Advertisement

ರಾಹುಲ್‌, ದೀಪ್ತಿ ಶರ್ಮ: ವಿಸ್ಡನ್‌ ವರ್ಷದ ಕ್ರಿಕೆಟಿಗರು

07:30 AM Mar 17, 2018 | |

ಲಂಡನ್‌: ಟೀಮ್‌ ಇಂಡಿಯಾ ಕ್ರಿಕೆಟಿಗ, ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಪ್ರತಿಷ್ಠಿತ ವಿಸ್ಡನ್‌ ಗೌರವಕ್ಕೆ ಪಾತ್ರರಾಗಿದ್ದಾರೆ. 2018ನೇ ಸಾಲಿನ ಭಾರತೀಯ ಆವೃತ್ತಿಯ ವಿಸ್ಡನ್‌ ವಾರ್ಷಿಕಾಂಕದ “ವರ್ಷದ ಕ್ರಿಕೆಟಿಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವನಿತಾ ವಿಭಾಗದಲ್ಲಿ ಈ ಗೌರವ ದೀಪ್ತಿ ಶರ್ಮ ಪಾಲಾಗಿದೆ.

Advertisement

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಆಟಗಾರ ಹಾಗೂ ಅತ್ಯಂತ ಯಶಸ್ವಿ ಅಂತಾರಾಷ್ಟ್ರೀಯ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಕೊಹ್ಲಿ ಸಾಧನೆಯನ್ನು ಸಂಪಾದಕ ಸುರೇಶ್‌ ಮೆನನ್‌ ತಮ್ಮ ಸಂಪಾದಕೀಯದಲ್ಲೂ ಪ್ರಶಂಸಿಸಿದ್ದಾರೆ.

2018ರ ವಿಸ್ಡನ್‌ ವಾರ್ಷಿಕಾಂಕ ಈಗಾಗಲೇ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಕಳೆದ ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯವೊಂದರ ವೇಳೆ ಸಂಭ್ರಮವನ್ನು ಆಚರಿಸುತ್ತಿರುವ ಭಾರತೀಯ ಆಟಗಾರ್ತಿಯರ ಆಕರ್ಷಕ ಮುಖಪುಟವನ್ನು ಹೊಂದಿದೆ. ವನಿತಾ ಕ್ರಿಕೆಟ್‌ ಕುರಿತಾದ ವಿಶೇಷ ಲೇಖನವನ್ನೂ ಇದು ಹೊಂದಿದ್ದು, ಮಿಥಾಲಿ ರಾಜ್‌ ಭಾರತೀಯ ಕ್ರಿಕೆಟಿನ ವ್ಯಾಕರಣವನ್ನೇ ಬದಲಿಸಿದರು ಎಂದು ಪ್ರಶಂಸಿಸಲಾಗಿದೆ. ವರ್ಷದ ಕ್ರಿಕೆಟ್‌ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾದ ದೀಪ್ತಿ ಶರ್ಮ 2017ರ ಐಸಿಸಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

ಕನ್ನಡಿಗರಿಗೆ ಗೌರವ
ಭಾರತೀಯ ಕ್ರಿಕೆಟಿನ ಪ್ರಪ್ರಥಮ ಸೂಪರ್‌ಸ್ಟಾರ್‌ ಎಂಬ ಖ್ಯಾತಿಯ, ಭಾರತ ತಂಡದ ಪ್ರಥಮ ನಾಯಕಿ ಎಂಬ ಹೆಗ್ಗಳಿಕೆಯ ಶಾಂತಾ ರಂಗಸ್ವಾಮಿ ಮತ್ತು ಸ್ಪಿನ್‌ ಲೆಜೆಂಡ್‌ ಇಎಎಸ್‌ ಪ್ರಸನ್ನ ಅವರನ್ನು “ವಿಸ್ಡನ್‌ ಹಾಲ್‌ ಆಫ್ ಫೇಮ್‌’ ಪ್ರಶಸ್ತಿಗೆ ಆರಿಸಲಾಗಿದೆ. ಇವರಿಬ್ಬರೂ ಕರ್ನಾಟಕದ ಕ್ರಿಕೆಟಿಗರೆಂಬುದು ಹೆಮ್ಮೆಯ ಸಂಗತಿ. 

ಇಯಾನ್‌ ಚಾಪೆಲ್‌, ಶೆಹಾನ್‌ ಕರುಣತಿಲಕ, ಸೈಮನ್‌ ಬಾರ್ನೆಸ್‌, ಶಾರದಾ ಉಗ್ರಾ, ಸಮಂತ್‌ ಸುಬ್ರಹ್ಮಣಿಯನ್‌, ಬಿ.ಎಸ್‌. ಚಂದ್ರಶೇಖರ್‌, ಪಾರ್ಥ ಚಟರ್ಜಿ ಮೊದಲಾದವರ ಲೇಖನ/ಪ್ರಬಂಧಗಳನ್ನು ಒಳಗೊಂಡ ಈ ಆವೃತ್ತಿ 900 ಪುಟಗಳನ್ನು ಹೊಂದಿದ್ದು, ಹಿಂದಿನ ಆವೃತ್ತಿಗಳ ಗುಣಮಟ್ಟವನ್ನೇ ಕಾಯ್ದುಕೊಂಡಿದೆ. ಇದು ವಿಸ್ಡನ್‌ ಇಂಡಿಯಾದ ಆರನೇ ಆವೃತ್ತಿ ಆಗಿದೆ. ಆನ್‌ಲೈನ್‌ನಲ್ಲೂ ಇದರ ಪ್ರತಿಗಳನ್ನು ಖರೀದಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next