಟ್ಟಿದ್ದು 1992ರಲ್ಲಿ. ಹಾಗಾಗಿ ಆ ಹೆಸರನ್ನು ನಿನಗೆ ಇಡಲು ಹೇಗೆ ಸಾಧ್ಯ ಎಂದು ಕೇಳಿದ! ನನಗೂ ಅದು ಹೌದೆಂದು ಖಾತ್ರಿಯಾಯಿತು. ಕಡೆಗೆ ಅಮ್ಮನಲ್ಲೂ ಅದನ್ನೇ ಕೇಳಿದೆ. ಅವರದಕ್ಕೆ ಸರಳವಾಗಿ, ಹಾಗೇನೋ ಇರಬಹುದು, ಅದಕ್ಕೆಲ್ಲ ಈಗ ಯಾರು ತಲೆಕೆಡಿಸಿಕೊಳ್ಳುತ್ತಾರೆ ಎಂದುಬಿಟ್ಟರು. ಇನ್ನು ನಮ್ಮಪ್ಪ ನನ್ನ ಹೆಸರಿನ ಬಗ್ಗೆ ಇನ್ನೊಂದು ಕಥೆಯನ್ನೇ ಹೇಳಿದರು. ಅವರು ಸುನೀಲ್‌ ಗಾವಸ್ಕರ್‌ ಅಭಿಮಾನಿ. ಗಾವಸ್ಕರ್‌ ತಮ್ಮ ಪುತ್ರನಿಗೆ ರೋಹನ್‌ ಎಂದು ಹೆಸರಿಟ್ಟಿದ್ದರು. ಆದ್ದರಿಂದ ನನಗೂ ಅದೇ ಹೆಸರನ್ನಿಡಲು ಅಪ್ಪ ಬಯಸಿದ್ದರಂತೆ! ಆದರೆ ಅವರು ರೋಹನ್‌ ಹೆಸರನ್ನು ರಾಹುಲ್‌ ಎಂದು ತಪ್ಪು ತಿಳಿದು ಹಾಗೆಯೇ ಹೆಸರಿಟ್ಟರಂತೆ!

Advertisement

Udayavani is now on Telegram. Click here to join our channel and stay updated with the latest news.

Next