Advertisement

ಕೆಕೆಟಿ ನಕ್ಸಲ್‌: ಕಟ್ಟೆಚ್ಚರಕ್ಕೆ ಸೂಚನೆ

09:59 AM Nov 26, 2019 | Team Udayavani |

ಬೆಂಗಳೂರು: ಛತ್ತೀಸ್‌ಗಢದ ದಕ್ಷಿಣ ಬಸ್ತಾರ್‌ ಪ್ರದೇಶದ ಮಾದರಿಯಲ್ಲಿಯೇ ಕರ್ನಾಟಕ, ಕೇರಳ ಮತ್ತು ತಮಿಳುನಾಡು(ಕೆಕೆಟಿ) ಅರಣ್ಯ ಪ್ರದೇಶಗಳಲ್ಲಿ ಕೆಲವು ನಕ್ಸಲ್‌ ಗುಂಪು ತಮ್ಮ ನೆಲೆ ಕಂಡುಕೊಳ್ಳಲು ಹವಣಿಸುತ್ತಿದೆ ಎಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯನ್ನು ರಾಜ್ಯ ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

Advertisement

ಒಂದು ಹಂತದಲ್ಲಿ ರಾಜ್ಯದಲ್ಲಿ ನಕ್ಸಲರ ಅಟ್ಟಹಾಸಕ್ಕೆ ಕಡಿವಾಣ ಹಾಕಿರುವ ರಾಜ್ಯ ಪೊಲೀಸ್‌ ಇಲಾಖೆ ಈಗ ಯಾವುದೇ ಕಾರಣಕ್ಕೂ ನಕ್ಸಲರು ತಮ್ಮ ವ್ಯಾಪ್ತಿಯಲ್ಲಿ ನೆಲೆಯೂರದಂತೆ ವಿಶೇಷ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ. ಹೀಗಾಗಿ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್) ಮತ್ತು ಜಿಲ್ಲಾ ಮಟ್ಟದಲ್ಲಿರುವ ನಕ್ಸಲ್‌ ನಿಗ್ರಹ ವಿಭಾಗ (ಎಎನ್‌ಎಸ್‌)ಕ್ಕೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಪೊಲೀಸ್‌ ನೇತೃತ್ವದಲ್ಲಿ ಬಂದು ಮುಖ್ಯವಾಹಿನಿಗೆ ಸೇರಿದ ನಕ್ಸಲರ ಮೇಲೂ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ. ಅವರಿಗೂ ಸಕ್ರಿಯ ನಕ್ಸಲರಿಗೂ ನಂಟಿದೆಯೇ ಎಂದು ಗಮನಿಸಲಾಗುತ್ತಿದೆ. ನಕ್ಸಲ್‌ ಪರ ನಿಲುವುಳ್ಳ ವ್ಯಕ್ತಿಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕರ್ನಾಟಕ ಮೂಲದ, ಈಗ ಭೂಗತನಾಗಿರುವ ನಕ್ಸಲ್‌ ವಿಕ್ರಮ್‌ ಗೌಡ ಮತ್ತು ತಂಡ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿದೆಯೇ ಎಂಬ ಬಗ್ಗೆ ಹಾಗೂ ಆತನ ಕೇರಳ ನಂಟಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ರಾಜ್ಯ ಪೊಲೀಸರು ಕೇರಳ ಗುಪ್ತಚರ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ರಾಜ್ಯದ ಎಎನ್‌ಎಫ್ ಮತ್ತು ಎಎನ್‌ಎಸ್‌ಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ನಕ್ಸಲರು ಓಡಾ ಡುವ ಪ್ರದೇಶಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಕ್ಸಲರ ಬಗ್ಗೆ ಅರಿವು ಮೂಡಿಸಬೇಕು. ಭಿತ್ತಿಪತ್ರ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ನಕ್ಸಲರು ನಿರ್ದಿಷ್ಟ ವಿಚಾರ ಇಟ್ಟುಕೊಂಡು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೋಗಿ ಹೋರಾಡುತ್ತಾರೆ. ಆದರೆ ಈ ಬಾರಿ ಅಂತಹ ವಿಚಾರ ಯಾವುದೂ ಇಲ್ಲ. ಛತ್ತೀಸ್‌ಗಢ, ಆಂಧ್ರದಲ್ಲಿ ಪೊಲೀಸರು ನಿರಂತರವಾಗಿ ಬೆನ್ನು ಬಿದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ಕಡೆ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ನಕ್ಸಲರ ಸಂಖ್ಯೆ ಕಡಿಮೆಯಿದ್ದು, ಕೆಲ ವುದಿನಗಳಲ್ಲಿ 200-300 ಮಂದಿಯ ಪ್ರತ್ಯೇಕ ತಂಡ ಕಟ್ಟಿ ನಿರ್ದಿಷ್ಟ ವಿಚಾರದ ಬಗ್ಗೆ ಹೋರಾಟ ನಡೆಸಲು ಸಿದ್ಧತೆ ನಡೆಸಿದ್ದಾರೆ. ಜತೆಗೆ ಕೇರಳದ ಕೆಲ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಈ ಹೋರಾಟಕ್ಕೆ ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ನೆಲೆಯೂರಲು ಮುಂದಾಗಿವೆ ಎಂಬುದು ಗೊತ್ತಾಗಿದೆ.

Advertisement

ಪಶ್ಚಿಮ ಘಟ್ಟಕ್ಕೆ ಪ್ರವೇಶ ?
ಮೂಲಗಳ ಪ್ರಕಾರ ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಅಂತಹ ಯಾವುದೇ ಪ್ರಭಾವಿ ನಕ್ಸಲ್‌ ಗುಂಪು ಇಲ್ಲ. ಆದರೆ ರಾಜ್ಯದಲ್ಲಿ ಸಕ್ರಿಯವಾಗಿ ಈಗ ಕೇರಳದ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವ ತಂಡದ ಜತೆ ಕೈಜೋಡಿಸಲು ಆಂಧ್ರಪ್ರದೇಶ, ಒಡಿಶಾ, ಛತ್ತೀಸ್‌ಗಢ ವ್ಯಾಪ್ತಿಯಲ್ಲಿರುವ ನಕ್ಸಲರು ಮುಂದಾಗಿದ್ದು, ಕೆಲವರ ಜತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಪಶ್ಚಿಮ ಘಟ್ಟದ ದಟ್ಟಾರಣ್ಯ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುವ ನಕ್ಸಲರು ಕಾರ್ಕಳ, ಕುದುರೆಮುಖ, ಮಡಿಕೇರಿ, ಉಡುಪಿ, ಕುಂದಾಪುರ ವ್ಯಾಪ್ತಿಯಲ್ಲಿ ಕೆಲವು ದಿನಗಳ ಕಾಲ ನೆಲೆಸಿ, ಅನಂತರದ ದಿನಗಳಲ್ಲಿ ಮಡಿಕೇರಿ, ಕಾರ್ಕಳ ಮಾರ್ಗವಾಗಿ ಕೇರಳ ಪ್ರವೇಶಿಸಲು ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next